Pod Taxi: ಅಭಿವೃದ್ಧಿಯಲ್ಲಿ ಬೆಂಗಳೂರನ್ನು ಹಿಂದಕ್ಕಲು ದೊಡ್ಡ ಪ್ಲಾನ್... ದೇಶದ ಮೊದಲ ಪಾಡ್ ಟ್ಯಾಕ್ಸಿ ಎಲ್ಲಿ ಗೊತ್ತಾ?
ಕಳೆದ 7 ವರ್ಷಗಳಲ್ಲಿ ಉತ್ತರ ಪ್ರದೇಶವು ಹಿಂದೆದೂ ಇಲ್ಲದ ಅಭಿವೃದ್ಧಿ ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಯೋಜನೆಗಳೊಂದಿಗೆ ರಾಜ್ಯವನ್ನು ಅಭಿವೃದ್ಧಿ ಮಾಡಲು ಅಲ್ಲಿನ ಸರ್ಕಾರ ಸಜ್ಜಾಗುತ್ತಿದೆ. ಸದ್ಯ ವೈಯಕ್ತೀಕರಿಸಿದ ರಾಪಿಡ್ ಟ್ರಾನ್ಸಿಟ್ ಎಂದು ಕರೆಯಲ್ಪಡುವ ಭಾರತದ ಮೊದಲ ಪಾಡ್ ಟ್ಯಾಕ್ಸಿಯನ್ನು ತರಲು ಮುಂದಾಗಿದೆ.
ಉತ್ತರ ಪ್ರದೇಶ ಸೂಚ್ಯಂಕದ ಪ್ರಕಾರ, ಯಮುನಾ ಪ್ರಾಧಿಕಾರವು ಭಾರತದ ಮೊದಲ ಪಾಡ್ ಟ್ಯಾಕ್ಸಿ ಯೋಜನೆಯ ಪರಿಷ್ಕೃತ DPR ಮತ್ತು ಬಿಡ್ ದಾಖಲೆಯನ್ನು ಅನುಮೋದಿಸಿದೆ. ಅದರಂತೆ ಪಾಡ್ ಟ್ಯಾಕ್ಸಿಗಳು ಆರಂಭವಾದಲ್ಲಿ ಜೆವಾರ್‌ನಲ್ಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫಿಲ್ಮ್ ಸಿಟಿಗೆ ಶೀಘ್ರದಲ್ಲೇ ತಲುಪಬಹುದು. ಈ ಸಂಬಂಧ ಮಾತುಕತೆಗಳು ಚುರುಕುಗೊಂಡಿರುವುದು ತಿಳಿದುಬಂದಿದೆ.

ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ ನಂತರ ಶೀಘ್ರದಲ್ಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಟೆಂಡರ್ ಪ್ರಕ್ರಿಯೆ ಕೂಡ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಯೋಜನೆಯ ಅಂದಾಜು ವೆಚ್ಚ 810 ಕೋಟಿ ರೂ. ಯುಪಿ ಸೂಚ್ಯಂಕದ ಪ್ರಕಾರ, ಪಾಡ್ ಟ್ಯಾಕ್ಸಿ ಯೋಜನೆಯು ಸರ್ಕಾರದಿಂದ ಅಂತಿಮ ಅನುಮೋದನೆಯನ್ನು ಪಡೆದ ನಂತರ 2024 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಪಾಡ್ ಟ್ಯಾಕ್ಸಿ ಎಂದರೇನು?: ಈ ಪಾಡ್ ಟ್ಯಾಕ್ಸಿಗಳು ಎಲೆಕ್ಟ್ರಿಕ್ ವಾಹನಗಳಾಗಿದ್ದು, ಚಾಲಕನಿಲ್ಲದೆ ಸಂಚರಿಸುತ್ತವೆ. ಸ್ಪಷ್ಟವಾಗಿ ಹೇಳುವುದಾದರೆ, ಸಣ್ಣ ಕಾರಿನ ಗಾತ್ರದಲ್ಲಿರುವ ಚಾಲಕನಿಲ್ಲದೇ ಹಳಿಗಳ ಮೇಲೆ ಸಂಚರಿಸುವ ಮೆಟ್ರೋ ರೈಲುಗಳು ಎಂದು ಹೇಳಬಹುದು. ಬೆರಳೆಣಿಕೆಯಷ್ಟು ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವೇಗವಾಗಿ ಸಾಗಿಸಲು ವಿನ್ಯಾಸಗೊಳಿಸಲಾಗಿದೆ.
ಇವುಗಳಿಂದ ಉಪಯೋಗವೇನು?: ಮುಂದುವರಿದ ದೇಶಗಳಲ್ಲಿ ಇವು ಈಗಾಗಲೇ ಚಾಲನೆಯಲ್ಲಿವೆ. ದಿನನಿತ್ಯದ ಟ್ರಾಫಿಕ್ ಜಾಮ್ ಅನ್ನು ನಿಯಂತ್ರಿಸಲು ಸಹಕಾರಿಯಾಗಲಿವೆ ಎಂದು ಹೇಳಲಾಗುತ್ತಿದೆ. ಈ ಪಾಡ್ ಟ್ಯಾಕ್ಸಿಗಳಿಗಾಗಿ ಟ್ರ್ಯಾಕ್‌ಗಳನ್ನು ಸಹಜವಾಗಿ ರಸ್ತೆಗಳಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತದೆ. ಈ ಮೂಲಕ ಗಮ್ಯ ಸ್ಥಳವನ್ನು ಟ್ರಾಫಿಕ್ ಸಮಸ್ಯೆ ಇಲ್ಲದೇ ವೇಗವಾಗಿ ತಲುಪಬಹುದು ಎಂಬುದು ಇದರ ಮೂಲ ಉದ್ದೇಶ.
ನೋಯ್ಡಾದ ಯಾವೆಲ್ಲಾ ನಿಲ್ದಾಣಗಳಲ್ಲಿ ಸೇವೆ?: ಮಾಹಿತಿಯ ಪ್ರಕಾರ ಪಾಡ್ ಟ್ಯಾಕ್ಸಿಗಳು ನೋಯ್ಡಾದ ಜೆವಾರ್ ವಿಮಾನ ನಿಲ್ದಾಣದಿಂದ ಆರಂಭವಾಗಿ ಸೆಕ್ಟರ್ 21 ರಲ್ಲಿ ಇರುವ ಫಿಲ್ಮ್ ಸಿಟಿಗೆ ಸಂಪರ್ಕಿಸುತ್ತದೆ. ಆರಂಭಿಕ ಅಂದಾಜಿನ ಪ್ರಕಾರ, ಈ ಹೊಸ ಯುಗದ ಪಾಡ್ ಟ್ಯಾಕ್ಸಿಗಳಲ್ಲಿ ಪ್ರತಿದಿನ ಸುಮಾರು 37,000 ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ.
ಈ ಮಾರ್ಗವು 12 ರಿಂದ 14 ಕಿ.ಮೀ ಉದ್ದವಿದ್ದು, 12 ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಸೆಕ್ಟರ್ 29, ಸೆಕ್ಟರ್ 29 ರಲ್ಲಿನ ಎಂಎಸ್‌ಎಂಇ ಪಾರ್ಕ್, ಹ್ಯಾಂಡಿಕ್ರಾಫ್ಟ್ ಪಾರ್ಕ್, ಸೆಕ್ಟರ್ 32, ಅಪಾರಲ್ ಪಾರ್ಕ್, ಸೆಕ್ಟರ್ 33, ಟಾಯ್ ಪಾರ್ಕ್, ಸೆಕ್ಟರ್ 21 ಇತ್ಯಾದಿ ನಿಲ್ದಾಣಗಳು ಸೇರಿವೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಈ ಟ್ಯಾಕ್ಸಿಗಳು ಯಶಸ್ವಿಯಾಗಿ ಓಡಿದಲ್ಲಿ ದೇಶದ ಹಲವು ನಗರಗಳಲ್ಲಿ ಇವು ಆರಂಭವಾಗಬಹುದು. ಈ ವಾಹನಗಳು ವೇಗವಾಗಿ ಪ್ರಯಾಣಿಕರ ಗಮ್ಯ ಸ್ಥಳಗಳನ್ನು ತಲುಪಿಸುವುದರ ಜೊತೆಗೆ ಪರಿಸರಕ್ಕೆ ವರದಾನವಾಗಿ ಪರಿಣಮಿಸುತ್ತವೆ. ಇವು ವೆಚ್ಚಪರಿಣಾಮಕಾರಿಯಾಗಿರಲಿವೆ ಎಂದೂ ಕೂಡ ಹೇಳಲಾಗುತ್ತಿದ್ದು, ಯುಪಿ ಇತರ ರಾಜ್ಯಗಳಿಗಿಂತ ವೇಗವಾಗಿ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಹೇಳಬಹುದು.


Click it and Unblock the Notifications