ಭಾರತದ ಮೊದಲ ಫಾರ್ಮುಲಾ ಇ ರೇಸ್: ಜೀನ್ ಎರಿಕ್ ಚಾಂಪಿಯನ್
ಹೈದರಾಬಾದ್ ಇ ಪ್ರಿಕ್ಸ್ ರೇಸ್‌ಟ್ರಾಕ್‌ನಲ್ಲಿ ಶನಿವಾರ ನಡೆದ ಭಾರತದ ಚೊಚ್ಚಲ ಫಾರ್ಮುಲಾ ಇ ವರ್ಲ್ಡ್' ಚಾಂಪಿಯನ್‌ಶಿಪ್ ರೇಸ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಎರಡು ಬಾರಿಯ ಫಾರ್ಮುಲಾ ಇ ವಿಶ್ವ ಚಾಂಪಿಯನ್ ಆಗಿರುವ ಜೀನ್ ಎರಿಕ್ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆಲುವ ಮೂಲಕ ಹೊಸ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.
ಜೀನ್ ಎರಿಕ್ ಅವರು, ಅಮೇರಿಕದ ಫಾರ್ಮುಲಾ ಇ ರೇಸಿಂಗ್ ತಂಡ ಡಿಎಸ್ ಪೆನ್ಸ್‌ಕೆಯನ್ನು ಪ್ರತಿನಿಧಿಸುತ್ತಾರೆ. ಎನ್‌ವಿಷನ್ ರೇಸಿಂಗ್ ತಂಡದ ನಿಕ್ ಕ್ಯಾಸಿಡಿ ಎರಡನೇ ಸ್ಥಾನ ಹಾಗೂ ಸೆಬಾಸ್ಟಿಯನ್ ಬ್ಯೂಮಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನ ಪಡೆದಿರುವ ಜೀನ್ ಎರಿಕ್, ಫ್ರೆಂಚ್ ವೃತ್ತಿಪರ ರೇಸಿಂಗ್ ಚಾಲಕನಾಗಿದ್ದು, 2014ರಿಂದಲ್ಲೂ ಅಂದರೆ, ಫಾರ್ಮುಲಾ ಇ ರೇಸ್ ಚಾಂಪಿಯನ್‌ಶಿಪ್ ಆರಂಭವಾಗಿನಿಂದಲ್ಲೂ ಭಾಗವಹಿಸುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಬರೋಬ್ಬರಿ ಮೂರು ಬಾರಿ ಚಾಂಪಿಯನ್ ಆಗಿದ್ದಾರೆ.

ಈ ಬಾರಿಯ ಫಾರ್ಮುಲಾ ಇ ರೇಸ್‌ನಲ್ಲಿ ಪ್ರಮುಖ 11 ತಂಡಗಳು ಸ್ಪರ್ಧಿಸಿದ್ದವು. ಅವುಗಳೆಂದರೆ, ಆಂಡ್ರೆಟ್ಟಿ, TAG ಹ್ಯೂಯರ್ ಪೋರ್ಷೆ, NEOM ಮೆಕ್‌ಲಾರೆನ್ ಎನ್‌ವಿಷನ್, ಜಾಗ್ವಾರ್ TCS ರೇಸಿಂಗ್, ಮಹೀಂದ್ರಾ, ಡಿಎಸ್ ಪೆನ್ಸ್‌ಕೆ, ನಿಸ್ಸಾನ್, ಮಾಸ್‌ಜಿ ರಾಸ್ಕೆರೆಟಿ, NIO 333 ತಂಡಗಳು ಸೇರಿದ್ದು, ಒಟ್ಟು 22 ಡ್ರೈವರ್‌ಗಳು ಭಾಗವಹಿಸಿದ್ದರು. ಈ ರೇಸ್ ಟ್ರ್ಯಾಕ್ 2.8 ಕಿ.ಮೀ ಉದ್ದವಿದ್ದು, 18 ತಿರುವುಗಳನ್ನು ಒಳಗೊಂಡಿತ್ತು. ಅಲ್ಲದೆ, ಶುಕ್ರವಾರದಿಂದಲ್ಲೇ ಮುತ್ತಿನ ನಗರಿಯಲ್ಲಿ ಸಂಭ್ರಮ ಮನೆ ಮಾಡಿತ್ತು, ಸಂಜೆ ಫ್ರೀ ಪ್ರಾಕ್ಟಿಸ್ ರೇಸ್ ನಡೆದಿತ್ತು.
ಫಾರ್ಮುಲಾ ಇ ರೇಸ್ ನಲ್ಲಿ ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಚಾಹಲ್, ಶಿಖರ್ ಧವನ್, ನಟ ರಾಮ್ ಚರಣ್, ನಾಗಾರ್ಜುನ, ನಾಗಚೈತನ್ಯ, ಅಖಿಲ್ ಹಾಗೂ ಉದ್ಯಮಿ ಆನಂದ್ ಮಹೀಂದ್ರಾ ಭಾಗವಹಿಸಿದ್ದರು. ನಟ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್ ಪುತ್ರ ಗೌತಮ್ ಜೊತೆ ಆಗಮಿಸಿದ್ದರು. ಜೊತೆಗೆ ರೇಸ್ ವೀಕ್ಷಣೆ ಮಾಡಲು ಬರೋಬ್ಬರಿ 20,000 ಆಸನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಟಿಕೆಟ್ ದರ ರೂ.1,000 ದಿಂದ ರೂ.1.25 ಲಕ್ಷವರೆಗೆ ಇತ್ತು.

