Tata Safari crash: ಡೆಲಿವರಿ ಪಡೆದ ಖುಷಿ ಕೇವಲ ಒಂದೇ ದಿನ... ಮಾಲೀಕನಿಗೆ ಇದು ಬೇಕಿತ್ತಾ?
ಭಾರತೀಯ ಆಟೋ ವಲಯದಲ್ಲಿ ಬಹುತೇಕ ಎಲ್ಲಾ ಕಂಪನಿಗಳು ಈಗ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಈ ವಿಷಯದಲ್ಲಿ ಟಾಟಾ ಮೋಟಾರ್ಸ್ ಮೊದಲಿನಿಂದಲೂ ರಾಜಿಯಾಗಿಲ್ಲ, ಆದರೆ ಎಷ್ಟೇ ಸುರಕ್ಷತೆ ಇದ್ದರೂ ವಾಹನ ಡೆಲಿವರಿ ಪಡೆದ ಕೂಡಲೇ ಅಪಘಾತಕ್ಕೊಳಗಾದರೆ ಆ ನೋವು ಹೇಳತೀರದ್ದು, ಈಗ ಕೂಡ ಅಂಥಹದ್ದೇ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಹೊಚ್ಚಹೊಸ ಟಾಟಾ ಸಫಾರಿ ಸಣ್ಣ ಸೇತುವೆಯ ಗೋಡೆಗೆ ಡಿಕ್ಕಿ ಹೊಡೆದು ಹಾನಿಯಾಗಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊವನ್ನು ಪ್ರತೀಕ್ ಸಿಂಗ್ ಎಂಬಾತ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಅಪಘಾತ ನಡೆದಿದೆ ಎಂದು ಹೇಳಲಾಗಿದೆಯಾದರೂ ಎಲ್ಲಿ ನಡೆದಿದೆ ಎಂದು ನಿಖರವಾಗಿ ವಿಡಿಯೋದಲ್ಲಿ ತಿಳಿಸಿಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಟಾಟಾ ಸಫಾರಿ ಹೊಚ್ಚ ಹೊಸ ಎಸ್‌ಯುವಿಯಾಗಿದ್ದು, ಶೋ ರೂಂನಿಂದ ಡೆಲಿವರಿ ಪಡೆದುಕೊಂಡು ಹಿಂತಿರುಗುವಾಗ ಅಪಘಾತವಾಗಿದೆ ಎನ್ನಲಾಗಿದೆ.

ಇಲ್ಲಿ ಕಾಣಿಸಿಕೊಂಡಿರುವುದು ಟಾಟಾ ಸಫಾರಿ ಡಾರ್ಕ್ ಎಡಿಷನ್ ಆಗಿದ್ದು, ನೋಂದಣಿ ಸಂಖ್ಯೆ ಕೂಡ ಇಲ್ಲದಿರುವುದು ಹೊಚ್ಚಹೊಸ ಸಫಾರಿ ಎಂದಬುದಕ್ಕೆ ಸಾಕ್ಷ್ಯವಾಗಿದೆ. ತಡ ರಾತ್ರಿ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಬೆಳಗ್ಗೆಯಷ್ಟೇ ಸ್ಥಳೀಯರಿಗೆ ವಿಷಯ ತಿಳಿದಿದೆ. ಅಪಘಾತದ ನಂತರ, ಸೇತುವೆಯ ಮೇಲಿನ ಗೋಡೆಯು ಸ್ವಲ್ಪ ಹಿಂದಕ್ಕೆ ಸರಿದ ಕಾರಣ, ಸೇತುವೆ ಮತ್ತು ಗೋಡೆಯ ನಡುವೆ ಬಿರುಕು ಉಂಟಾಗಿದೆ. ಈ ಮೂಲಕ ಕಾರಿನ ಚಾಲಕ ಯಾವಮಟ್ಟಿಗೆ ವೇಗದಲ್ಲಿದ್ದಾನೆ ಎಂಬುದನ್ನು ನಾವು ಊಹಿಸಬಹುದು.
ಹೊಸ ವಾಹನ ಖರೀದಿಸಿದ ಉತ್ಸಾಹ ಎಲ್ಲರಲ್ಲೂ ಇರುತ್ತದೆ, ಆದರೆ ಅದನ್ನು ಮನಬಂದಂತೆ ಅತಿ ವೇಗದಲ್ಲಿ ಓಡಿಸುವುದು ಸರಿಯಲ್ಲ. ಶೋರೂಂ ಅವರು ಕೂಡ ಮೊದಲ ಸರ್ವಿಸ್ ವರೆಗೆ ಉತ್ತಮವಾಗಿ ನಿರ್ವಹಣೆ ಮಾಡಲು ಸೂಚಿಸುತ್ತಾರೆ. ಆದರೂ ಕೆಲವರು ಹೊಸ ಕಾರಿನ ಜೋಷ್‌ನಲ್ಲಿ ಇಂತಹ ಅನಾಹುತಗಳನ್ನು ತಂದುಕೊಳ್ಳುತ್ತಾರೆ. ವಿಷಯಕ್ಕೆ ಬಂದರೆ ಹೊಚ್ಚಹೊಸ ಟಾಟಾ ಸಫಾರಿ ಡಾರ್ಕ್ ಎಡಿಷನ್ ಕಾರಿನ ಎಡಭಾಗದ ಫೆಂಡರ್, ಬಂಪರ್, ಹೆಡ್‌ಲೈಟ್ ಸಂಪೂರ್ಣ ಹಾಳಾಗಿವೆ.
ಡಿಕ್ಕಿಯ ರಭಸಕ್ಕೆ SUV ಯ ಹಿಂಭಾಗದ ಬಲಭಾಗದ ಟೈರ್ ವಾಸ್ತವವಾಗಿ ಗಾಳಿಯಲ್ಲಿದೆ. ಎಡ ಮುಂಭಾಗದ ಟೈರ್ ಸಂಪೂರ್ಣ ಹಾನಿಗೊಳಗಾಗಿದೆ. ಹಾಗೆಯೇ ಮುಂಭಾಗದ ವಿಂಡ್‌ಸ್ಕ್ರೀನ್ ಬಿರುಕು ಬಿಟ್ಟಿರುವುದಾಗಿ ವೀಡಿಯೊದಲ್ಲಿ ಹೇಳಲಾಗಿದೆ. ಚಾಲಕನ ನಿರ್ಲಕ್ಷವೇ ಇದಕ್ಕೆ ನಿಖರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಕಾರಿನ ಮುಂದೆ ಯಾವುದಾದರೂ ಪ್ರಾಣಿ ಅಥವಾ ವಸ್ತು ಬಂದಿರುವ ಸಾಧ್ಯತೆಯಿದ್ದು, ಡಿಕ್ಕಿಯನ್ನು ತಪ್ಪಿಸಲು ಚಾಲಕನು ಗೋಡೆಯ ದಿಕ್ಕಿಗೆ ಸ್ಟೀರಿಂಗ್ ತಿರುಗಿಸಿರಬಹುದಾದ ಸಾಧ್ಯತೆಯಿದೆ.
ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಕಾರುಗಳು ಹಲವು ಫೀಚರ್‌ಗಳೊಂದಿಗೆ ಬರುತ್ತಿವೆ. ಹಲವರಿಗೆ ಇವುಗಳ ಬಗ್ಗೆ ತಿಳಿಯದೇ ಇರಬಹುದು, ಕೆಲವೊಮ್ಮೆ ಅವುಗಳನ್ನು ನಿಯಂತ್ರಿಸಲಾಗದೇ ಇಂತಹ ಅನಾಹುತಗಳು ಸಂಭವಿಸಬಹುದು. ಇನ್ನೊಂದು ಸಾಧ್ಯತೆಯೆಂದರೆ ಚಾಲಕನಿಗೆ ಅತಿವೇಗದಲ್ಲಿ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಸೇತುವೆಗೆ ಡಿಕ್ಕಿ ಹೊಡೆದಿರಬಹುದು. ಇನ್ನು ಕಾರಲ್ಲಿ ಏರ್‌ಬ್ಯಾಗ್ ತೆರೆದುಕೊಂಡಿದ್ದು ವಾಹನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಅನೇಕ ಸಂದರ್ಭಗಳಲ್ಲಿ, ಮ್ಯಾನ್ಯುವಲ್ ಕಾರ್‌ನಿಂದ ಆಟೋಮ್ಯಾಟಿಕ್‌ಗೆ ಬದಲಾಯಿಸುವ ಜನರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಆಟೋಮ್ಯಾಟಿಕ್ ಕಾರನ್ನು ಓಡಿಸುತ್ತಿದ್ದಾರೆ ಎಂಬ ಅಂಶವನ್ನು ಆಗಾಗ್ಗೆ ಮರೆತುಬಿಡುತ್ತಾರೆ. ವೀಡಿಯೊದಲ್ಲಿ ಕಾರಿನಲ್ಲಿರುವ ವ್ಯಕ್ತಿ ಮತ್ತು ಪ್ರಯಾಣಿಕರ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಆದರೆ ಹೊಸ ಎಸ್‌ಯುವಿಯಲ್ಲಿ ಹಾನಿಗೊಳಗಾದ ಫೆಂಡರ್, ವೀಲ್‌ಗಳು ಮತ್ತು ಹೆಡ್‌ಲ್ಯಾಂಪ್‌ಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಉತ್ತಮವಾಗಿವೆ ಎಂಬುದನ್ನು ಕಾಣಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications