ಕಿಯಾ ಸೆಲ್ಟೋಸ್-ಹ್ಯುಂಡೈ ಕ್ರೆಟಾ ಭೀಕರ ಅಪಘಾತ: ಸೇಫ್ ಆಗಿ ಹೊರಬಂದು ಕಾರು ಪರಿಶೀಲಿಸಿದ ಚಾಲಕರು
ಕಿಯಾ ಸೆಲ್ಟೋಸ್-ಹ್ಯುಂಡೈ ಕ್ರೆಟಾ ನಡುವೆ ನಡೆದ ಭೀಕರ ಅಪಘಾತವೊಂದರ ವಿಡಿಯೋ ಈಗ ವೈರಲ್ ಆಗಿದೆ. ರಸ್ತೆ ದಾಟಲು ಹಿಂದೆ ಮುಂದೆ ನೋಡುತ್ತಾ ಬಂದ ಕಿಯಾ ಸೆಲ್ಟೋಸ್‌ಗೆ ಹೈ ಸ್ಪೀಡ್‌ನಲ್ಲಿ ಬಂದ ಹ್ಯುಂಡೈ ಕ್ರೆಟಾ ಡಿಕ್ಕಿ ಹೋಡೆದಿದ್ದು, ಪ್ರಯಾಣಿಕರು ಸೇಫ್ ಆಗಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ನಡುವಿನ ಭೀಕರ ಅಪಘಾತವು ಮಹಾರಾಷ್ಟ್ರದ ಥಾಣೆಯಲ್ಲಿನ ಜಂಕ್ಷನ್ ವೊಂದರಲ್ಲಿ ನಡೆದಿದೆ. ಡ್ರೈವಿಂಗ್ ಮಾಡುವಾಗ ತಾಳ್ಮೆ ಇಲ್ಲದಿದ್ದರೇ ಅಪಘಾತಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ.

ತಾಳ್ಮೆ ಇಲ್ಲದ ಚಾಲಕರು: ಈ ಅಪಘಾತದಲ್ಲಿ ಇಬ್ಬರೂ ಚಾಲಕರದ್ದು ತಪ್ಪಿದೆ. ಮುಖ್ಯವಾಗಿ ಕಿಯಾ ಸೆಲ್ಟೋಸ್ ಚಾಲಕನದ್ದೇ ದೊಡ್ಡ ತಪ್ಪಾಗಿದೆ. ಒಂದು ರಸ್ತೆಯನ್ನು ದಾಟುವಾಗ ಎಡದಲ್ಲಿ ಬರುವ ವಾಹನಗಳನ್ನು ಗಮನಿಸುವುದು ಚಾಲಕರಿಗೆ ಇರಬೇಕಾದ ಪ್ರಮುಖ ಲಕ್ಷಣ. ಅಕ್ಕಪಕ್ಕದಲ್ಲಿ ಏನನ್ನೂ ಗಮನಿಸದೇ ಮುನ್ನುಗ್ಗಿದರೇ ಅಪಘಾತ ಖಚಿತ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.
ವೀಡಿಯೊದಲ್ಲಿ, ಕಿಯಾ ಸೆಲ್ಟೋಸ್ ಒಂದು ತಿರುವು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಾ ಹಿಂಜರಿದು ಒಂದೇ ಸಮನೇ ಮುಂದೆ ಹೋಗಿದೆ. ಈ ವೇಳೆ ಜಂಕ್ಷನ್ ಬಳಿ ನಿಧಾನಗೊಳಿಸಬೇಕು ಎಂಬ ಸಾಮನ್ಯ ಜ್ಞಾನವೂ ಇಲ್ಲದ ಹ್ಯುಂಡೈ ಕ್ರೆಟಾ ಚಾಲಕ ವೇಗವಾಗಿ ಬಂದಿದ್ದಾನೆ. ಈ ವೇಳೆ ಎದುರಿಗೆ ಬಂದ ಸೆಲ್ಟೋಸ್ ಅನ್ನು ನೋಡಿದ್ದಾನಾದರೂ ಬ್ರೇಕ್ ಹಿಡಿದು ನಿಯಂತ್ರಣಕ್ಕೆ ತರುವಷ್ಟರಲ್ಲಿ ಡಿಕ್ಕಿಯಾಗಿದೆ.

ಪರಿಣಾಮ ಡಿಕ್ಕಿಯ ರಭಸಕ್ಕೆ ಕಿಯಾ ಸೆಲ್ಟೋಸ್ ಹಾಗೂ ಹ್ಯುಂಡೈ ಕ್ರೆಟಾ ಒಂದು ರೌಂಡ್ ತಿರುಗಿವೆ. ಆದರೆ ಅದೃಷ್ಟವಶಾತ್, ಚಾಲಕರು ಮತ್ತು ಪ್ರಯಾಣಿಕರು ಅಪಘಾತದಿಂದ ಯಾವುದೇ ಹಾನಿಯಿಲ್ಲದೆ ಹೊರಬಂದಿದ್ದಾರೆ. ಅದೇನೇ ಇದ್ದರೂ, ಈ ಘಟನೆಯು ತಾಳ್ಮೆಯ ಅಗತ್ಯತೆಯನ್ನು ತೋರುತ್ತದೆ. ತಿರುವು ಪಡೆಯುವಾಗ ತಾಳ್ಮೆಯಿಂದ ಕಾದು ಕ್ರೆಟಾ ಹೋದ ಬಳಿಕ ಹೋಗಿದ್ದರೇ ಘಟನೆ ಸಂಭವಿಸುತ್ತಿರಲಿಲ್ಲ.
ನಮಗೆ ತಿಳಿದಿರುವಂತೆ ಕಿಯಾ ಸೆಲ್ಟೋಸ್ ಚಾಲಕ ಹ್ಯುಂಡೈ ಕ್ರೆಟಾದ ದೂರವನ್ನು ತಪ್ಪಾಗಿ ಗ್ರಹಿಸಿದ್ದಾನೆ. ಕ್ರೆಟಾ ನಿಧಾನಗೊಳ್ಳುತ್ತದೆ ಎಂದು ಭಾವಿಸಿದ್ದಾನೆ. ಮತ್ತೊಂದೆಡೆ, ಹ್ಯುಂಡೈ ಕ್ರೆಟಾ ಚಾಲಕ ನಿಧಾನಗೊಳಿಸದೆ ಅದೇ ವೇಗದಲ್ಲಿ ಬಂದಿರುವುದು ಅಪಘಾತಕ್ಕೆ ಕಾರಣವಾಗಿರಬಹುದು. ಆದರೂ ಇಂತಹ ಸಂಧರ್ಭಗಳಲ್ಲಿ ತಡವಾದ್ರೂ ಚಿಂತೆಯಿಲ್ಲ, ತುಸು ಕಾದು ನಂತರ ಹೋದರೆ ಯಾವುದೇ ಅನುಹುತವನ್ನು ತಪ್ಪಿಸಬಹುದು.
ಅಧ್ಯಯನಗಳ ಪ್ರಕಾರ, ಪ್ರಮುಖ ಅಪಘಾತಗಳು ಮುಖ್ಯವಾಗಿ ದೊಡ್ಡ ಮೆಟ್ರೋ ಪಾಲಿಟನ್ ನಗರಗಳಲ್ಲಿ ಸಂಭವಿಸುತ್ತವೆ. ಈ ಪಟ್ಟಿಯಲ್ಲಿ ನವದೆಹಲಿ ಅಗ್ರಸ್ಥಾನದಲ್ಲಿದ್ದರೆ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ. ನವದೆಹಲಿ 20.3% ರಷ್ಟು ಅತಿ ಹೆಚ್ಚು ಅಪಘಾತ ಪ್ರಮಾಣವನ್ನು ಹೊಂದಿದ್ದರೆ, ಮುಂಬೈ 18.8% ಅಪಘಾತ ದರದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಆಶ್ಚರ್ಯಕರವಾಗಿ, ಕಡಿಮೆ ಅಪಘಾತ ಪೀಡಿತ ಮೆಟ್ರೋ ಪಾಲಿಟನ್ ನಗರವೆಂದರೆ ನಮ್ಮ ಬೆಂಗಳೂರು, ಅದರೆ ನಿರಂತರ ಟ್ರಾಫಿಕ್ ಜಾಮ್‌ನಿಂದಾಗಿ ಆಗ್ಗಾಗೆ ಟೀಕಿಸಲ್ಪಡುತ್ತದೆ. ಅತಿಯಾದ ವೇಗ, ಚಾಲನೆ ಮಾಡುವಾಗ ಫೋನ್ ನಲ್ಲಿ ಮಾತನಾಡುವುದು ಮತ್ತು ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸುವುದು ಮುಂತಾದ ಬೇಜವಾಬ್ದಾರಿಯುತ ಚಾಲನಾ ನಡವಳಿಕೆಗಳಿಂದಲೇ ಅಪಘಾತಗಳು ಹೆಚ್ಚಾಗಿ ನಡೆಯುತ್ತವೆ.


Click it and Unblock the Notifications