BHARAT NCAP ಪ್ರಾರಂಭ: ಕಾರು ತಯಾರಕರಿಗೆ ಅಗ್ನಿ ಪರೀಕ್ಷೆ! ಮುಲಾಜಿಲ್ಲ, ತಲೆ ಬಾಗಲೇಬೇಕು ಪ್ರತಿ ಕಂಪನಿ
ಕೊನೆಗೂ ಭಾರತದ ಆಟೋ ವಲಯ ಹೊಸ ಯುಗಕ್ಕೆ ಕಾಲಿಟ್ಟಿದೆ. ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (BHARAT NCAP) ಪ್ರಾರಂಭದೊಂದಿಗೆ ಅಮೆರಿಕಾ, ದಕ್ಷಿಣ ಕೊರಿಯಾ, ಚೀನಾ, ಜಪಾನ್ ನಂತರ ಮೀಸಲಾದ ಕಾರು ಸುರಕ್ಷತೆ ಕಾರ್ಯಕ್ರಮವನ್ನು ಹೊಂದಿರುವ ದೇಶವಾಗಿ ಭಾರತ ವಿಶ್ವದ ಐದನೇ ದೇಶವಾಗಿ ಹೊರಹೊಮ್ಮಿದೆ.
ಭಾರತ್ ಎನ್‌ಸಿಎಪಿ ಪ್ರಾರಂಭವು ದೇಶದಲ್ಲಿ ಮೋಟಾರು ವಾಹನಗಳ ಸುರಕ್ಷತಾ ಮಾನದಂಡಗಳನ್ನು 3.5 ಟನ್ ತೂಕದ ವಾಹನಗಳವರೆಗೆ ಹೆಚ್ಚಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಇನ್ಮುಂದೆ ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳುವ 3.5 ಟನ್ ಅಥವಾ ಅದಕ್ಕಿಂತ ಕಡಿಮೆ ತೂಕದ ವಾಹನಗಳು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಗಾಗಬೇಕಾಗುತ್ತದೆ.

ಈ ಕುರಿತು ಟ್ವಿಟ್ ಮಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಭಾರತದಲ್ಲಿ 3.5-ಟನ್ ತೂಕದ ವಾಹನಗಳಿಗೆ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ BHARAT NCAP ಅನ್ನು ನವದೆಹಲಿಯಲ್ಲಿ ಪ್ರಾರಂಭಿಸಲಾಗಿದೆ. ಸುರಕ್ಷಿತ ಕಾರುಗಳನ್ನು ಖರೀದಿಸುವ ಸಲುವಾಗಿ ಉತ್ತಮ ಆಯ್ಕೆ ಮಾಡಲು ಸಾಧ್ಯವಾಗುವಂತೆ ನಮ್ಮ ಗ್ರಾಹಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇದು ಒಂದು ಹೆಗ್ಗುರುತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ್ ಎನ್‌ಸಿಎಪಿ ಕಾರ್ಯಕ್ರಮವು ಈಗಾಗಲೇ ವಿವಿಧ ವಾಹನ ಕಂಪನಿಗಳಿಂದ 30 ಕ್ಕೂ ಹೆಚ್ಚು ಪರೀಕ್ಷಾ ವಿನಂತಿಗಳನ್ನು ಪಡೆದಿದೆ. ಭಾರತ್ ಎನ್‌ಸಿಎಪಿ ಉಪಕ್ರಮವನ್ನು ಸ್ವೀಕರಿಸಿದ್ದಕ್ಕಾಗಿ ಆಟೋ ವಲಯದ ಬಗ್ಗೆ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದ ಸಚಿವ ನಿತಿನ್ ಗಡ್ಕರಿ ಅವರು, ವಾಹನ ಸುರಕ್ಷತೆಯ ಹೊರತಾಗಿ ರಸ್ತೆ ಎಂಜಿನಿಯರಿಂಗ್‌ನ ಪ್ರಮುಖ ಅಂಶವನ್ನು ಸಹ ಸಚಿವಾಲಯವು ತಿಳಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಭಾರತ್ ಎನ್‌ಸಿಎಪಿ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ, ಈ ಭಾರತ್ ಎನ್‌ಸಿಎಪಿ ಕಾರುಗಳನ್ನು ಹೇಗೆ ಪರೀಕ್ಷಿಸುತ್ತದೆ. ಪರೀಕ್ಷೆಯ ನಂತರ ಹೇಗೆ ಅಂಕಗಳನ್ನು ನೀಡುತ್ತದೆ, ಈ ಕ್ರ್ಯಾಶ್ ಸುರಕ್ಷತಾ ಕಾರ್ಯಕ್ರಮದ ವ್ಯಾಪ್ತಿಯಲ್ಲಿರುವ ಮಾದರಿಗಳು ಯಾವುವು ಹಾಗೂ ಪರೀಕ್ಷೆ ಮಾಡಲು ಕಾರುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.
ಕಾರುಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ: ವಾಹನ ತಯಾರಕರು ತಮ್ಮ ಕಾರು ಮಾದರಿಗಳನ್ನು ಕ್ರ್ಯಾಶ್ ಟೆಸ್ಟ್ ಮತ್ತು ಸುರಕ್ಷತೆಯ ಮೌಲ್ಯಮಾಪನಕ್ಕಾಗಿ ಸ್ವಯಂಪ್ರೇರಣೆಯಿಂದ ಸಲ್ಲಿಸಬಹುದು ಅಥವಾ ಕ್ರ್ಯಾಶ್ ಟೆಸ್ಟಿಂಗ್ ಮತ್ತು ಸುರಕ್ಷತೆಯ ಮಟ್ಟವನ್ನು ಮೌಲ್ಯಮಾಪನ ಮಾಡಲು ಶೋರೂಮ್‌ಗಳಿಂದ ಕಾರು ಮಾದರಿಗಳನ್ನು ಸ್ವತಂತ್ರವಾಗಿ ಸ್ವಾಧೀನಪಡಿಸಿಕೊಳ್ಳುವ ಅಧಿಕಾರವನ್ನು ಭಾರತ್ ಎನ್‌ಸಿಎಪಿ ಹೊಂದಿದೆ.

