ಮಧ್ಯಮ ವರ್ಗದವರ ನೆಚ್ಚಿನ Maruti 800 ಮೊದಲ ಕಾರು ವಿತರಣೆಯಾಗಿ 40 ವರ್ಷ: ನಿಮಗೆ ಗೊತ್ತಿಲ್ಲದ ವಿಚಾರಗಳಿವು
ಪ್ರತಿಯೊಬ್ಬರಿಗೂ ಜೀವನದಲ್ಲಿ ಕಾರು ಖರೀದಿಸಬೇಕೆಂಬುದು ಬಹುದೊಡ್ಡ ಆಸೆಯಾಗಿರುತ್ತದೆ. ಆದರೆ, ಭಾರತದಂತಹ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಿದ್ದು, 80 - 90 ದಶಕದಲ್ಲಿ ಕಾರುಗಳು ಕೈಗೆಟುಕದ ಸರಕಾಗಿತ್ತು. ಆಗ ಒಮ್ಮೆಲೇ ಬಿರುಗಾಳಿಯಂತೆ ಕಡಿಮೆ ಬೆಲೆಯ ಮಾರುತಿ 800 (Maruti 800) ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿ, ಹಲವರ ಕನಸನ್ನು ನನಸು ಮಾಡಿತ್ತು.
ಮಾರುತಿ ಉದ್ಯೋಗ್ ಲಿಮಿಟೆಡ್ (Maruti Udyog Limited) ಹಾಗೂ ಜಪಾನ್ ದೇಶದ ಸುಜುಕಿ ಮೋಟಾರ್ (Suzuki Motor) ಪಾಲುದಾರಿಕೆಯಲ್ಲಿ ಮಾರುತಿ 800 ಕಾರನ್ನು 1983ರಲ್ಲಿ ಬಿಡುಗಡೆ ಮಾಡಲಾಗಿತ್ತು. ಮೊದಲ ಯುನಿಟ್ ಕಾರನ್ನು ಅದೇ ವರ್ಷದ ಡಿಸೆಂಬರ್ 14ರಂದು ಲಕ್ಕಿ ಡ್ರಾ ಮೂಲಕ ಆಯ್ಕೆಯಾದ ದೆಹಲಿಯ ಇಂಡಿಯನ್ ಏರ್‌ಲೈನ್ಸ್ (Indian Airlines) ಉದ್ಯೋಗಿ ಹರ್ಪಾಲ್ ಸಿಂಗ್ ಅವರಿಗೆ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಕೀಯನ್ನು ಹಸ್ತಾಂತರಿಸಿದ್ದರು.

ಈ ಮಾರುತಿ 800 ಕಾರು, ಆ ದಿನಮಾನಗಳಲ್ಲಿ ಹಿಂದೂಸ್ತಾನ್ ಮೋಟರ್‌ನ ಅಂಬಾಸಿಡರ್ ಮತ್ತು ಪ್ರೀಮಿಯರ್ ಪದ್ಮಿನಿ ಕಾರುಗಳಿಗೆ ಪರ್ಯಾಯವಾಗಿ ಬೆಳೆದು, ವಾಹನ ಉದ್ಯಮದಲ್ಲಿ ಕ್ರಾಂತಿಯನ್ನು ಸೃಷ್ಟಿಸಿತ್ತು. ನಿಮಗೆ ಆಶ್ಚರ್ಯವಾಗಬಹುದು ಹರ್ಪಾಲ್ ಸಿಂಗ್ ಅವರು ವಿತರಣೆ ಪಡೆದ ಮೊದಲ ಕಾರಿನ ಬೆಲೆ ರೂ.47000 ಅಷ್ಟೇ. ಆ ಕಾರು, 'ಡಿಐಎ 6479' ನೊಂದಣಿ ಸಂಖ್ಯೆಯನ್ನು ಹೊಂದಿತ್ತು.
ಹರ್ಪಾಲ್ ಸಿಂಗ್ ಮಾರುತಿ 800 ಕಾರನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದರು. ಆದರೆ, 2010ರಲ್ಲಿ ಅವರು ನಿಧನರಾದಾಗ ಈ ಕಾರು ಮೂಲೆ ಸೇರಿತ್ತು. ಈಗ, ಮಾರುತಿ ಸುಜುಕಿ ಕಂಪನಿ ಹರ್ಪಾಲ್ ಕುಟುಂಬಸ್ಥರಿಂದ ಈ ಕಾರನ್ನು ಹಿಂಪಡೆದುಕೊಂಡು, ಮತ್ತೆ ಹೊಸದಾಗಿ ನವೀಕರಣಗೊಳಿಸಿದೆ. ಈ ಫೋಟೋವನ್ನು ಕಳೆದ ವರ್ಷ ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದನ್ನು ಸ್ಮರಿಸಬಹುದು.

