ಪ್ರಧಾನಿಗಳಿಂದ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಇಂದು ಉದ್ಘಾಟನೆ: ವಿಶೇಷತೆಗಳೇನು?
ಬಹುನಿರೀಕ್ಷಿತ ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಹೆದ್ದಾರಿಯಿಂದ ಕೈಗಾರಿಕಾ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದಿದೆ. ಇದೊಂದು ದಶಪಥದ ಹೆದ್ದಾರಿಯಾಗಿದ್ದು, ಯಾವೆಲ್ಲ ವಿಶೇಷತೆ ಹೊಂದಿದೆ ಎಂಬುದನ್ನು ತಿಳಿಯೋಣ.
ಈ ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದ ಮೈಸೂರು ಭಾಗದ ಜನರಿಗೆ ಪ್ರಯಾಣದ ಅವಧಿಯು ತುಂಬಾ ಕಡಿಮೆಯಾಗಲಿದೆ. ಈ ಹಿಂದೆ, ಬೆಂಗಳೂರಿನಿಂದ ಮೈಸೂರು ತಲುಪಲು ಸರಿ ಸುಮಾರು 150 ನಿಮಿಷ ಆಗುತ್ತಿತ್ತು. ಅದು ಕೇವಲ 90 ನಿಮಿಷಕ್ಕೆ ಇಳಿಕೆಯಾಗಲಿದೆ. 118 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್ ವೇ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಮಾಡಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನಿಂದ ಚನ್ನಪಟ್ಟಣದ ನಿಡಘಟ್ಟದವರೆಗೂ (56 ಕಿಲೋಮೀಟರ್ ಉದ್ದ), ಎರಡನೇ ಹಂತದಲ್ಲಿ ನಿಡುಘಟ್ಟದಿಂದ ಮೈಸೂರಿನವರೆಗೆ (61 ಕಿಲೋಮೀಟರ್) ನಡೆಸಲಾಗಿದೆ.

ಈ ದಶಪಥ ರಸ್ತೆ (NH-275) ನಿರ್ಮಿಸಲು ಬರೋಬ್ಬರಿ ರೂ.8172 ಕೋಟಿಯನ್ನು ವ್ಯಯಿಸಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ನಿರ್ಮಾಣ ಕಾಮಗಾರಿಯನ್ನು ಮಾಡಿ ಮುಗಿಸಿದೆ. ಪ್ರಮುಖ ಪ್ರವಾಸಿ ತಾಣಗಳಾದ ಊಟಿ, ಕೇರಳ ಹಾಗೂ ಕೊಡಗಿನ ವಿವಿಧ ಸ್ಥಳಗಳಿಗೂ ಸಂಪರ್ಕಿಸುತ್ತದೆ. ಈ ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸ್ಪೂರ್ತಿದಾಯಕ ನಾಯಕತ್ವದಲ್ಲಿ ನಿರ್ಮಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಹೆದ್ದಾರಿಯಲ್ಲಿ ಎರಡು ಕಡೆ ತಲಾ ಮೂರು ಲೈನ್ ಒಳಗೊಂಡಿರುವ 6 ಲೈನ್‌ನ ಎಕ್ಸ್‌ಪ್ರೆಸ್ ವೇ ಇರಲಿದೆ. ಉಳಿದಂತೆ ಎರಡು ಬದಿಯಲ್ಲಿ ತಲಾ 2 ಲೈನ್‌ನ ಸರ್ವಿಸ್ ರಸ್ತೆ ಹೊಂದಿದೆ. 9 ದೊಡ್ಡ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್‌ಪಾಸ್ ಹಾಗೂ 13 ಪಾದಚಾರಿ ಅಂಡರ್ ಪಾಸ್‍ಗಳು ಇರಲಿವೆ. ಅಲ್ಲದೆ, ಚನ್ನಪಟ್ಟಣ ಸಮೀಪ ರೆಸ್ಟ್ ಏರಿಯಾ ನಿರ್ಮಾಣಕ್ಕೆ 50 ಎಕರೆ ಭೂಮಿ ಖರೀದಿಸಿ, ಅಲ್ಲಿಯೇ, ಟ್ರಾಮಾ ಸೆಂಟರ್ ಸ್ಥಾಪಿಸಿ, ಅಪಘಾತಗಳಾದಾಗ ತುರ್ತು ಚಿಕಿತ್ಸೆ ನೀಡಲು ಯೋಜನೆಯನ್ನು ರೂಪಿಸಲಾಗಿದೆ.

ಇನ್ನು, ನಿನ್ನೆ (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಅವರು, ಟ್ವೀಟ್ ಮಾಡಿ, ಈ ಎಕ್ಸ್‌ಪ್ರೆಸ್ ವೇಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. 'ಮಾರ್ಚ್ 12ರಂದು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ದೇಶಕ್ಕೆ ಸಮರ್ಪಣೆಯಾಗಲಿದೆ. ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿಗೂ ಶಂಕುಸ್ಥಾಪನೆ ನಡೆಯಲಿದೆ. ಈ ಯೋಜನೆಗಳು ಸಂಪರ್ಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜನಕಾರಿಯಾಗಲಿದೆ' ಎಂದು ಹೇಳಿದ್ದರು.
ಕಳೆದ ತಿಂಗಳು ದೇಶದ ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಂದೇ ಭಾರತ್ ರೈಲು, ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಸೇತುವೆ ಕೆಳಗೆ ಹಾದುಹೋಗುವ ಡ್ರೋನ್ ದೃಶ್ಯಗಳನ್ನು ಹಂಚಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದಕ್ಕೆ ಅವರು, 'ವಿಶ್ವದರ್ಜೆಯ ಗುಣಮಟ್ಟದ ಮೂಲಸೌಕರ್ಯದ ಅಭಿವೃದ್ಧಿಯು ಭಾರತವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ' ಎಂದು ಶೀರ್ಷೆಕೆಯನ್ನು ಬರೆದುಕೊಂಡಿದ್ದರು.

ಫೆಬ್ರವರಿಯಲ್ಲಿ ಈ ಹೆದ್ದಾರಿಯಲ್ಲಿ ಟೋಲ್ ಶುಲ್ಕ ವಿಧಿಸಲು ತೀರ್ಮಾನಿಸಲಾಗಿತ್ತು. ಆ ಬಳಿಕ, ಸಾರ್ವಜನಿಕರ ವಿರೋಧ ವ್ಯಕ್ತವಾಗಿದ್ದರಿಂದ ಮಾರ್ಚ್ 15ರ ನಂತರ ಟೋಲ್ ಸಂಗ್ರಹಕ್ಕೆ ನಿರ್ಧರಿಸಲಾಗಿದೆ. ವಾಹನ ಮಾದರಿ ಆಧರಿಸಿ ರೂ.135 ರಿಂದ ರೂ.720 ಶುಲ್ಕ ಪಾವತಿಸಬೇಕು. ಎಕ್ಸ್‌ಪ್ರೆಸ್ ವೇಯಲ್ಲಿ ಸೆಪ್ಟೆಂಬರ್‌ನಿಂದ ವಾಹನಗಳ ಸಂಚಾರ ಶುರುವಾಗಿದ್ದು, 335ಕ್ಕೂ ಅಪಘಾತ ಪ್ರಕರಣಗಳು ವರದಿಯಾಗಿದ್ದು, 80ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಒಟ್ಟಾರೆಯಾಗಿ, ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ಇಂದು ಉದ್ಘಾಟನೆಯಾಗಲಿದೆ. ಇದರಿಂದ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಅಭಿವೃದ್ಧಿಯಾಗಲಿದ್ದು, ರಾಜ್ಯದ ಬೆಳವಣಿಗೆಗೆ ಪೂರಕವಾಗಲಿದೆ. ಜೊತೆಗೆ ಈ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಹೆದ್ದಾರಿ ಪ್ರಾಧಿಕಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಹೆದ್ದಾರಿಯಿಂದ ಸಾಂಸ್ಕೃತಿಕ ನಗರಿ ಮೈಸೂರು ಮತ್ತಷ್ಟು ಪ್ರಗತಿಯಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ


Click it and Unblock the Notifications