ಭಾರತದ ಪ್ರಪ್ರಥಮ ಫಾರ್ಮುಲಾ ಇ ರೇಸ್‌ಗೆ ಸಾಕ್ಷಿಯಾಗಲಿದೆ ಮುತ್ತಿನ ನಗರಿ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯು ವೇಗವಾಗಿ ಬೆಳವಣಿಗೆಯಾಗುತ್ತಿದೆ. ಅದಕ್ಕೆ ತಕ್ಕಂತೆ ವಿವಿಧ ವಾಹನ ತಯಾರಕ ಕಂಪನಿಗಳು ಈಗಾಗಲೇ ಇವಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದೀಗ, ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರುಗಳೊಂದಿಗೆ ನಡೆಯುತ್ತಿರುವ 'ಫಾರ್ಮುಲಾ ಇ' ರೇಸ್‌ನ್ನು ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದೆ.
ಹುಸೇನ್ ಸಾಗರ ಕೆರೆ (lake) ಪಕ್ಕದಲ್ಲಿರುವ ಹೈದರಾಬಾದ್ ಇ ಪ್ರಿಕ್ಸ್ ರೇಸ್‌ಟ್ರಾಕ್‌ನಲ್ಲಿ ಶನಿವಾರ (ಫೆಬ್ರುವರಿ 11) 'ಎಬಿಬಿ ಎಫ್‌ಐಎ ಫಾರ್ಮುಲಾ ಇ ವರ್ಲ್ಡ್' ಚಾಂಪಿಯನ್‌ಶಿಪ್ ರೇಸ್ ನಡೆಯಲಿದ್ದು, 2.8 ಕಿ.ಮೀ ಟ್ರ್ಯಾಕ್, ಒಟ್ಟು 18 ತಿರುವುಗಳನ್ನು ಒಳಗೊಂಡಿದೆ. ಈ ಅದ್ಬುತ ಕ್ಷಣಗಳನ್ನೂ ಕಣ್ತುಂಬಿಕೊಳ್ಳಲು ಮುತ್ತಿನ ನಗರಿ ಹೈದರಾಬಾದ್ ಈಗಾಗಲೇ ಎಲ್ಲ ರೀತಿಯಿಂದ ಸಜ್ಜುಗೊಂಡಿದ್ದು, ಫಾರ್ಮುಲಾ ಇ ರೇಸ್ ಹೇಗಿರಲಿದೆ ಎಂದು ರೇಸ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಈ ರೇಸ್ ವೀಕ್ಷಿಸಲು ಬರುವವರಿಗಾಗಿ ಬರೋಬ್ಬರಿ 20,000 ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಬಹುತೇಕ ಸೀಟ್ಸ್ ಬುಕ್ ಆಗಿವೆ. ಒಟ್ಟು ನಾಲ್ಕು ವಿಭಾಗಗಳಾಗಿ ವಿಂಗಡಿಸಿ, ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ರೂ.1,000 ಬೆಲೆಯ ಗ್ರ್ಯಾಂಡ್‌ಸ್ಟ್ಯಾಂಡ್ ಹಾಗೂ ರೂ. 4,000 ದರದ ಚಾರ್ಜ್ಡ್ ಗ್ರ್ಯಾಂಡ್‌ಸ್ಟ್ಯಾಂಡ್ ಟಿಕೆಟ್ ಈಗಾಗಲೇ ಮಾರಾಟವಾಗಿವೆ. ಇನ್ನುಳಿದಂತೆ ಪ್ರೀಮಿಯಂ ಗ್ರ್ಯಾಂಡ್‌ಸ್ಟ್ಯಾಂಡ್ ಟಿಕೆಟ್ ರೂ.7,000, ಏಸ್ ಗ್ರ್ಯಾಂಡ್‌ಸ್ಟ್ಯಾಂಡ್ ಟಿಕೆಟ್ ರೂ.10,500 ಹಾಗೂ ಏಸ್ ಲಾಂಜ್ ಪ್ಯಾಕೇಜ್ ಟಿಕೆಟ್ ರೂ.1.25 ಲಕ್ಷ ದರವನ್ನು ಹೊಂದಿವೆ.
ಈ ಬಾರಿಯ ಫಾರ್ಮುಲಾ ಇ ರೇಸ್‌ನಲ್ಲಿ ಪೋರ್ಷೆ, ಜಾಗ್ವಾರ್, ನಿಸ್ಸಾನ್ ಮತ್ತು ಮಹೀಂದ್ರಾ ಸೇರಿದಂತೆ 11 ತಂಡಗಳು ಮತ್ತು 22 ಡ್ರೈವರ್‌ಗಳು ಭಾಗವಹಿಸಲಿದ್ದಾರೆ. ಇಂದು (ಶುಕ್ರವಾರ) ಸಂಜೆ ಮೊದಲ ಫ್ರೀ ಪ್ರಾಕ್ಟಿಸ್ ರೇಸ್ ಇರಲಿದ್ದು, 4:25ಕ್ಕೆ ಆರಂಭವಾಗಲಿದೆ. ಶನಿವಾರ ಬೆಳಗ್ಗೆ ಎರಡನೇ ಫ್ರೀ ಪ್ರಾಕ್ಟಿಸ್ ರೇಸ್ ಇರಲಿದೆ. 8:05ಕ್ಕೆ ಶುರುವಾಗಲಿದೆ. ಬೆಳಗ್ಗೆ 10:40ಕ್ಕೆ ಕ್ವಾಲಿಫೈ ರೇಸ್ ನಡೆಯಲಿದ್ದು, ಮಧ್ಯಾಹ್ನ 3 ಗಂಟೆ ಬಳಿಕ ರೇಸ್ ಶುರುವಾಗಲಿದೆ.

