Jimny vs Thar: ಹಗ್ಗಜಗ್ಗಾಟದಲ್ಲಿ ಕಿಂಗ್ ಯಾರು? ಖದರ್ ತೋರಿದ ಮಾರುತಿ ಜಿಮ್ನಿ!
ಭಾರತದಲ್ಲೂ ಆಫ್‌ರೋಡಿಂಗ್ ವಾಹನಗಳಿಗೆ ಭಾರೀ ಬೇಡಿಕೆಯಿದೆ. ಸದ್ಯ ನಮ್ಮ ದೇಶದಲ್ಲಿ ಮಹೀಂದ್ರ ಥಾರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಜಿಮ್ನಿ 5-ಡೋರ್ ಪ್ರಸ್ತುತ ಆಫ್ ರೋಡ್ ಅಭಿಮಾನಿಗಳ ಟಾರ್ಗೆಟ್ ಆಗಿವೆ. ಇವು ಭಾರತದಲ್ಲಿ ಖರೀದಿಸಬಹುದಾದ ಅತ್ಯಂತ ಕೈಗೆಟುಕುವ 4×4 SUVಗಳು ಕೂಡ ಹೌದು.
ಮಾರುತಿ ಜಿಮ್ನಿಗಿಂತ ಮೊದಲೇ ಭಾರತೀಯ ಆಫ್‌ರೋಡ್ ಮಾರುಕಟ್ಟೆಯನ್ನು ಆಳಿದ ಕಾರು ಮಹೀಂದ್ರ ಥಾರ್. ಇದು ಪೆಟ್ರೋಲ್ ಹಾಗೂ ಡೀಸಲ್ ಎರಡೂ ಆವೃತ್ತಿಗಳಲ್ಲಿ ಬರುತ್ತದೆ, ಆದ್ರೆ ಮಾರುತಿ ಜಿಮ್ನಿ ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಮಾರುತಿ ಜಿಮ್ನಿ ಹಾಗೂ ಮಹೀಂದ್ರಾ ಥಾರ್ ಎರಡಕ್ಕೂ ಪ್ರತ್ಯೇಕ ಅಭಿಮಾನಿ ಬಳಗವಿದೆ.

ಅವುಗಳ ಸಾಮರ್ಥ್ಯಕ್ಕೆ ತಕ್ಕಂತ ಉತ್ತಮ ಕಾರುಗಳೆಂದೇ ಹೇಳಬಹುದು, ಆದರೆ ಎರಡೂ ಕಾರುಗಳು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಹೊಂದಿವೆ. ಈ ಕುರಿತ ಸುದ್ದಿಯನ್ನು ಈ ಹಿಂದೆಯೂ ನಮ್ಮ ಡ್ರೈವ್‌ಸ್ಪಾರ್ಕ್‌ನಲ್ಲಿ ಪ್ರಕಟಿಸಿಲಾಗಿದೆ. ಬೆಲೆ, ಫೀಚರ್ಸ್, ಪವರ್ ಎಲ್ಲದರಲ್ಲೂ ಇವು ಭಿನ್ನವಾಗಿವೆ. ಇದೀಗ ಥಾರ್ ಮತ್ತು ಜಿಮ್ನಿ ಪರಸ್ಪರ ಹಗ್ಗ ಜಗ್ಗಾಟದಲ್ಲಿ ಸ್ಪರ್ಧಿಸಿರುವ ಕುರಿತ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಕಮಲೇಶ್ ಬರಾಲಾ ಎಂಬವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಮಹೀಂದ್ರಾ ಥಾರ್ ಹೊಂದಿರುವ ವ್ಲಾಗರ್ ಮತ್ತು ಇತ್ತೀಚೆಗೆ ಮಾರುತಿ ಜಿಮ್ನಿ ಖರೀದಿಸಿದ ಸ್ನೇಹಿತ ಪರಸ್ಪರ ಸ್ಪರ್ಧಿಸುತ್ತಿರುವುದನ್ನು ಕಾಣಬಹುದು. ಇಲ್ಲಿ ಕಂಡುಬರುವ ಮಾಹೀಂದ್ರಾ ಥಾರ್ ಪೆಟ್ರೋಲ್ ಅಥವಾ ಡೀಸೆಲ್ ಆವೃತ್ತಿಯೇ ಎಂಬುದನ್ನು ತಿಳಿಸಿಲ್ಲ.

ಆದ್ರೆ ಓದುಗರು ಇಲ್ಲಿ ಒಂದನ್ನು ಗಮನಿಸಬೇಕು, ಮಹೀಂದ್ರಾ ಥಾರ್‌ನ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳು ಕೂಡ ಮಾರುತಿ ಜಿಮ್ನಿಗಿಂತ ಪವರ್ ಹೊಂದಿವೆ. ವಿಷಯಕ್ಕೆ ಬಂದರೆ, ಸ್ಪರ್ಧೆಗಾಗಿ ಎರಡೂ SUVಗಳಿಗೆ ಸರಿಯಾದ ಹಗ್ಗವನ್ನು ಬಳಿಸಲಾಗಿದೆ. ಮೊದಲ ಸುತ್ತಿನಲ್ಲಿ, ಜಿಮ್ನಿ ಮತ್ತು ಥಾರ್ ಎರಡೂ 2WD ಮೋಡ್‌ನಲ್ಲಿದ್ದು ಮಹೀಂದ್ರಾ ಥಾರ್ ತನ್ನ ಪವರ್ ತೋರಿ ಜಿಮ್ನಿಯನ್ನು ಸುಲಭವಾಗಿ ಎಳೆದೊಯ್ದಿದೆ.
ಮೊದಲ ಸುತ್ತಿನ ನಂತರ ಮಹೀಂದ್ರಾ ಥಾರ್ ಡ್ರೈವರ್ 2WD ನೊಂದಿಗೆ ಬರ್ತೀನಿ, ಜಿಮ್ನಿಯಲ್ಲಿ 4×4 ತೊಡಗಿಸಿಕೊಳ್ಳಲು ಸ್ನೇಹಿತನನ್ನು ಕಾಲೆಳೆದನು. ಆದ್ರೆ, 4×4 ತೊಡಗಿಸಿಕೊಂಡ ನಂತರ ಜಿಮ್ನಿ ಸಂಪೂರ್ಣ ಪವರ್ ತೋರಿದೆ. ಮಹೀಂದ್ರಾ ಥಾರ್ ಎಳೆಯಲು ಪ್ರಯತ್ನಿಸುತ್ತಿದ್ದರೂ ಜಿಮ್ನಿ ತನ್ನ ಸ್ಥಾನ ಬಿಟ್ಟು ಮುಂದಕ್ಕೂ ಹೋಗಲಿಲ್ಲ ಹಿಂದಕ್ಕೂ ಬರಲಿಲ್ಲ. ಕೊನೆಗೆ ಜಿಮ್ನಿಯನ್ನು ಥಾರ್ ಎಳೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಎರಡನೇ ಸುತ್ತನ್ನು ಟೈ ಎಂದು ಪರಿಗಣಿಸಲಾಯಿತು.
ಮೂರನೇ ಸುತ್ತಿನಲ್ಲಿ, ಮಾರುತಿ ಜಿಮ್ನಿ ಮತ್ತು ಮಹೀಂದ್ರಾ ಥಾರ್ ಎರಡೂ 4×4 ತೊಡಗಿಸಿಕೊಂಡವು, ಪರಸ್ಪರ ಎಳೆಯಲು ಪ್ರಾರಂಭಿಸಿದವು. ಮೊದಲ ಪ್ರಯತ್ನದಲ್ಲಿ, ಮಹೀಂದ್ರಾ ಥಾರ್ ಮ್ಯಾನುವಲ್ ಕಾರ್ ಆಗಿದ್ದರಿಂದ ಸ್ಥಗಿತಗೊಂಡಿತು. ಮಾರುತಿ ಜಿಮ್ನಿ ಆಟೋಮ್ಯಾಟಿಕ್ ಎಂಬಂತೆ ಕಾಣುತ್ತದೆ. ಮುಂದಿನ ಪ್ರಯತ್ನದಲ್ಲಿ ಎರಡೂ ವಾಹನಗಳು ಒಂದನ್ನೊಂದು ಎಳೆಯತೊಡಗಿದವು.
ಕೆಲ ಕಾರಣಗಳಿಂದಾಗಿ, ಮಹೀಂದ್ರ ಥಾರ್ ಮಾಲೀಕ ಬಯಸಿದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಮಾರುತಿ ಜಿಮ್ನಿ, ಥಾರ್ ಅನ್ನು ಸ್ವಲ್ಪಮಟ್ಟಿಗೆ ಎಳೆಯುವಲ್ಲಿ ಯಶಸ್ವಿಯಾಯಿತು. ಈ ಹಗ್ಗಜಗ್ಗಾಟದ ಸ್ಪರ್ಧೆಯಲ್ಲಿ ಮಹೀಂದ್ರಾ ಥಾರ್ ಗೆಲ್ಲದಿರಲು ಹಲವಾರು ಕಾರಣಗಳಿವೆ. ಥಾರ್ ಅನ್ನು ಉತ್ತಮವಾಗಿ ನಿರ್ವಹಿಸದಿರುವ ಕಾರಣ ಎಂಜಿನ್ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ.
ಮಹೀಂದ್ರಾ ಥಾರ್‌ನ ಚಾಲಕನಿಗೆ ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ಅನುಭವವಿಲ್ಲದಿರುವ ಸಾಧ್ಯತೆಯೂ ಇದೆ. ಎಲ್ಲದಕ್ಕೂ ಮುಖ್ಯವಾಗಿ ಇದು ಡೀಸಲ್ ಆವೃತ್ತಿಯಾಗಿರಬಹುದು. ನೀವೇಕೆ ಥಾರ್ ಬಗ್ಗೆ ಇಷ್ಟೊಂದು ಹೇಳುತ್ತೀರಿ ಎಂದು ನಮ್ಮನ್ನು ಪ್ರಶ್ನಿಸಿದರೆ? ನಮ್ಮ ಉತ್ತರವಿಷ್ಟೇ ಜಿಮ್ನಿಗಿಂತ ಥಾರ್ ತುಂಬಾ ಪವರ್ ಹೊರಹಾಕುತ್ತದೆ. ಹಾಗಾಗಿ ನಾವು ಥಾರ್ ಬಗ್ಗೆ ಈ ವಿವರಣೆ ನೀಡಿದ್ದೇವೆ. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications