Car Sales May: ದೇಶದಲ್ಲಿ ಮಾರುತಿ ಸುಜುಕಿಯೇ ಫಸ್ಟ್ .. ಜನಪ್ರಿಯ ಟಾಟಾದಿಂದ ಬಿಗ್ ರೆಕಾರ್ಡ್
ವಿಶ್ವದಲ್ಲಿಯೇ ಭಾರತವು ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಹತ್ತಕ್ಕೂ ಹೆಚ್ಚು ಕಂಪನಿ ಕಾರುಗಳು ಮಾರಾಟವಾಗುತ್ತವೆ. ಆದರೆ, ಟಾಪ್ 5ರಲ್ಲಿ ಸ್ಥಾನಪಡೆಯಲು ಕೆಲವೇ ಕಾರು ತಯಾರಕರಿಗೆ ಸಾಧ್ಯವಾಗಿದ್ದು, ಮೇ ತಿಂಗಳ (2023) ಮಾರಾಟ ವರದಿ ಪ್ರಕಟವಾಗಿದ್ದು, ಯಾವ ಕಂಪನಿ ಎಷ್ಟು ಕಾರು ಸೇಲ್ ಮಾಡಿದೆ. ಇಲ್ಲಿದೆ ಮಾಹಿತಿ.
ಮೊದಲಿಗೆ ದೇಶದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿ ಎಷ್ಟು ಕಾರುಗಳು ಮಾರಾಟವಾಗಿವೆ ಎಂಬುದನ್ನು ತಿಳಿಯೋಣ. ಬರೊಬ್ಬರಿ 3,34,499 ಯುನಿಟ್ ಕಾರುಗಳು ಸೇಲ್ ಆಗಿದ್ದು, ವರ್ಷದಿಂದ ವರ್ಷಕ್ಕೆ (YoY) 13.7% ಬೆಳವಣಿಗೆಯಾಗಿದೆ. ಕಳೆದ ವರ್ಷದ (2022) ಇದೇ ಮೇ ತಿಂಗಳಲ್ಲಿ ಎಲ್ಲ ಕಂಪನಿಗಳು ಒಟ್ಟು 2,94,088 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದವು.

ಎಂದಿನಂತೆ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಮೇ ತಿಂಗಳಲ್ಲಿ (2023) 1,43,708 ಯುನಿಟ್ ಸೇಲ್ ಮಾಡಿ, ಕಳೆದ ವರ್ಷದ ಇದೇ ಅವಧಿಗೆ (1,24,474 ಯುನಿಟ್) ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 15.5% ಪ್ರಗತಿ ಸಾಧಿಸಿದೆ. ಕಂಪನಿಯು ಈ ಮಟ್ಟಿಗೆ ಯಶಸ್ಸುಗಳಿಸಲು ಕಾರಣ, ಅದರ ಜನಪ್ರಿಯ ಕಾರು ಮಾದರಿಗಳಾದ ಬಲೆನೊ, ಸ್ವಿಫ್ಟ್ ಬ್ರೆಝಾ, ಫ್ರಾಂಕ್ಸ್ ಹಾಗೂ ಗ್ರ್ಯಾಂಡ್ ವಿಟಾರಾ.
ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿ ಹುಂಡೈ ಇದ್ದು, ಕಳೆದ ತಿಂಗಳು 48,601 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, 2022ರ ಮೇ ತಿಂಗಳಿಗೆ (42,293 ಯುನಿಟ್) ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 14.9% ಬೆಳವಣಿಗೆ ಸಾಧಿಸಿದೆ. ನಾನೇನು ಕಮ್ಮಿ ಇಲ್ಲ ಎಂಬಂತೆ ಟಾಟಾ ಕೂಡ ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ಸೇಲ್ ಮಾಡಿದ್ದು, ಕೆಲವೇ ದಿನಗಳಲ್ಲಿ ಎರಡನೇ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ.