ಆಗ, ಭಾರತದ ಕಾರು ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತಿದ್ದ ಇತರೆ ಕಂಪನಿ ಕಾರುಗಳಿಗೆ ಹೋಲಿಸಿದರೆ, ಮಾರುತಿ 800 ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದರಿಂದ ಬೇಗನೇ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಕಂಪನಿಯು 1986-87ರಲ್ಲಿ 1 ಲಕ್ಷ ಯುನಿಟ್, 1992-93ರಲ್ಲಿ 5 ಲಕ್ಷ ಯುನಿಟ್ ಮತ್ತು 1996-97ರ ವೇಳೆಗೆ 10 ಲಕ್ಷ ಯುನಿಟ್ ಮಾರುತಿ 800 ಕಾರುಗಳನ್ನು ಉತ್ಪಾದಿಸಲಾಗಿತ್ತು.
ಅದು 1999-2000ರಲ್ಲಿ 15 ಲಕ್ಷ ಯುನಿಟ್ ಮೈಲಿಗಲ್ಲನ್ನು ದಾಟಿತ್ತು. 2002-03ರ ವೇಳೆಗೆ 20 ಲಕ್ಷ ಯುನಿಟ್, 2005-06ರಲ್ಲಿ 25 ಲಕ್ಷ ಯುನಿಟ್ ಕಾರುಗಳನ್ನು ತಯಾರಿಸಲಾಗಿತ್ತು. ಆದಾಗ್ಯೂ, 2000 ಆಚೆಗೆ ಇತರೆ ಕಂಪನಿಗಳಿಂದ ಹೊಸ ತಂತ್ರಜ್ಞಾನ, ವೈಶಿಷ್ಟ್ಯ ಹಾಗೂ ವಿನ್ಯಾಸದ ಕಾರುಗಳು ಮಾರುಕಟ್ಟೆಗೆ ಬಂದವು. ಜೊತೆಗೆ ಕಡ್ಡಾಯ ಎಮಿಷನ್ ಮಾನದಂಡಗಳಿಂದ ಜನವರಿ 18, 2014ರಲ್ಲಿ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಅಲ್ಲಿಯವರೆಗೆ 29.2 ಲಕ್ಷ ಯುನಿಟ್ ತಯಾರಿಸಲಾಗಿತ್ತು.

ಮಾರುತಿ 800ನ್ನು ನಿಲ್ಲಿಸಿದಾಗ ರೂ.2.06 ಲಕ್ಷದಿಂದ ರೂ.2.38 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. ಪೆಟ್ರೋಲ್ ಹಾಗೂ ಎಲ್‌ಪಿಜಿ ಎಂಜಿನ್ ಆಯ್ಕೆಯಲ್ಲಿ ಸಿಗುತ್ತಿತ್ತು. ಅದಕ್ಕೆ ತಕ್ಕಂತೆ 14.0 - 16.1 kmpl ಮೈಲೇಜ್ ನೀಡುತ್ತಿತ್ತು. ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ದೊರೆಯುತ್ತಿತ್ತು. ಆ ಕಾರಿನ ಜಾಗಕ್ಕೆ ಮಾರುತಿ ಸುಜುಕಿ ಕಂಪನಿ, ಆಲ್ಟೊ 800 ಕಾರನ್ನು ತಂದಿತ್ತು.
ಈ ವರ್ಷದ (2023) ಏಪ್ರಿಲ್ ನಲ್ಲಿ ಮಾರುತಿ ಸುಜುಕಿ ಆಲ್ಟೊ 800 ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತು. ಕೆಲವೊಂದು ಡೀಲರ್‌ಶಿಪ್ ನಲ್ಲಿ ಉಳಿದಿರುವ ಸ್ಟಾಕ್‌ನ್ನು ಮಾರಾಟ ಮಾಡಲಾಗುತ್ತಿದೆ. ಈ ಕಾರು, ರೂ.3.54 ಲಕ್ಷದಿಂದ ರೂ.5.13 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 22.05 kmpl ಮೈಲೇಜ್ ನೀಡುತ್ತದೆ.
ಸದ್ಯ, ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಕಾರಾಗಿ ಆಲ್ಟೊ ಕೆ10 ಇದ್ದು, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದ್ದು, 24.39 - 24.9 kmpl ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.


Click it and Unblock the Notifications