ಫಾರ್ಮುಲಾ ಇ ಹಾಗೂ ಇತರೆ ಕಾರ್ ರೇಸ್‌ಗಳಿಗಿರುವ ಬಹುದೊಡ್ಡ ವ್ಯತ್ಯಾಸವೆಂದರೆ, ಈ ರೇಸ್‌ನಲ್ಲಿ ಭಾಗವಾಗಿಸುವ ಎಲ್ಲ ಕಾರುಗಳು ಎಲೆಕ್ಟ್ರಿಕ್ ಮೋಟಾರ್ ನಿಂದ ಚಲಿಸಲಿದ್ದು, 250 kW ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, 280 km/h ಟಾಪ್ ಸ್ವೀಡ್ ಹೊಂದಿರಲಿವೆ. ರೇಸ್ ರೇಸ್‌ಟ್ರಾಕ್‌ನಲ್ಲಿ ಚಲಿಸುವಾಗ ಈ ಕಾರುಗಳು ಕಡಿಮೆ ಶಬ್ದವನ್ನು ಮಾಡುತ್ತವೆ. ಗರಿಷ್ಠ ವೇಗವನ್ನು ಪಡೆದುಕೊಂಡಾಗ ಶಬ್ದದ ಮಟ್ಟ 80 ಡೆಸಿಬೆಲ್ ಇರಲಿದ್ದು, ಎಂತಹ ಹವಾಮಾನ ಪರಿಸ್ಥಿತಿಯಲ್ಲೂ ಈ ಕಾರುಗಳನ್ನು ಓಡಿಸುವಂತೆ ವಿನ್ಯಾಸ ಮಾಡಲಾಗಿದೆ.
ಕೆಲವರಿಗೆ ಫಾರ್ಮುಲಾ ಇ ರೇಸ್‌ಗೆ ಆಯೋಜನೆ ಮಾಡುವ ಉದ್ದೇಶವೇನು ಎಂಬ ಪ್ರಶ್ನೆಗಳು ಕಾಡಬಹುದು. ಅದಕ್ಕೆ ಉತ್ತರ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ಇದೊಂದು ಎಲೆಕ್ಟ್ರಿಕ್ ಕಾರುಗಳ ರೇಸ್ ಆಗಿದ್ದು, ಜಗತ್ತು ಶೂನ್ಯ ಇಂಗಾಲದ ಹೊರಸೂಸವಿಕೆಯ ವಾಹನಗಳ ತಯಾರಿಕೆಯತ್ತ ಮುಖಮಾಡಿದೆ. ಇದರ ಭಾಗವಾಗಿ, ವಿಶ್ವಾದ್ಯಂತ ನಡೆಸುವ ಫಾರ್ಮುಲಾ ರೇಸ್‌ಗಳನ್ನು 2026ರ ಹೊತ್ತಿಗೆ ಎಲೆಕ್ಟ್ರಿಕ್ ಕಾರುಗಳ ಮೂಲಕ ನಡೆಸುವ ಉದ್ದೇಶವಿದೆ. 2014ರಲ್ಲಿ ಫಾರ್ಮುಲಾ 1 ರೇಸ್ ನಲ್ಲಿ ಹೈಬ್ರಿಡ್ ಮೋಟರ್ ಕಾರುಗಳನ್ನು ಪರಿಚಯಿಸಲಾಗಿತ್ತು.

ಫಾರ್ಮುಲಾ ಇ ರೇಸ್‌ನ ಮುಖ್ಯ ಉದ್ದೇಶವೆಂದರೇ ಜಗತ್ತು ಪೆಟ್ರೋಲ್, ಡೀಸೆಲ್ ಚಾಲಿತ ಕಾರಿಗಳನ್ನು ಬಿಟ್ಟು, ಎಲೆಕ್ಟ್ರಿಕ್ ಕಾರುಗಳಿಗೆ ಬದಲಾಗುವುದು ಎಂದು ತಿಳಿಸುವುದಾಗಿದೆ. ರೇಸ್‌ನಲ್ಲಿ ಕಾರುಗಳಿಗೆ ಅಳವಡಿಸಲಾದ ಮೋಟಾರ್ ಗಳಿಂದ ಮುಂಬರುವ ದಿನಗಳಲ್ಲಿ ಸಾಮಾನ್ಯ ಕಾರುಗಳನ್ನು ತಯಾರಿಸಬಹುದು. ಆ ದೃಷ್ಟಿಯಿಂದ ಈ ರೇಸ್ ತುಂಬಾ ಮಹತ್ವದಿಂದ ಕೂಡಿದೆ. ಒಟ್ಟಾರೆಯಾಗಿ ನಾಳೆ ಆರಂಭವಾಗುವ ಈ ರೇಸ್ ಎಷ್ಟರಮಟ್ಟಿಗೆ ಯುವ ಜನರನ್ನು ಆಕರ್ಷಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications