ಗ್ಲೋಬಲ್ NCAP ಪಟ್ಟಿ ಮಾಡಿರುವ ಭಾರತದ ಅಸುರಕ್ಷಿತ ಕಾರುಗಳಿವು
ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಕಾರುಗಳಿಗೆ ಕ್ರ್ಯಾಶ್ ಸೇರಿದಂತೆ ಹಲವು ಪರೀಕ್ಷೆ ನಡೆಸಿ, ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ರೇಟಿಂಗ್ ನೀಡುತ್ತದೆ. ಅದರನ್ವಯ ಕೆಲವು ಕಾರುಗಳು ಅತ್ಯುನ್ನತ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಹಲವು ವಿಫಲವಾಗಿವೆ. ಇಲ್ಲಿ ಗ್ಲೋಬಲ್ ಎನ್‌ಸಿಎಪಿ ಪಟ್ಟಿ ಮಾಡಿರುವ ಭಾರತದ ಅಸುರಕ್ಷಿತ ಕಾರುಗಳ ಬಗ್ಗೆ ತಿಳಿಯೋಣ.
ಮೊದಲಿಗೆ ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಬಗ್ಗೆ ಹೇಳುವುದಾದರೇ, ಇದು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದೆ. ವಯಸ್ಕರ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ ಕೇವಲ 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಏರ್ ಬಾಗ್ಸ್ ಹಾಗೂ ಸೀಟ್ ಬೆಲ್ಟ್ ಅನ್ನು ಹೊಂದಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ರೂ.5.68 ಲಕ್ಷದಿಂದ ರೂ.8.46 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ, ಆಲ್ಟೊ 800 ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, 'ಆಲ್ಟೊ ಕೆ10' ಕಂಪನಿಯ ಎಂಟ್ರಿ ಲೆವೆಲ್ ಕಾರಾಗಿದೆ. ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿ ನಡೆಸಿದ ಪರೀಕ್ಷೆಯಲ್ಲಿ ವಯಸ್ಕರ ರಕ್ಷಣೆ ವಿಭಾಗದಲ್ಲಿ '2' ಸ್ಟಾರ್ ರೇಟಿಂಗ್ ಗಳಿಸಿದೆ. ಆದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ ಇದನ್ನು ಪಡೆಯಲು ಸಾಧ್ಯವಾಗದೆ, '0' ರೇಟಿಂಗ್ ಪಡೆದಿದೆ. ಸುರಕ್ಷತೆ ದೃಷ್ಟಿಯಿಂದ ಡುಯಲ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಸ್ವಿಫ್ಟ್, ಭಾರತದಲ್ಲಿ ಬಹುಬೇಡಿಕೆಯ ಹ್ಯಾಚ್‌ಬ್ಯಾಕ್ ಆಗಿದೆ. ವಯಸ್ಕರ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ ಗ್ಲೋಬಲ್ ಎನ್‌ಸಿಎಪಿಯಿಂದ ಕೇವಲ 2 ಸ್ಟಾರ್ ರೇಟಿಂಗ್ ಗಳಿಸಿದೆ. ಇದು ರೂ.5.99 ಲಕ್ಷದಿಂದ ರೂ.8.98 ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 22.38 - 22.56 kmpl ಮೈಲೇಜ್ ನೀಡಲಿದೆ. ಸುರಕ್ಷತೆ ದೃಷ್ಟಿಯಿಂದ ಡುಯಲ್ ಏರ್‌ಬ್ಯಾಗ್ಸ್, ಹಿಲ್ ಹೋಲ್ಡ್ ಕಂಟ್ರೋಲ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಪ್ರೆಂಚ್ ಪ್ರಮುಖ ವಾಹನ ತಯಾರಕ ಕಂಪನಿ 'ರೆನಾಲ್ಟ್'ನ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ 'ಕ್ವಿಡ್' ಸಹ ವಯಸ್ಕರ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ '1' ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಈ ಕಾರು, ರೂ.4.70 ಲಕ್ಷದಿಂದ ರೂ.6.33 ಲಕ್ಷ ಪ್ರಾರಂಭಿಕ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಡುಯಲ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿಯ ವ್ಯಾಗನ್ ಆರ್, ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 1 ಸ್ಟಾರ್ ರೇಟಿಂಗ್ ಗಳಿಸಿದ್ದು, ಮಕ್ಕಳ ರಕ್ಷಣೆ ವಿಭಾಗದಲ್ಲಿ '0' ರೇಟಿಂಗ್ ಪಡೆದಿದೆ. ಆದರೆ, ಕಂಪನಿಯ ಅಧಿಕಾರಿಗಳು ಮಾತ್ರ, 'ನಮ್ಮ ಎಲ್ಲ ಕಾರುಗಳು ದೇಶದ ಸುರಕ್ಷತಾ ಮಾನದಂಡಗಳ ಪ್ರಕಾರವೇ ಇವೆ. ಕೇಂದ್ರ ಸರ್ಕಾರವು ಸೂಕ್ತ ಪರೀಕ್ಷೆ ನಡೆಸಿ, ಸರ್ಟಿಫಿಕೇಟ್ ನೀಡುತ್ತದೆ' ಎಂದು ಹೇಳಿದ್ದಾರೆ
ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯಿಂದ ಯಾವೆಲ್ಲ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದಿವೆ ಎಂದು ನೋಡುವುದಾದರೆ, ಎಸ್‌ಯುವಿ ವಿಭಾಗದಲ್ಲಿ ಸ್ಕೋಡಾ ಕುಶಾಕ್, ಪೋಕ್ಸ್‌ವ್ಯಾಗನ್ ಟೈಗುನ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋ ಎನ್ ಸೇರಿವೆ. ಸೆಡಾನ್ ವಿಭಾಗದಲ್ಲಿ ಇತ್ತೀಚೆಗೆ ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್ ಕಾರುಗಳು 5-ಸ್ಟಾರ್ ರೇಟಿಂಗ್ ಪಡೆದಿಕೊಂಡಿವೆ. ಇವೆರೆಡು ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.71 ಅಂಕಗಳನ್ನು ಗಳಿಸಿವೆ.
ಇನ್ನು, ಗ್ಲೋಬಲ್ ಎನ್‌ಸಿಎಪಿಯಲ್ಲಿ ಕಡಿಮೆ ರೇಟಿಂಗ್ ಪಡೆದರೆ, ಆ ಕಾರುಗಳು ಸಂಪೂರ್ಣ ಅಸುರಕ್ಷಿತವಲ್ಲ. ಸದ್ಯ, ಭಾರತದಲ್ಲಿ ಖರೀದಿಗೆ ಸಿಗುವ ಪ್ರತಿಯೊಂದು ಕಾರುಗಳು ಕೇಂದ್ರ ಸರ್ಕಾರ ಹೇಳುವ ಸುರಕ್ಷತಾ ಮಾನದಂಡಗಳನ್ನು ಹೊಂದಿರಬೇಕು. ಆಗಲೇ ಮಾರಾಟ ಮಾಡಲು ಸಾಧ್ಯ. ಜೊತೆಗೆ ಪ್ರತಿಯೊಬ್ಬರೂ ತಮ್ಮ ಎಚ್ಚರಿಕೆಯಲ್ಲಿ ಸಂಚಾರಿ ನಿಯಮ ಪಾಲಿಸಿಕೊಂಡು ಕಾರು ಚಲಾಯಿಸಿದರೆ ದೊಡ್ಡ ಮಟ್ಟದ ಅಪಘಾತವನ್ನು ತಪ್ಪಿಸಬಹುದು.


Click it and Unblock the Notifications