| Rank | Brand | May'23 | May'22 | Growth (%) |
| 1 | Maruti Suzuki | 1,43,708 | 1,24,474 | 15.5 |
| 2 | Hyundai | 48,601 | 42,293 | 14.9 |
| 3 | Tata | 45,880 | 43,341 | 5.9 |
| 4 | Mahindra | 32,883 | 26,650 | 23.4 |
| 5 | Kia | 18,766 | 18,718 | 0.3 |
| 6 | Toyota | 19,379 | 10,216 | 89.7 |
| 7 | Honda | 4,660 | 8,188 | -43.1 |
| 8 | MG | 5,006 | 4,008 | 24.9 |
| 9 | Renault | 4,625 | 5,010 | -7.7 |
| 10 | Skoda | 3,547 | 4,604 | -23 |
ಟಾಟಾ ಮೋಟಾರ್ಸ್, ಮೇ ತಿಂಗಳು 45,880 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಶೇಕಡ 5.9% ಪ್ರಗತಿ ಸಾಧಿಸಿದೆ. 2022ರಲ್ಲಿ 43,341 ಯುನಿಟ್ ಕಾರುಗಳನ್ನು ಸೇಲ್ ಮಾಡಿತ್ತು. ಕಂಪನಿಯು ಈ ಮಟ್ಟಿಗೆ ಬೆಳವಣಿಗೆ ಕಾಣಲು ಅದರ ಬಲವಾದ ಲೈನ್ಅಪ್ ಕಾರಣವಾಗಿದ್ದು, ಪಂಚ್, ನೆಕ್ಸನ್, ಟಿಯಾಗೊ ಹಾಗೂ ಟಿಗೂರ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದು ಕಂಪನಿಗೆ ವರದಾನವಾಗಿದೆ. ಆದರೂ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಗಿದೆ.
ಈ ಮೇ ತಿಂಗಳ ಮಾರಾಟದಲ್ಲೂ ಮಹೀಂದ್ರಾ ಕಂಪನಿ ನಾಲ್ಕನೇ ಸ್ಥಾನದಲ್ಲಿ ಇದ್ದರೂ, ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. 2022ರ ಮೇ ತಿಂಗಳಿಗೆ (26,650 ಯುನಿಟ್) ಹೋಲಿಸಿದರೆ, ಈ ಮೇ ತಿಂಗಳಲ್ಲಿ 32,883 ಯುನಿಟ್ ಸೇಲ್ ಮಾಡಿ, 23.4% ಪ್ರಗತಿ ಕಂಡಿದೆ. ಇದಕ್ಕೆ ಸ್ಕಾರ್ಪಿಯೋ ಎನ್, XUV700 ಮತ್ತು ಥಾರ್ ಎಸ್‌ಯುವಿಗಳು ದೊಡ್ಡಮಟ್ಟದ ಬೇಡಿಕೆ ಪಡೆದಿರುವುದು ಕಾರಣವಾಗಿದ್ದು, ಕಂಪನಿಯು 2.5 ಲಕ್ಷಕ್ಕೂ ಹೆಚ್ಚಿನ ಆರ್ಡರ್ ಪೂರೈಸಬೇಕಾಗಿದೆ.
ಕಿಯಾ ಮಾತ್ರ ತನ್ನ ಐದನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ಮೇ ತಿಂಗಳಲ್ಲಿ 18,766 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಶೇಕಡ 0.3% ಪ್ರಗತಿ ಸಾಧಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 18,718 ಯುನಿಟ್ ಸೇಲ್ ಮಾಡಿತ್ತು. ಆದರೆ, ಟೊಯೊಟಾ ಕಂಪನಿ ಮಾತ್ರ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದ್ದು, 2022ರ ಮೇ ತಿಂಗಳಿಗೆ ಹೋಲಿಸಿದರೆ (10,216), ಒಟ್ಟು 19,379 ಯುನಿಟ್ ಮಾರಾಟ ಮಾಡುವ ಮೂಲಕ 90% ಪ್ರಗತಿ ಸಾಧಿಸಿದೆ.
ಇನ್ನುಳಿನದಂತೆ ಹೋಂಡಾ, ಎಂಜಿ ಮೋಟಾರ್, ರೆನಾಲ್ಟ್, ಸ್ಕೋಡಾ, ಪೋಕ್ಸ್‌ವ್ಯಾಗನ್ ಹಾಗೂ ನಿಸ್ಸಾನ್ ಕಂಪನಿಗಳು ನಂತರದ ಸ್ಥಾನದಲ್ಲಿವೆ. ಮೇ ತಿಂಗಳ ಮಾರಾಟ ವರದಿಯನ್ನು ನೋಡಿದಾಗ ಎಂದಿನಂತೆ ಮಾರುತಿ ಸುಜುಕಿ ಮೊದಲ ಸ್ಥಾನದಲಿದ್ದು, ಅದರ ಜಾಗವನ್ನು ಯಾವುದೇ ಕಂಪನಿಗಳಿಗೆ ಕಸಿದುಕೊಳ್ಳಲು ಸಾಧ್ಯವಾಗಿಲ್ಲ. ಹುಂಡೈ ಹಾಗೂ ಟಾಟಾ ಕಂಪನಿಗಳು ಜಿದ್ದಾಜಿದ್ದಿಗೆ ಬಿದ್ದಿರುವಂತೆ ಕಾರುಗಳನ್ನು ಮಾರಾಟ ಮಾಡಿವೆ. ಕೆಲವೇ ದಿನಗಳಲ್ಲಿ ಟಾಟಾ ಎರಡನೇ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ.


Click it and Unblock the Notifications