Tata - Mg - Citroen: ಉತ್ತಮ ರೇಂಜ್.. ಕೈಗೆಟುಕುವ ಬೆಲೆಗೆ ಖರೀದಿಗೆ ಸಿಗುತ್ತವೆ ಈ ಕಂಪನಿ ಎಲೆಕ್ಟ್ರಿಕ್ ಕಾರುಗಳು
ದೇಶದಲ್ಲಿ ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ವಿಸ್ತರಣೆಗೊಳ್ಳುತ್ತಿದ್ದು, ಪ್ರಮುಖ ಕಾರು ತಯಾರಕ ಕಂಪನಿಗಳು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಇಲ್ಲಿ ಟಾಟಾ (Tata), ಎಂಜಿ (Mg) ಹಾಗೂ ಸಿಟ್ರಸ್ (Citroen) ಸೇಲ್ ಮಾಡುವ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಯೋಣ.
ಮೊದಲಿಗೆ ಟಾಟಾ ಟಿಯಾಗೊ ಇವಿ (Tata Tiago EV) ಬಗ್ಗೆ ಮಾತನಾಡೋಣ. ಈ ಕಾರು, ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್ಇ, ಎಕ್ಸ್‌ಟಿ ಸೇರಿದಂತೆ 4 ರೂಪಾಂತರ, ಸಿಗ್ನೇಚರ್ ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್, ಪ್ರಿಸ್ಟಿನ್ ಒಳಗೊಂಡಂತೆ 5 ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ನೂತನ ಟಾಟಾ ಟಿಯಾಗೊ ಇವಿ, 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್ ನೊಂದಿಗೆ ಗ್ರಾಹಕರಿಗೆ ದೊರೆಯಲಿದ್ದು, ಅದಕ್ಕೆ ಅನುಗುಣವಾಗಿ ಕ್ರಮವಾಗಿ ಸಂಪೂರ್ಣ ಚಾರ್ಜ್ ನಲ್ಲಿ 250 km ರಿಂದ 315 km ರೇಂಜ್ ನೀಡುತ್ತದೆ. ಈ ಕಾರು, 15 ಎ ಸಾಕೆಟ್ ಚಾರ್ಜರ್, 3.3 kW ಎಸಿ ಚಾರ್ಜರ್, 7.2 kW ಎಸಿ ಚಾರ್ಜರ್ ಹಾಗೂ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯೊಂದಿಗೆ ಬರುತ್ತದೆ.
ಟಿಯಾಗೊ ಇವಿ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4 - ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್, ಆಟೋ ಎಸಿ, ರೈನ್ ಸೆನ್ಸರ್ಸ್ ವೈಪರ್, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್ ಬ್ಯಾಗ್ ಪಡೆದಿದೆ.

ಸಿಟ್ರಸ್ ಇಸಿ3 (Citroen eC3) ಬಗ್ಗೆ ಹೇಳುವುದಾದರೆ, ಈ ಕಾರು ರೂ.11.61 ಲಕ್ಷದಿಂದ ರೂ.12.79 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗುತ್ತದೆ. ಲೈವ್, ಫೀಲ್ ಎಂಬ ಎರಡು ರೂಪಾಂತರ, 4 ಮೊನೊಟೊನ್ 9 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲೂ ಲಭ್ಯವಾಗಲಿದ್ದು, 29.2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 57 PS ಗರಿಷ್ಠ ಪವರ್ ಹಾಗೂ 143 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 320 km ರೇಂಜ್ ಕೊಡುತ್ತದೆ. ಡಿಸಿ ಪಾಸ್ಟ್ ಚಾರ್ಜರ್ ಉಪಯೋಗ ಮಾಡಿದಾಗ ಸಿಟ್ರಸ್ ಇಸಿ3 ಬ್ಯಾಟರಿ ಪ್ಯಾಕ್ ಶೇಕಡ 10% ರಿಂದ 80% ಚಾರ್ಜ್ ಆಗಲು 57 ನಿಮಿಷ ಸಾಕು.

ಈ ಕಾರು, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಮ್ಯಾನುವಲ್ ಎಸಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀ ಲೆಸ್ ಎಂಟ್ರಿ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.
ಎಂಜಿ ಕಾಮೆಟ್ ಇವಿ (MG Comet EV) ಬಗ್ಗೆ ಮಾತನಾಡುವುದಾದರೆ, 2 ಡೋರ್ ಆಯ್ಕೆಯನ್ನು ಹೊಂದಿರುವ ಈ ಕಾರು, ರೂ.7.98 ಲಕ್ಷದಿಂದ ರೂ.9.98 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಜೊತೆಗೆ ಪೇಸ್, ಪ್ಲೇ ಮತ್ತು ಪ್ಲಶ್ ರೂಪಾಂತರ ಆಯ್ಕೆಯಲ್ಲೂ ದೊರೆಯಲಿದ್ದು, 17.3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ.
ಈ ಎಂಜಿ ಕಾಮೆಟ್ ಇವಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 42 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರ ಬ್ಯಾಟರಿ ಪ್ಯಾಕ್ 3.3 kW ಚಾರ್ಜರ್ ಉಪಯೋಗ ಮಾಡಿದಾಗ 7 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. 4 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಇನ್ಫೋಟೈನ್‌ಮೆಂಟ್ & ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ 10.25 - ಇಂಚಿನ ಡಿಜಿಟಲ್ ಸ್ಕ್ರೀನ್ ಸೆಟಪ್ ಅನ್ನು ಪಡೆದಿದೆ.


Click it and Unblock the Notifications








