Citroen C3: ಅಗ್ಗದ ಬೆಲೆಯ ಸಿಟ್ರಸ್ ಸಿ3 ಕಾರಿನ ಬೆಲೆ ಮತ್ತೆ ಹೆಚ್ಚಳ.. ಆದ್ರೂ ಇಲ್ಲುಂಟು ಉತ್ತಮ ಅವಕಾಶ
ದೇಶೀಯ ಕಾರು ಮಾರುಕಟ್ಟೆಯಲ್ಲಿ ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರಸ್ (Citroen) ಇತ್ತೀಚಿನ ದಿನದಲ್ಲಿ ಮುನ್ನೆಲೆಗೆ ಬರುತ್ತಿದೆ. ಅದರ ಕೈಗೆಟುಕುವ ಬೆಲೆಯ ಕಾರುಗಳನ್ನು ಬಹುತೇಕರು ಲೈಕ್ ಮಾಡುತ್ತಿದ್ದು, ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ ಕಂಪನಿ ತನ್ನ ಜನಪ್ರಿಯ 'ಸಿ3' ಕಾರಿನ ಬೆಲೆಯನ್ನು ಏರಿಕೆ ಮಾಡಿದೆ ಎಂದು ವರದಿಯಾಗಿದೆ.
ಸಿಟ್ರಸ್ ಕಂಪನಿ ಸಿ3 ಹ್ಯಾಚ್‌ಬ್ಯಾಕ್ ಬೆಲೆಯನ್ನು ಸರಿ ಸುಮಾರು ರೂ.17,500 ಹೆಚ್ಚಳ ಮಾಡಿದೆ. ನೂತನ ದರಗಳು ಮುಂದಿನ ತಿಂಗಳು ಅಂದರೇ ಜುಲೈ 1 ರಿಂದ ಜಾರಿಗೆ ಬರಲಿದೆ. ಆದರೆ, ಗ್ರಾಹಕರು ಈ ತಿಂಗಳು (ಜೂನ್) ಸಿಟ್ರಸ್ ಸಿ3 ಕಾರನ್ನು ಹಳೆಯ ದರಕ್ಕೆ ಖರೀದಿಸಬಹುದು. ಇದೇ ವರ್ಷದ ಜನವರಿ ಹಾಗೂ ಮಾರ್ಚ್ ತಿಂಗಳ ಬಳಿಕ, ಮೂರನೇ ಬಾರಿಗೆ ಬೆಲೆ ಹೆಚ್ಚಳವಾಗಿದೆ.

ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್ ಲೈವ್, ಫೀಲ್ ಹಾಗೂ ಶೈನ್ ಎಂಬ ಮೂರು ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಪ್ರಸ್ತುತ ಈ ಕಾರು, ರೂ.6.16 ಲಕ್ಷದಿಂದ ರೂ.8.92 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತಿದ್ದು, ದರ ಹೆಚ್ಚಳ ಬಳಿಕ, ಟಾಪ್ ಎಂಡ್ ಮಾದರಿ ಬೆಲೆ ರೂ.9 ಲಕ್ಷ ತಲುಪಲಿದೆ. ಕಳೆದ ವರ್ಷ ಸಿಟ್ರಸ್ ಕಂಪನಿ, ಸಿ3 ಹ್ಯಾಚ್‌ಬ್ಯಾಕ್‌ನ್ನು ರೂ.5.71 ಲಕ್ಷದಿಂದ ರೂ.8.06 ಲಕ್ಷ ಆರಂಭಿಕ ದರದಲ್ಲಿ ಲಾಂಚ್ ಮಾಡಿತ್ತು.
ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್ ಎರಡು ಎಂಜಿನ್ ಆಯ್ಕೆಯಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳಲ್ಲಿ 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 82 PS ಗರಿಷ್ಠ ಪವರ್ ಹಾಗೂ115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 110 PS ಪವರ್ ಹಾಗೂ 190 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್ ಮೈಲೇಜ್ ವಿಷಯದಲ್ಲೂ ಅತ್ಯುತ್ತಮವಾಗಿದ್ದು, 19.3 kmpl ಇಂಧನ ದಕ್ಷತೆ ಹೊಂದಿದೆ.
ಈ ಕಾರಿನ ಔಟ್ ಸೈಡ್ ಹಾಗೂ ಕ್ಯಾಬಿನ್ ಒಳಗಿನ ವಿನ್ಯಾಸ ಅತ್ಯುತ್ತಮವಾಗಿದ್ದು, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡೈ/ನೈಟ್ IRVM, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫಾಗ್ ಲ್ಯಾಂಪ್ಸ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್, 4 ಸ್ಪೀಕರ್ ಸೌಂಡ್ ಸಿಸ್ಟಮ್, 35-ಕನೆಕ್ಟ್ದ್ ಕಾರ್ ಟೆಕ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆ ದೃಷ್ಟಿಯಿಂದ ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ರಿವರ್ಸಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ಹಲವು ಫೀಚರ್ಸ್ ಪಡೆದಿದೆ.
ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್‌ಗೆ ಮಾರುತಿ ಸುಜುಕಿ ವ್ಯಾಗನ್ ಆರ್, ಸೆಲೆರಿಯೊ, ಟಾಟಾ ಟಿಯಾಗೊ, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಪ್ರತಿಸ್ಪರ್ಧಿಯಾಗಿವೆ. ಇನ್ನು, ಕಂಪನಿ ಈ ಕಾರಿನ ಬೆಲೆ ಏರಿಕೆ ಮಾಡಿರುವುದು ಗ್ರಾಹಕರಿಗೆ ಬೇಸರ ತರಿಸಿದೆ. ಆದರೆ, ಅದು ಕೊಂಚವೇ ಆಗಿದ್ದು, ಮುಂಬರುವ ತಿಂಗಳಿಂದ ಜಾರಿಗೆ ಬರುವುದರಿಂದ ನೆಮ್ಮದಿ ತಂದಿದೆ.


Click it and Unblock the Notifications








