Upcoming 5 Big Suvs: ಭಾರತದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಲು ಬರುತ್ತಿವೆ 5 ದೊಡ್ಡ ಎಸ್‌ಯುವಿಗಳು
ದೇಶೀಯ ಮಾರುಕಟ್ಟೆಯಲ್ಲಿ ಮುಂದಿನ 3 ತಿಂಗಳಲ್ಲಿ ದೊಡ್ಡ ಮಟ್ಟದ ದಾಖಲೆ ಸೃಷ್ಟಿಸಲು ಬರೋಬ್ಬರಿ 5 ಎಸ್‌ಯುವಿಗಳು ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿವೆ. ಮಾರುತಿ ಸುಜುಕಿ, ಕಿಯಾ, ಹೋಂಡಾ ಹಾಗೂ ಮರ್ಸಿಡಿಸ್ ಕಂಪನಿಯ ಕಾರುಗಳೇ ಲಾಂಚ್ ಆಗಲಿದ್ದು, ಈ ಬಗ್ಗೆ ಸಂಪೂರ್ಣ ವಿವರ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇವೆ.
ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿರುವ 'ಮಾರುತಿ ಸುಜುಕಿ' ಬಹುನೀರಿಕ್ಷಿತ ಫ್ರಾಂಕ್ಸ್ ಎಸ್‌ಯುವಿಯನ್ನು ಮುಂದಿನ ತಿಂಗಳು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಈ ಫ್ರಾಂಕ್ಸ್ ಎಸ್‌ಯುವಿಯನ್ನು ಕಂಪನಿ ಪ್ರದರ್ಶನ ಮಾಡಿತ್ತು. ಅಂದಿನಿಂದಲೇ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಗರಿಷ್ಠ ಸಂಖ್ಯೆಯಲ್ಲಿ ಬುಕಿಂಗ್ ಪಡೆದುಕೊಂಡಿದೆ.

ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ, ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (98.6 bhp ಪವರ್ 147.6 Nm ಪೀಕ್ ಟಾರ್ಕ್), 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (88.5 bhp ಪವರ್, 113 Nm ಪೀಕ್ ಟಾರ್ಕ್). ಜೊತೆಗೆ 5-ಸ್ವೀಡ್ MT/AMT ಗೇರ್ ಬಾಕ್ಸ್ ಹೊಂದಿದೆ. ಬಹುತೇಕ ರೂ.7.50 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಸಿಗಬಹುದು.
ಮಾರುತಿ ಸುಜುಕಿಯ ಆಫ್-ರೋಡ್ ಎಸ್‌ಯುವಿ, 'ಜಿಮ್ನಿ 5-ಡೋರ್' ಮೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಇದನ್ನು ಕೂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿ, ಬುಕಿಂಗ್ ಕೂಡ ಪ್ರಾರಂಭಿಸಲಾಗಿತ್ತು. ಈವರೆಗೆ ಬರೋಬ್ಬರಿ 23,500 ಮಂದಿ ಬುಕ್ ಮಾಡಿದ್ದಾರೆ. ಈ ಜಿಮ್ನಿ 5-ಡೋರ್ ಸಹ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿಯೇ ಖರೀದಿಗೆ ಸಿಗಲಿದ್ದು, ರೂ.10 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರಬಹುದು.
ಈ ಮಾರುತಿ ಸುಜುಕಿ ಜಿಮ್ನಿ 5-ಡೋರ್, ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103 bhp ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. 9.0 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಈ ವರ್ಷದ ಮಧ್ಯ ಭಾಗದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇದರ ಹೊರ ಹಾಗೂ ಒಳಭಾಗವನ್ನು ನವೀಕರಿಸಲಾಗಿದ್ದು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ತಂತ್ರಜ್ಞಾನ ಸೇರಿದಂತೆ ಹಲವು ನೂತನ ವೈಶಿಷ್ಟ್ಯಗಳನ್ನು ಈ ಕಾರು ಪಡೆದುಕೊಂಡಿರಲಿದ್ದು, ಇದು ಹೊಸದಾದ 1.5 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 160 PS ಗರಿಷ್ಠ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಹೋಂಡಾ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಮಿಡ್ ಸೈಜ್ ಎಸ್‌ಯುವಿ, ಈ ವರ್ಷದಲ್ಲಿ ಮಧ್ಯ ಭಾಗದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಭಾರತದ ಗ್ರಾಹಕರಿಗೆ ಹಬ್ಬಗಳ ಸೀಸನ್ (ವರಮಹಾಲಕ್ಷೀಯಿಂದ ಆರಂಭ) ನಲ್ಲಿ ಖರೀದಿಗೆ ಸಿಗಬಹುದು. ಇದು ಐದನೇ ಜನರೇಷನ್ 'ಸಿಟಿ; ಕಾರು ಹೊಂದಿರುವ ಪ್ಲಾಟ್ ಫಾರಂ ಆಧರಿಸಿರಲಿದ್ದು,1.5 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್, 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆದಿರಬಹುದು.
ನ್ಯೂ ಜನರೇಷನ್ ಮರ್ಸಿಡಿಸ್-ಬೆನ್ಜ್ GLC ಹಿಂದಿನ ಮಾದರಿಗೆ ಹೋಲಿಸಿದರೆ, ಹೊರ ಹಾಗೂ ಒಳಭಾಗದಲ್ಲಿ ಸಾಕಷ್ಟು ನವೀಕರಣಗಳನ್ನು ಹೊಂದಿರಲಿದ್ದು, ಹೊಸದಾದ 12.3-ಇಂಚಿನ ಡಿಜಿಟಲ್ ಕನ್ಸೋಲ್, 11.9-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ. ಈ ವರ್ಷದ ಮಧ್ಯ ಭಾಗದೊಳಗೆ ದೇಶೀಯ ಮಾರುಕಟ್ಟೆಗೆ ಬರುವ ಈ ಎಸ್‌ಯುವಿ, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ 2.0 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ.


Click it and Unblock the Notifications