ಕ್ರ್ಯಾಶ್ ಟೆಸ್ಟ್ ಮಾಡಿದ ನಂತರ, ಅಧಿಕಾರಿಗಳು ಆಯಾ ಕಂಪನಿಗಳಿಗೆ ಫಲಿತಾಂಶಗಳನ್ನು ತಿಳಿಸುತ್ತಾರೆ. ತಯಾರಕರು ಅಗತ್ಯವೆಂದು ಭಾವಿಸಿದರೆ ಮರುಮೌಲ್ಯಮಾಪನವನ್ನು ವಿನಂತಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದು ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತ್ ಎನ್‌ಸಿಎಪಿ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳಿಗೂ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರುತ್ತದೆ. ಇವುಗಳ ಮೌಲ್ಯಮಾಪನವು ಯುರೋಪ್‌ನಲ್ಲಿ EV ಗಳಿಗೆ ನೀಡಲಾಗುವ ಗ್ರೀನ್ NCAP ಯಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತ್ NCAP ಅಡಿಯಲ್ಲಿ ಯಾವ ಕಾರುಗಳು ಇರುತ್ತವೆ: ಚಾಲಕ ಸೇರಿದಂತೆ ಎಂಟು ಪ್ರಯಾಣಿಕರನ್ನು ಹೊಂದಿರುವ ಮಾದರಿಗೆ ಅನುಮೋದನೆ ಹೊಂದಿರುವ ವಾಹನಗಳಿಗೆ ಅನ್ವಯಿಸುತ್ತದೆ. ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳುವ 3.5 ಟನ್ ಅಥವಾ ಅದಕ್ಕಿಂತ ಕಡಿಮೆ ತೂಕದ ವಾಹನಗಳು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಗಾಗಬೇಕಾಗುತ್ತದೆ.

ಈ ಮೌಲ್ಯಮಾಪನವು ಸಾಮಾನ್ಯವಾಗಿ ಬಳಸುವ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ವಾಹನಗಳಿಗೆ ಅನ್ವಯಿಸುತ್ತದೆ. ಅಂದರೆ ಹ್ಯಾಚ್‌ಬ್ಯಾಕ್‌ಗಳು, ಎಸ್‌ಯುವಿಗಳು, ಸೆಡಾನ್‌ಗಳು ಮತ್ತು ಎಂಪಿವಿಗಳಂತಹ ವಿವಿಧ ವಿಭಾಗಗಳಲ್ಲಿರುವ ಎಲ್ಲಾ ಪ್ರಯಾಣಿಕ ವಾಹನಗಳು ಹೊಸ ಕ್ರ್ಯಾಶ್ ಟೆಸ್ಟ್ ಕಾರ್ಯಕ್ರಮದ ವ್ಯಾಪ್ತಿಯಲ್ಲಿರುತ್ತವೆ ಎಂಬುದನ್ನು ಇಲ್ಲಿ ಗಮನಿಸಬೆಕು.
ಕ್ರ್ಯಾಶ್ ಟೆಸ್ಟ್ ಹೇಗೆ ಮಾಡಲಾಗುತ್ತದೆ: ಭಾರತ್ NCAP ಅಡಿಯಲ್ಲಿ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್ ಫ್ರಂಟಲ್ ಇಂಪ್ಯಾಕ್ಟ್ ಟೆಸ್ಟ್, ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್ ಎಂಬ ಮೂರು ಮುಖ್ಯ ರೀತಿಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಗಳು ವಿವಿಧ ಘರ್ಷಣೆಯ ಸನ್ನಿವೇಶಗಳಲ್ಲಿ ಒಳಗಿರುವ ಪ್ರಯಾಣಿಕರನ್ನು ರಕ್ಷಿಸುವ ನಿರ್ದಿಷ್ಟ ವಾಹನದ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರ್ಣಯಿಸುತ್ತದೆ.

ಭಾರತ್ ಎನ್‌ಸಿಎಪಿ (BHARAT NCAP) ಗ್ಲೋಬಲ್ ಎನ್‌ಸಿಎಪಿ ಮತ್ತು ಪ್ರಪಂಚದಾದ್ಯಂತದ ಇತರ ಕ್ರ್ಯಾಶ್ ಟೆಸ್ಟಿಂಗ್ ಕಾರ್ಯಕ್ರಮಗಳಂತೆಯೇ ಕಾರುಗಳಲ್ಲಿ ಡಮ್ಮಿಗಳೊಂದಿಗೆ (ಡಮ್ಮಿ ಗೊಂಬೆ) ಹಾಗೂ ಸೆನ್ಸಾರ್‌ಗಳೊಂದಿಗೆ ಕ್ರ್ಯಾಶ್ ಟೆಸ್ಟ್ ಮಾಡಲಿದೆ. ಪರೀಕ್ಷೆಯನ್ನು ಮಾಡಿದ ನಂತರ, ಸೆನ್ಸಾರ್‌ಗಳಿಂದ ಸ್ವೀಕರಿಸಿದ ಡೇಟಾದ ಆಧಾರದ ಮೇಲೆ ಫಲಿತಾಂಶವನ್ನು ನಿರ್ಣಯಿಸಲಾಗುತ್ತದೆ.
ಭಾರತ್ NCAP ಅಡಿಯಲ್ಲಿ ಪರೀಕ್ಷಿಸಲಾದ ಕಾರುಗಳ ಸುರಕ್ಷತಾ ರೇಟಿಂಗ್ ಅನ್ನು ವಯಸ್ಕ ಪ್ರಯಾಣಿಕರ ರಕ್ಷಣೆ (AOP) ಮತ್ತು ಮಕ್ಕಳ ರಕ್ಷಣೆ (COP) ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಕಾರುಗಳ ರೇಟಿಂಗ್ ಶೂನ್ಯದಿಂದ ಐದು ಅಂಕಗಳ ನಡುವೆ ಇರುತ್ತದೆ. ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 5 ಸ್ಟಾರ್ ರೇಟಿಂಗ್ ಸಾಧಿಸಲು, ಕಾರು ಕನಿಷ್ಠ 27 ಅಂಕಗಳನ್ನು ಗಳಿಸಬೇಕು. ಹಾಗೆಯೇ ಕನಿಷ್ಠ 41 ಅಂಕಗಳನ್ನು ಗಳಿಸುವ ಮೂಲಕ ಮಕ್ಕಳ ಆಕ್ಯುಪೆಂಟ್ ಪ್ರೊಟೆಕ್ಷನ್ ವಿಭಾಗದಲ್ಲಿ ಕಾರು 5 ಸ್ಟಾರ್ ರೇಟಿಂಗ್ ಪಡೆಯಬೇಕಾಗಿರುತ್ತದೆ.


Click it and Unblock the Notifications