Tata: ಗ್ರಾಹಕರಿಗೆ ಮತ್ತೊಂದು ಶಾಕ್ ಕೊಟ್ಟ ಟಾಟಾ.. ಆ ವಾಹನಗಳ ಬೆಲೆಯೂ ಏರಿಕೆ.. ಜನವರಿಯಿಂದ!
ಭಾರತದಲ್ಲಿ ಆಟೋ ಉದ್ಯಮ ಹೆಮ್ಮರವಾಗಿ ಬೆಳೆದುನಿಂತಿದೆ, ವಿಶ್ವ ವಾಹನ ಮಾರುಕಟ್ಟೆಯಲ್ಲಿ ಭಾರತವು ಟಾಪ್ 5 ಲಿಸ್ಟ್‌ನಲ್ಲೂ ಸ್ಥಾನ ಪಡೆದಿದೆ. ಆದರೆ ವಾಹನ ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಬಹುತೇಕ ಕಾರು ಕಂಪನಿಗಳು ಈಗ ಬೆಲೆ ಏರಿಕೆ ಮಾಡಲು ಸಜ್ಜಾಗಿವೆ.
ಮಾರುತಿ ಸುಜುಕಿ, ಮಹೀಂದ್ರಾ, ಹೋಂಡಾ, ಆಡಿ ಮತ್ತು ಹ್ಯುಂಡೈ ಕಂಪನಿಗಳು ತಮ್ಮ ಕಾರುಗಳ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿರುವುದು ಈಗಾಗಲೇ ತಿಳಿದಿದೆ. ಈ ಕಂಪನಿಗಳ ಘೋಷಣೆ ಬೆನ್ನಲ್ಲೆ ಇತ್ತ ಟಾಟಾ ಮೋಟಾರ್ಸ್ ಕೂಡ ಮುಂದಿನ ವರ್ಷ ಜನವರಿಯಿಂದ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿತ್ತು. ಇದೀಗ ಟಾಟಾದಿಂದ ಮತ್ತೊಂದು ಮಹತ್ವದ ಘೋಷಣೆ ಹೊರಬಿದ್ದಿದೆ.

ಕಾರುಗಳ ಬೆಲೆ ಹೆಚ್ಚಳದ ಜೊತೆಗೆ ತಮ್ಮ ಕಂಪನಿಯಿಂದ ಬರುವ ವಾಣಿಜ್ಯ ವಾಹನಗಳ ಬೆಲೆಯೂ ಹೆಚ್ಚಾಗಲಿದೆ ಎಂದು ಹೇಳಿದೆ. ಈ ಮೂಲಕ ಟಾಟಾ ಮೋಟಾರ್ಸ್‌ನ ಲಾರಿ ಮತ್ತು ಟ್ರಕ್‌ಗಳಂತಹ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಾಗಲಿದೆ. ಕಾರುಗಳ ಜೊತೆಗೆ ವಾಣಿಜ್ಯ ವಾಹನಗಳ ಬೆಲೆ ಏರಿಕೆಯು ಜನವರಿ 1, 2024 ರಿಂದ ಜಾರಿಗೆ ಬರಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.
ಮಾದರಿಯ ಪ್ರಕಾರ, ಹೆಚ್ಚಳವು ಶೇ3 ರವರೆಗೆ ಇರುತ್ತದೆ. ಟಾಟಾ ಮೋಟಾರ್ಸ್ ಇದನ್ನು ಡಿಸೆಂಬರ್ 10, 2023 ರಂದು ಬಹಿರಂಗಪಡಿಸಿತು. ಒಟ್ಟಾರೆ ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳು ಹಾಗೂ ಪ್ರಯಾಣಿಕ ವಾಹನಳೆರಡು ಬೆಲೆ ಏರಿಕೆ ಪಡೆಯಲಿವೆ. ಈ ಹಿಂದೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

ಎಲ್ಲಾ ಮಾದರಿಯ ವಾಣಿಜ್ಯ ವಾಹನಗಳಿಗೂ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ. ಟಾಟಾ ಮೋಟಾರ್ಸ್ ವಿವಿಧ ಮಾದರಿಯ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಹ್ಯಾಚ್‌ಬ್ಯಾಕ್ ಟಿಯಾಗೊದಿಂದ ಹಿಡಿದು ಪ್ರೀಮಿಯಂ ಎಸ್‌ಯುವಿಗಳವರೆಗೆ ಇವೆ. ಇವುಗಳ ಬೆಲೆಯು ರೂ. 5.6 ಲಕ್ಷದಿಂದ ಆರಂಭವಾಗಿ ರೂ. 25.94 ಲಕ್ಷದವರೆಗೆ ಇದೆ. ಆದರೆ, ಮುಂದಿನ ಜನವರಿಯಿಂದ ಈ ಬೆಲೆಗಳು ಮತ್ತಷ್ಟು ಹೆಚ್ಚಾಗಲಿವೆ.
ಮುಂದಿನ ವರ್ಷ ಟಾಟಾ ಹೊಸ ಕಾರುಗಳು: ಮುಂದಿನ ವರ್ಷ ಬಿಡುಗಡೆಯಾಗಲಿದೆ ಟಾಟಾ ಕರ್ವ್ವ್ ಎಸ್‌ಯುವಿ. ಈ ಕಾರು, ಹಲವು ಬಾರಿ ದೇಶದ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಆದರೆ, ಟೆಸ್ಟ್ ವೇಳೆ ಬಳಸಿದ ಕಾರು ಇಂಧನ ಅಥವಾ ಎಲೆಕ್ಟ್ರಿಕ್ ಚಾಲಿತ ಮಾದರಿಯೇ ಎಂಬುದರ ಕುರಿತು ವಿವರಗಳಿಲ್ಲ. ಕಂಪನಿಯು ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಕರ್ವ್ವ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿತ್ತು.

ಮೂಲಗಳ ಪ್ರಕಾರ, ಕರ್ವ್ವ್ ಎಸ್‌ಯುವಿ ಮುಂದಿನ ವರ್ಷವೇ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕ, 2025ರಲ್ಲಿ ಈ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಾಂಚ್ ಆಗುವ ನೀರಿಕ್ಷೆಯಿದೆ. 'ಕರ್ವ್ವ್' ಕಂಪನಿಯ 'ಜನರೇಷನ್2 ಪ್ಲಾಟ್‌ಫಾರ್ಮ್' ಆಧರಿಸಿರಲಿದ್ದು, ಎಲೆಕ್ಟ್ರಿಕ್ ಮಾದರಿ ಸಂಪೂರ್ಣ ಚಾರ್ಜ್ ನಲ್ಲಿ 500 ಕಿಲೋಮೀಟರ್ ರೇಂಜ್ ನೀಡುವ ನೀರಿಕ್ಷೆಯಿದೆ.
ಟಾಟಾ ಕಂಪನಿ ಪಂಚ್ ಇವಿಯನ್ನು (Punch EV) ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಬಹುತೇಕ 2024ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ. ದೊಡ್ಡದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 360 ಕ್ಯಾಮೆರಾ, ಅಲಾಯ್ ವೀಲ್ಸ್ ಹಾಗೂ ಆಕರ್ಷಕ ಎಲ್ಇಡಿ DRL ಪಡೆದಿರುವ ನೀರಿಕ್ಷೆಯಿದೆ. ಸಂಪೂರ್ಣ ಚಾರ್ಜ್ ನಲ್ಲಿ 500 ಕಿಲೋಮೀಟರ್ ರೇಂಜ್ ಕೊಡಲಿದ್ದು, ರೂ.12 ಲಕ್ಷ ಆರಂಭಿಕ ಬೆಲೆಗೆ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ.

ಟಾಟಾ ಹ್ಯಾರಿಯರ್ ಇವಿ (Tata Harrier EV) ಕೂಡ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಕಾರು, ಡ್ಯುಯಲ್ - ಮೋಟಾರ್ ಕಾನ್ಫಿಗರೇಶನ್ ಆಯ್ಕೆಯನ್ನು ಹೊಂದಿರಬಹುದು. ಜೊತೆಗೆ ಇದರಲ್ಲಿ ಉಪಯೋಗಿಸಲು ಉದ್ದೇಶಿಸಲಾಗಿರುವ ದೊಡ್ಡದಾದ ಬ್ಯಾಟರಿ ಪ್ಯಾಕ್ 500 ಕಿಲೋಮೀಟರ್ ರೇಂಜ್ ನೀಡಬಹುದು ಎನ್ನಲಾಗಿದೆ. ಈ ಕಾರನ್ನು ದೆಹಲಿಯ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.


Click it and Unblock the Notifications