Ligier Myli: ಪುಟ್ಟ ಲಿಜಿಯರ್ ಮೈಲಿ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಕಂಡುಬಂತು.. ಹೊಸ ಪರ್ವ ಆರಂಭ!
ಭಾರತದ ದೊಡ್ಡ ನಗರಗಳಲ್ಲಿ ಜನಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದಕ್ಕೆ ತಕ್ಕಂತೆ ವಾಹನಗಳು ಹೆಚ್ಚಾಗುತ್ತಿದ್ದು, ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಹಾಗೂ ವಾಯುಮಾಲಿನ್ಯವೂ ಹೇರಳವಾಗುತ್ತಿದೆ. ಇದನೆಲ್ಲ ಮನಗಂಡಿರುವ ಕೆಲವು ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಗಳು ನಗರ ಸಂಚಾರಕ್ಕೆ ಯೋಗ್ಯವಾಗುವಂತೆ ಪುಟ್ಟ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ.
ಇತ್ತೀಚೆಗೆ ಖಾಸಗಿ ವೆಬ್‌ಸೈಟ್‌ವೊಂದು ಪ್ರಖ್ಯಾತ ಫ್ರೆಂಚ್ ವಾಹನ ತಯಾರಕ ಕಂಪನಿಯಾಗಿರುವ ಲಿಜಿಯರ್ (Ligier) ಭಾರತದ ರಸ್ತೆಯಲ್ಲಿ ತನ್ನ ಕಾಂಪ್ಯಾಕ್ಟ್ ಸೈಜ್ ಎಲೆಕ್ಟ್ರಿಕ್ ಕಾರು ಮೈಲಿ (Myli)ಯನ್ನು ಪರೀಕ್ಷಿಸಿದೆ ಎಂದು ವರದಿ ಮಾಡಿದೆ. ಇದು 2 ಡೋರ್ ಆಯ್ಕೆಯೊಂದಿರುವ ಮೈಕ್ರೋ ಇವಿಯಾಗಿದ್ದು, ಶೀಘ್ರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಬಹುತೇಕರಿಗೆ ಈ ಲಿಜಿಯರ್ ಕಂಪನಿ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಇದು, ಯುರೋಪ್ ದೇಶಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದೆ. ಫ್ರೆಂಚ್ ವಾಹನ ತಯಾರಕ 'ಲಿಜಿಯರ್' ರೇಸಿಂಗ್ ಮೂಲಕವೇ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. 1970 - 1975ರ ನಡುವೆ 24 ಗಂಟೆಗಳ 'ಲೆ ಮ್ಯಾನ್ಸ್' ರೇಸ್ ಹಾಗೂ 1976 - 1996ರ ಅವಧಿಯಲ್ಲಿ 'ಫಾರ್ಮುಲಾ 1 ರೇಸ್'ನಿಂದ ಹೆಸರುವಾಸಿಯಾಗಿತ್ತು.
ಲಿಜಿಯರ್ ಕಂಪನಿ ತನ್ನ 50ನೇ ವರ್ಷಾಚರಣೆ ವೇಳೆ, ಹೊಸ ಸ್ಪೋರ್ಟ್ಸ್ ಕಾರು ಬಿಡುಗಡೆಗೊಳಿಸುತ್ತದೆ ಎಂದು ಹೇಳಲಾಗಿತ್ತು. ಅದೇಕೋ ಆ ಯೋಜನೆಯನ್ನು ಕೈ ಬಿಟ್ಟಿರುವ ರೀತಿ ಕಾಣುತ್ತಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ತನ್ನ 'ಮೈಲಿ' ಮೈಕ್ರೋ ಎಲೆಕ್ಟ್ರಿಕ್ ಕಾರನ್ನೇ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಲಾಂಚ್ ಮಾಡಲು ತಯಾರಿ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಲಿಜಿಯರ್ 'ಮೈಲಿ' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ಯುರೋಪ್‌ನಲ್ಲಿ ನಾಲ್ಕು ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ವೇರಿಯೆಂಟ್ ಗೆ ಅನುಗುಣವಾಗಿ ಸಂಪೂರ್ಣ ಚಾರ್ಜ್‌ನಲ್ಲಿ 63 ರಿಂದ 123 ಕಿಲೋಮೀಟರ್ ರೇಂಜ್ ನೀಡುತ್ತದೆ. ಅದರಲ್ಲೂ ಭಾರತದಂತಹ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಈ ಮೈಲಿ ಕಾರನ್ನು ಓಡಿಸುವುದು ತುಂಬಾ ಸುಲಭ. ಪಾರ್ಕಿಂಗ್ ಸಮಸ್ಯೆಯು ಕಾಡುವುದಿಲ್ಲ.
ದೇಶದಲ್ಲಿ ಲಿಜಿಯರ್ ಮೈಲಿ ಎಲೆಕ್ಟ್ರಿಕ್ ಕಾರಿಗೆ 2 ಡೋರ್ ವಿಭಾಗದಲ್ಲಿ ಯಾವುದಾದರೂ ನೇರ ಪ್ರತಿಸ್ಪರ್ಧಿಯಾಗುವ ಕಾರೆಂದರೇ ಅದು ಎಂಜಿ ಕಾಮೆಟ್ ಇವಿ. ಭಾರತದ ಮಾರುಕಟ್ಟೆಯಲ್ಲಿ ಕಾಮೆಟ್ ಇವಿ ರೂ.7.98 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದರಲ್ಲಿ 17.3 KWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಉಪಯೋಗ ಮಾಡಲಾಗಿದ್ದು, ಫುಲ್ ಚಾರ್ಜ್‌ನಲ್ಲಿ 230 km ರೇಂಜ್ ನೀಡುತ್ತದೆ.
ಎಂಜಿ ಕಾಮೆಟ್ ಇವಿ ಸಂಪೂರ್ಣ ಬ್ಯಾಟರಿ 3.3 kW ಚಾರ್ಜರ್ ಆಯ್ಕೆಯಲ್ಲಿ 7 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಇದೊಂದು ಸಣ್ಣ ಕಾರು ಆಗಿದ್ದರೂ ದೇಶೀಯ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25-ಇಂಚಿನ ಸ್ಕ್ರೀನ್, ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.
ಇನ್ನು, ಎಂಜಿ ಕಾಮೆಟ್ ಇವಿಗೆ ನೇರ ಫೈಟ್ ನೀಡುತ್ತದೆ ಎಂದು ಹೇಳಲಾಗುವ ಲಿಜಿಯರ್ ಮೈಲಿ ಎಲೆಕ್ಟ್ರಿಕ್ ಕಾರು, ಅತ್ಯಂತ ಕಡಿಮೆ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಬಹುದು. ಸರಿ ಸುಮಾರು ರೂ.5 ರಿಂದ 6 ಲಕ್ಷ ಬೆಲೆಯಲ್ಲಿ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಮುಂಬರುವ ದಿನಗಳಲ್ಲಿ ಲಿಜಿಯರ್ ಮೈಲಿ ಭಾರತದಲ್ಲಿ ಹೆಚ್ಚಿನ ಯುವ ಗ್ರಾಹಕರನ್ನು ಸೆಳೆದರೂ ಆಶ್ಚರ್ಯಪಡುವ ಅಗತ್ಯವಿಲ್ಲ.


Click it and Unblock the Notifications