ಸಂಪೂರ್ಣ ಎಥನಾಲ್‌ನಲ್ಲಿ ಚಲಿಸುವ ಟೊಯೊಟಾ ಕ್ಯಾಮ್ರಿ ಆಗಸ್ಟ್‌ನಲ್ಲಿ ಬಿಡುಗಡೆ: ನಿತಿನ್ ಗಡ್ಕರಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಟೊಯೊಟಾ ಕ್ಯಾಮ್ರಿ ಎಥನಾಲ್ ಅಥವಾ ಫ್ಲೆಕ್ಸ್-ಫ್ಯೂಯಲ್ ಆವೃತ್ತಿಯನ್ನು ಆಗಸ್ಟ್ 2023 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಎಥನಾಲ್ ಚಾಲಿತ ಟೊಯೊಟಾ ಕಾರನ್ನು ಈಗಾಗಲೇ ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾಗಿತ್ತು.
ಫ್ಲೆಕ್ಸ್-ಇಂಧನ ಕಾರುಗಳು ಎಥೆನಾಲ್‌ನಂತಹ ಪರ್ಯಾಯ ಇಂಧನಗಳಲ್ಲಿ ಚಲಿಸಬಲ್ಲವು, ಜೊತೆಗೆ ಇವು ಕಾರ್ಬನ್‌ನಂತಹ ಹಾನಿಕಾರಕಗಳನ್ನು ಹೊರಸೂಸುವುದಿಲ್ಲ. 2022 ಅಕ್ಟೋಬರ್‌ನಲ್ಲಿ ಗಡ್ಕರಿ ಅವರು ಈ ಫ್ಲೆಕ್ಸ್-ಇಂಧನ ಟೊಯೊಟಾ ಕೊರೊಲ್ಲಾ ಆಲ್ಟಿಸ್ ತಯಾರಿಗೆ ಚಾಲನೆ ನೀಡಿದ್ದರು. ಇದರ ಮುಖ್ಯ ಉದ್ದೇಶ ಪೆಟ್ರೋಲ್, ಡೀಸಲ್‌ಗಳನ್ನು ಕಡೆಗಣಿಸಿ ಜೈವಿಕ ಇಂಧನದಲ್ಲೂ ಕಾರುಗಳನ್ನು ಓಡಿಸಬಹುದು ಎಂಬುದನ್ನು ತೋರಿಸುವುದಾಗಿದೆ.

ಕಳೆದ ಭಾನುವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ವರ್ಷದ ಆಗಸ್ಟ್‌ನಲ್ಲಿ ಟೊಯೊಟಾ ಕ್ಯಾಮ್ರಿಯಿಂದ ಪ್ರಾರಂಭವಾಗುವ ಎಥೆನಾಲ್ ಆಧಾರಿತ ವಾಹನಗಳನ್ನು ಶೀಘ್ರದಲ್ಲೇ ದೇಶದಲ್ಲಿ ಪರಿಚಯಿಸಲಾಗುವುದು. ಈ ಮೂಲಕ ಕೇವಲ ಎಥೆನಾಲ್ ಆಧಾರಿತ ಇಂಧನ ಅಥವಾ ಫ್ಲೆಕ್ಸ್-ಇಂಧನದಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಭಾರತದಲ್ಲಿ ಸಂಚರಿಸಲಿವೆ ಎಂದರು.
ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಪೆಟ್ರೋಲ್ ಮತ್ತು ಡೀಸೆಲ್‌ನಂತಹ ದುಬಾರಿ ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಪರ್ಯಾಯ ಇಂಧನದಲ್ಲಿ ಚಲಿಸುವ ವಾಹನಗಳನ್ನು ಹೊಂದುವ ಅಗತ್ಯವನ್ನು ಒತ್ತಿ ಹೇಳಿದರು. ಇದೇ ವೇಳೆ ಆಗಸ್ಟ್‌ನಲ್ಲಿ ಟೊಯೊಟಾ ಕ್ಯಾಮ್ರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಇದು ಕೇವಲ ಎಥೆನಾಲ್‌ನಿಂದ ಚಲಿಸಬಲ್ಲ ಭಾರತದ ಮೊದಲ ಕಾರು. ಐಷಾರಾಮಿ ಸೆಡಾನ್ ಕೂಡ ಆಗಿದ್ದು, ಜೊತೆಗೆ ಶೇ.40ರಷ್ಟು ಎಲೆಕ್ಟ್ರಿಕ್ ಪವರ್ ಉತ್ಪಾದಿಸುವ ಸಾಮರ್ಥ್ಯವಿದೆ ಎಂದ ಅವರು, ಮುಂಬರುವ ದಿನಗಳಲ್ಲಿ ದೇಶದಲ್ಲಿ ಬಜಾಜ್, ಟಿವಿಎಸ್ ಮತ್ತು ಹೀರೋ ಸ್ಕೂಟರ್‌ಗಳು ಶೇ 100 ರಷ್ಟು ಎಥೆನಾಲ್‌ನಲ್ಲಿ ಚಲಿಸುವ ತಂತ್ರಜ್ಞಾನದೊಂದಿಗೆ ಬರಲಿವೆ ಎಂದು ಗಡ್ಕರಿ ಹೇಳಿದರು.
ಕೇಂದ್ರವು ಪರ್ಯಾಯ ಇಂಧನದ ಮೇಲೆ ಆಸಕ್ತಿ ತೋರಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಳೆದೆರಡು ವರ್ಷಗಳಿಂದ ಸತತ ಏರಿಕೆಗಳಿಂದ ಎರಡೂ ಇಂಧನಗಳ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಹಾಗಾಗಿ ಭಾರತವು 2025 ರ ವೇಳೆಗೆ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿದೆ. EV ಗಳಿಗೆ ಹೋಗಲು ಬಯಸದವರಿಗೆ ಎಥೆನಾಲ್ ಪರಿಹಾರವನ್ನು ಒದಗಿಸುತ್ತದೆ ಎಂದರು.

ಎಥೆನಾಲ್ ಮೂಲತಃ ಈಥೈಲ್ ಆಲ್ಕೋಹಾಲ್ ಆಗಿದ್ದು ಇದನ್ನು ಕಾಕಂಬಿ, ಧಾನ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಒಟ್ಟು ಹೊರಸೂಸುವಿಕೆಗೆ ಶೇಕಡಾ 15 ರಷ್ಟು ಕೊಡುಗೆ ನೀಡುವ ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ಭಾರತದಲ್ಲಿ ಎಥೆನಾಲ್ ಮಿಶ್ರಣ ಮತ್ತು ಎಲೆಕ್ಟ್ರಿಕ್ ವಾಹನದ ಅಳವಡಿಕೆಯು ಜೊತೆಯಲ್ಲಿ ಹೋಗುತ್ತದೆ ಎಂದು ICRA ದ ಅಧ್ಯಯನವು ಹೇಳುತ್ತಿದೆ.
ಪೆಟ್ರೋಲ್‌ಗೆ ಪರ್ಯಾಯವಾಗಿ ಹಸಿರು ಇಂಧನವನ್ನು ಬಳಸುವುದರಿಂದ ಬಹುಮುಖಿ ಪ್ರಯೋಜನಗಳಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ದೃಢವಾಗಿ ನಂಬಿದ್ದಾರೆ. ಹಾಗೆಯೇ ಭಾರತವು ತನ್ನ ಕಚ್ಚಾ ತೈಲ ಆಮದನ್ನು ಗಣನೀಯವಾಗಿ ತಗ್ಗಿಸಬಹುದು. ಎಥೆನಾಲ್ ಆಧಾರಿತ ಇಂಧನಕ್ಕೆ ಬದಲಾಯಿಸುವುದು ಪರಿಸರಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಭಾವಿಸಿದ್ದಾರೆ.


Click it and Unblock the Notifications