ಭಾರತದಲ್ಲಿ ಆಯೋಜಿಸಿದ್ದ ಈ ಮೊಟ್ಟ ಮೊದಲ ಫಾರ್ಮುಲಾ ಇ (ಎಲೆಕ್ಟ್ರಿಕ್ ಕಾರು) ರೇಸ್ ನಲ್ಲಿ ಕಾರುಗಳನ್ನು ಗಂಟೆಗೆ 322 ಕಿಲೋಮೀಟರ್ ವೇಗದಲ್ಲಿ ಡ್ರೈವರ್ ಗಳು ಓಡಿಸಿದ್ದಾರೆ. ಇದನ್ನು ಕಂಡ ರೇಸ್ ಪ್ರಿಯರು, ಸಖತ್ ಎಂಜಾಯ್ ಮಾಡಿದ್ದಾರೆ. ಈ ವೇಳೆ, ವಿಜೇತರಿಗೆ ತೆಲಂಗಾಣ ಸರ್ಕಾರದ ಸಚಿವ ಕೆಟಿಆರ್ ಬಹುಮಾನ ವಿತರಿಸಿದ್ದಾರೆ. ಆ ಬಳಿಕ ಮಾತನಾಡಿ, ರೇಸ್ ಯಶಸ್ವಿಯಾಗಿದೆ. ಹೈದರಾಬಾದ್ ನಿವಾಸಿಗಳಿಗೆ ಆಗಿರುವ ತೊಂದರೆಯನ್ನು ಕ್ಷಮಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಫಾರ್ಮುಲಾ ಇ ರೇಸ್ ಎಂಬುದು ಎಲೆಕ್ಟ್ರಿಕ್ ಕಾರುಗಳ ರೇಸ್ ಆಗಿದ್ದು, ಪ್ರಪಂಚವು ಶೂನ್ಯ ಇಂಗಾಲದ ಹೊರಸೂಸವಿಕೆಯ ವಾಹನಗಳ ತಯಾರಿಕೆಯತ್ತ ಮುಖಮಾಡಿದ್ದು, ಇದರ ಭಾಗವಾಗಿ, ವಿಶ್ವಾದ್ಯಂತ ನಡೆಸುವ ಫಾರ್ಮುಲಾ ರೇಸ್‌ಗಳನ್ನು 2026ರ ಹೊತ್ತಿಗೆ ಎಲೆಕ್ಟ್ರಿಕ್ ಕಾರುಗಳ ಮೂಲಕ ನಡೆಸುವ ಉದ್ದೇಶಿಸಲಾಗಿದೆ. ಅಲ್ಲದೆ, ರೇಸ್‌ನಲ್ಲಿ ಕಾರುಗಳಿಗೆ ಅಳವಡಿಸಲಾದ ಮೋಟಾರ್ ಗಳಿಂದ ಮುಂಬರುವ ದಿನಗಳಲ್ಲಿ ನಾವು-ನೀವು ಬಳಕೆ ಮಾಡಲು ಸಾಮಾನ್ಯ ಕಾರುಗಳನ್ನು ತಯಾರಿಸಬಹುದು. ಇದರಿಂದ ಈ ರೇಸ್ ತುಂಬಾ ಮಹತ್ವದಿಂದ ಕೂಡಿತ್ತು.

ಒಟ್ಟಾರೆಯಾಗಿ ಹೈದರಾಬಾದಿನಲ್ಲಿ ನಡೆದ ಈ ರೇಸ್ ಸಾಕಷ್ಟು ರೇಸಿಂಗ್ ಪ್ರಿಯರ ಗಮನ ಸೆಳೆಯಿತು. ಚಿತ್ರರಂಗ ನಟ - ನಟಿಯರು ಹಾಗೂ ಕ್ರಿಕೆಟಿಗರ ಸಮಾಗಮವಾಗಿತ್ತು. ದೇಶದವು ಶೂನ್ಯ ಹೊರಸೂಸುವಿಕೆಯತ್ತ ತೆರಳುತ್ತಿರುವ ಈ ವೇಳೆ, ಈ ರೇಸ್ ತುಂಬಾ ಮಹತ್ತರ ಬೆಳೆವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ಭಾರತದ ವಿವಿಧ ರಾಜ್ಯಗಳಲ್ಲೂ ಈ ರೇಸ್ ಆಯೋಜಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಹತ್ವವನ್ನು ತಿಳಿಸಲು ಆಯೋಜಕರು ಯೋಜನೆ ರೂಪಿಸಿದ್ದಾರೆ. ಜೊತೆಗೆ ನಮ್ಮ ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಮಹೀಂದ್ರಾದ ತಂಡ ಭಾಗವಹಿಸಿ, ಏಳನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications