ಎಲೆಕ್ಟ್ರಿಕ್ ವಾಹನಗಳು ಪರಿಸರಕ್ಕೆ ಹೆಚ್ಚು ಹಾನಿಕಾರಕ: ಹೈಬ್ರಿಡ್ ವಾಹನಗಳೇ ಬೆಸ್ಟ್ ಎಂದ ವರದಿ
ನಿಜವಾಗಿಯೂ ಎಲೆಕ್ಟ್ರಿಕ್ ಕಾರುಗಳು ಪರಿಸರ ಸ್ನೇಹಿಯೇ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ ಪ್ರಶ್ನಿಸಿದೆ. ಇತ್ತೀಚೆಗೆ ಅವರು ನಡೆಸಿದ ಅಧ್ಯಯನದ ಪ್ರಕಾರ ಎಲೆಕ್ಟ್ರಿಕ್ ವಾಹನಗಳು ಸಾಮಾನ್ಯ ಇಂಧನ ಚಾಲಿತ ಹಾಗೂ ಹೈಬ್ರಿಡ್ ಕಾರುಗಳಿಗಿಂತ ಹೆಚ್ಚು ಹಾನಿಕಾರಿಕ ಎಂಬುದನ್ನು ಬಹಿರಂಗಪಡಿಸಿದೆ.
ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಸಾಂಪ್ರದಾಯಿಕ ಕಾರುಗಳ ಬಗ್ಗೆ ಜಪಾನಿನ ಸಂಸ್ಥೆಯ ಸಹಾಯದಿಂದ ಐಐಟಿ ಕಾನ್ಪುರ ಈ ಅಧ್ಯಯನವನ್ನು ನಡೆಸಿದೆ. ವಾಹನಗಳ ಜೀವನ ಚಕ್ರ ವಿಶ್ಲೇಷಣೆ (ಎಲ್ಸಿಎ) ಮತ್ತು ಮಾಲೀಕತ್ವದ ಒಟ್ಟು ವೆಚ್ಚ (ಟಿಸಿಒ)ವನ್ನು ಲೆಕ್ಕಹಾಕಲು ಅಧ್ಯಯನವು ಎರಡು ವಿದೇಶಿ ವರ್ಗಗಳು ಮತ್ತು ಒಂದು ಭಾರತೀಯ ವರ್ಗ ಎಂದು ಕಾರುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ.

ಸಾಮಾನ್ಯವಾಗಿ ಎಲ್ಲರೂ ಬ್ಯಾಟಿರಿಗಳಿಂದ ಓಡುವ ವಾಹನಗಳಿಂದ ಪರಿಸರ ಹಾನಿಯಾಗುವುದಿಲ್ಲ ಎಂದುಕೊಳ್ಳುತ್ತಾರೆ. ಆದ್ರೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ, ಬಳಕೆ ಮತ್ತು ಸ್ಕ್ರ್ಯಾಪಿಂಗ್ ಮಾಡುವ ಪ್ರಕ್ರಿಯೆಯಲ್ಲಿ ಇಂಧನ ಚಾಲಿತ ವಾಹನಗಳಿಗಿಂತ ಶೇಕಡಾ 15 ರಿಂದ 50 ರಷ್ಟು ಹಸಿರುಮನೆ ಅನಿಲಗಳನ್ನು (GHGs) ಉತ್ಪಾದಿಸುತ್ತಿವೆ ಎಂದು ಐಐಟಿ ಕಾನ್ಪುರದ ಎಂಜಿನ್ ರಿಸರ್ಚ್ ಲ್ಯಾಬ್ ವರದಿ ತಿಳಿಸಿದೆ.
ಬ್ಯಾಟರಿಯನ್ನು ವಿದ್ಯುಚ್ಛಕ್ತಿಯೊಂದಿಗೆ ಚಾರ್ಜ್ ಮಾಡಬೇಕಾಗುತ್ತದೆ, ಆದರೆ ಪ್ರಸ್ತುತ ದೇಶದಲ್ಲಿ ಶೇಕಡಾ 75 ರಷ್ಟು ವಿದ್ಯುತ್ ಅನ್ನು ಕಲ್ಲಿದ್ದಲಿನಿಂದ ಉತ್ಪಾದಿಸಲಾಗುತ್ತದೆ. ಇದು ಕಾರ್ಬನ್-ಡೈ-ಆಕ್ಸೈಡ್ ಅನ್ನು ಹೊರಸೂಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಹೀಗೆ ಎಲೆಕ್ಟ್ರಿಕ್ ಕಾರುಗಳು ಇತರ ವಾಹನಗಳಿಗಿಂತ ವಿವಿಧ ವಿಭಾಗಗಳಲ್ಲಿ ಶೇಕಡಾ 15-50 ರಷ್ಟು ಹೆಚ್ಚು ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ.

ಇನ್ನು ಇಂಧನ ಚಾಲಿತ ವಾಹನಗಳು ಸಾಮಾನ್ಯವಾಗಿಯೇ ಹೆಚ್ಚು ಕಾರ್ಬನ್ ಹೊರಸೂಸುವಿಕೆಯನ್ನು ಹೊಂದಿವೆ. ಈ ನಿಟ್ಟಿನಲ್ಲಿ ನೋಡುವುದಾದರೆ ಕಡಿಮೆ ಪ್ರಮಾಣದ ಹಸಿರುಮನೆ ಅನಿಲಗಳನ್ನು ಹೊರಸೂಸುವುದು ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ಸ್ ಮಾತ್ರ ಎಂದು ಐಐಟಿ ಕಾನ್ಪುರದ ಪ್ರೊಫೆಸರ್ ಅವಿನಾಶ್ ಅಗರ್ವಾಲ್ ನಡೆಸಿದ ಅಧ್ಯಯನ ಕಂಡುಹಿಡಿದಿದೆ. ಆದ್ರೆ ಇತರ ವಾಹನಗಳಿಗಿಂತ ಹೈಬ್ರಿಡ್ ಕಾರುಗಳ ಬೆಲೆ ಹೆಚ್ಚು.
ಹೈಬ್ರಿಡ್ ಕಾರುಗಳ ಬೆಲೆ ಹೆಚ್ಚಾಗಿರುವುದು, ಅವುಗಳ ಮೇಲಿನ ಸರ್ಕಾರದ ಹೆಚ್ಚಿನ ತೆರಿಗೆಗಳಿಂದಾಗಿ, ಸರ್ಕಾರವು ಶುದ್ಧ ತಂತ್ರಜ್ಞಾನವನ್ನು ಉತ್ತೇಜಿಸಲು ಬಯಸಿದರೆ, ಹೈಬ್ರಿಡ್ ಕಾರುಗಳಿಗೆ ಬ್ಯಾಟರಿ ವಾಹನಗಳಂತೆ ಸಮಾನ ತೆರಿಗೆ ವಿಧಿಸಬೇಕು ಎಂದು ಐಐಟಿ ವರದಿ ಹೇಳಿದೆ. ಪ್ರತಿ ಕಿಲೋಮೀಟರ್ ವಿಶ್ಲೇಷಣೆಯಲ್ಲಿ, ಎಲೆಕ್ಟ್ರಾನಿಕ್ ವಾಹನಗಳ (ಇವಿ) ಖರೀದಿ, ವಿಮೆ ಮತ್ತು ನಿರ್ವಹಣೆ ಕೂಡ ಶೇಕಡಾ 15-60 ರಷ್ಟು ದುಬಾರಿಯಾಗಿದೆ.

ಪರಿಸರಕ್ಕೆ ಹಾನಿಯಾಗುತ್ತಿದ್ದರೂ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿದಾರರಿಗೆ ಕಡಿಮೆ ತೆರಿಗೆ ಮತ್ತು ಇತರ ಪ್ರಯೋಜನಗಳ ಮೂಲಕ ಉತ್ತೇಜಿಸಲಾಗುತ್ತಿದೆ ಎಂದು ವರದಿ ಸೂಚಿಸಿದೆ. ಸಾಂಪ್ರದಾಯಿಕ ಎಂಜಿನ್ ಕಾರುಗಳಿಗೆ ಹೋಲಿಸಿದರೆ ಹೈಬ್ರಿಡ್ ಕಾರುಗಳು ಪ್ರತಿ ಲೀಟರ್ ಗೆ ಒಂದೂವರೆಯಿಂದ ಎರಡು ಪಟ್ಟು ಹೆಚ್ಚು ಮೈಲೇಜ್ ನೀಡುತ್ತವೆ. ಹಾಗೆಯೇ ಇತರ ಎರಡೂ ವರ್ಗದ ವಾಹನಗಳಿಗಿಂತ ಕಡಿಮೆ ಹಾನಿಕಾರಕವಾಗಿದೆ ಎಂದು ತಿಳಿಸಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications