Tata vs MG ಎಲೆಕ್ಟ್ರಿಕ್ ಕಾರುಗಳ ಜಾಹೀರಾತು ಸಮರ... ಎಂಜಿ ಕಾಮೆಟ್ ಕಾರ್ಟೂನ್ ಎಂದ ಟಾಟಾ ಡೀಲರ್
ಎಂಜಿ ಕಾಮೆಟ್ ಇವಿ ಕಾರು ಬಿಡುಗಡೆಯಾಗುತ್ತಿದ್ದಂತೆ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಸದ್ಯ ಎಲ್ಲರ ಗಮನ ದೇಶದ ಅತ್ಯಂತ ಅಗ್ಗದ ಈ ಎಲೆಕ್ಟ್ರಿಕ್ (ಇತರ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿಕೊಂಡರೆ) ಕಾರಿನ ಮೇಲಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಮುಖ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳ ನಡುವೆ ಜಾಹೀರಾತು ಸಮರ ಆರಂಭವಾಗಿದೆ.
ಹೇಳಬೇಕೆಂದರೆ ಜಾಹಿರಾತುಗಳ ಸಮರ ಈಗಿನದಲ್ಲ, ಈ ಹಿಂದೆಯೂ ಹಲವು ಬ್ರಾಂಡ್‌ಗಳು ತಮ್ಮ ಮಾದರಿಗಳನ್ನು ಉತ್ತುಂಗಕ್ಕೇರಿಸಲು ಒಂದನ್ನೊಂದು ಕಾಲೆಳೆದ ಹಲವು ಉದಾಹರಣೆಗಳು ಇವೆ. ಆದರೆ ಈ ಸಮರದಲ್ಲಿ ಬ್ರಾಂಡ್‌ಗಳು ನೇರವಾಗಿ ಭಾಗಿಯಾಗುವುದಿಲ್ಲ. ತಮ್ಮ ಜಾಹಿರಾತುಗಳನ್ನು ಗ್ರಾಹಕರು ನೋಡುತ್ತಿದ್ದಂತೆ ಅರ್ಥವಾಗುವ ರೀತಿಯಲ್ಲಿ ರೂಪಿಸಿ ಬಿಡುಗಡೆ ಮಾಡುತ್ತಿದ್ದರು. ಇನ್ನು ಕೆಲವೊಮ್ಮೆ ಅಭಿಮಾನಿಗಳು ಹಾಗೂ ಡೀಲರ್‌ಶಿಪ್‌ಗಳು ಕೆಲ ಪೋಸ್ಟ್‌ಗಳನ್ನು ಬಿಟ್ಟು ಕಾಲೆಳೆಯುತ್ತಿದ್ದರು. ಈಗಲೂ ಅದೇ ರೀತಿಯ ಪೋಸ್ಟರ್ ಯುದ್ಧವನ್ನು ಆರಂಭಿಸಿದೆ.

ಟಾಟಾ ಹಾಗೂ ಎಂಜಿ ಎಲೆಕ್ಟ್ರಿಕ್ ಕಾರ್ ವಾರ್ ಜಾಹೀರಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಫೇಸ್‌ಬುಕ್‌ನಲ್ಲಿ ಟಾಟಾ ಡೀಲರ್‌ಶಿಪ್ ಹಂಚಿಕೊಂಡ MG ಕಾಮೆಟ್ ಕುರಿತ ಪೋಸ್ಟರ್ ಹೊಸ ಜಾಹೀರಾತು ಯುದ್ಧವನ್ನು ಹುಟ್ಟುಹಾಕಿದೆ. ಸದ್ಯ ಹರಿದಾಡುತ್ತಿರುವ ಟಾಟಾ ಡೀಲರ್ ಪೋಸ್ಟರ್‌ನಲ್ಲಿ ಎಂಜಿ ಕಾಮೆಟ್ ಹಾಗೂ ಟಾಟಾ ಟಿಯಾಗೋವನ್ನು ನೋಡಬಹುದು. "ಇದು ಕಾರ್ ಕಾರ್ಟೂನ್ ಅಲ್ಲ" ಎಂಬ ಸಂದೇಶವನ್ನು ನೀಡುವ ಮೂಲಕ ಸಮರ ಆರಂಭವಾಗಿದೆ.
ಈ ಸಂದೇಶವು ಎಲೆಕ್ಟ್ರಿಕ್ ಕಾರುಗಳ ಪ್ರಾಯೋಗಿಕತೆಯನ್ನು ಎತ್ತಿ ತೋರಿಸುತ್ತದೆ. "ಕಾರ್" ಎಂಬ ಪದವು ಟಾಟಾ ಕಾನೂನುಬದ್ಧ ಸಾರಿಗೆ ವಿಧಾನವನ್ನು ನೀಡುತ್ತಿದೆ ಎಂದು ಸೂಚಿಸುತ್ತದೆ. ಹಾಗೆಯೇ "ಕಾರ್ಟೂನ್" ಎಂಬ ಪದವು MG ಕಾಮೆಟ್ ಗಂಭೀರವಾದ ಆಯ್ಕೆಯಾಗಿಲ್ಲ ಎಂದು ಸೂಚಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಈಗ ಎಂಜಿ ಕಾಮೆಟ್ ಪೋಸ್ಟರ್ ಹೊರಬಂದಿದೆ. ಇದರಲ್ಲಿ ಟಾಟಾ ಕಾರುಗಳನ್ನು "ಐಸ್ ಏಜ್" ಎಂದು ಉಲ್ಲೇಖಿಸಲಾಗಿದ್ದು, ಎಂಜಿ ಕಾಮೆಟ್ ಅನ್ನು "ನ್ಯೂ ಏಜ್" ಎಂದು ತೋರಿಸಲಾಗಿದೆ.

"ಹಿಮಯುಗ ಮತ್ತು ಹೊಸ ಯುಗ" ಎಂಬುದು ಇದರ ಅರ್ಥ ನೀಡುತ್ತದೆ. ಟಾಟಾ ಕಾರುಗಳನ್ನು ಹಳೆಯ ಜಮಾನಕ್ಕೆ ಹೊಲಿಸಿದ್ದು, ಎಂಜಿಯನ್ನು ಆಧುನಿಕ ಮತ್ತು ತಾಂತ್ರಿಕವಾಗಿ ಸುಧಾರಿತ ಕಾರುಗಳೆಂದು ಬಿಂಭಿಸಲಾಗಿದೆ. ಜನಸಂದಣಿಯಿಂದ ಎದ್ದು ಕಾಣುವ ಸ್ಟೈಲಿಶ್ ಮತ್ತು ಕೂಲ್ ಕಾರನ್ನು ಹುಡುಕುತ್ತಿರುವ ಗ್ರಾಹಕರನ್ನು ಎಂಜಿ ಗುರಿಯಾಗಿಸಿಕೊಂಡಿದೆ. ಇದು MG ಕಾಮೆಟ್ EV ಅನ್ನು ಆಧುನಿಕ ಮತ್ತು ಭವಿಷ್ಯದ ಆಯ್ಕೆಯಾಗಿ ಇರಿಸುತ್ತದೆ. ಇದು ಹಿಮಯುಗದಿಂದ ಹೊಸ ಯುಗಕ್ಕೆ ಕೊಂಡೊಯಲಿದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ.
Tata ಟಿಯಾಗೊ-MG ಕಾಮೆಟ್ ನಡುವಿನ ವ್ಯತ್ಯಾಸ:
ಎಂಜಿ ಕಾಮೆಟ್ ಇವಿ ಬಿಡುಗಡೆಗೂ ಮುನ್ನ ಟಾಟಾ ಟಿಯಾಗೊ ಇವಿ ದೇಶದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಎಂಬ ಖ್ಯಾತಿ ಪಡೆದಿತ್ತು. ಇದೀಗ ಕಾಮೆಟ್ ಆ ಸ್ಥಾನವನ್ನು ಧಕ್ಕಿಸಿಕೊಂಡಿದೆಯಾದರೂ ಟಾಟಾ ಟಿಯೋಗೊಗೆ ಹೋಲಿಸಿಕೊಂಡರೆ ಬ್ಯಾಟರಿ, ಉದ್ದಳತೆ, ವಿನ್ಯಾಸ, ರೇಂಜ್ ಹಲವು ರೀತಿಯಲ್ಲಿ ಭಾರೀ ವ್ಯತ್ಯಾಸಗಳಿವೆ. ಆದರೆ ಇಲ್ಲಿ ಕಡಿಮೆ ಬೆಲೆಯಿರುವ ಇವಿ, ಗ್ರಾಹಕರನ್ನು ಸೆಳೆಯುವುದಂತೂ ಖಚಿತ. ಎರಡು ಇವಿಗಳ ಬೆಲೆಗಳು ಉತ್ತಮ ಮಾರಾಟವನ್ನು ನಿರ್ಣಯಿಸಲಿವೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರ್ ಬೆಲೆ 8.69 ಲಕ್ಷ (ಎಕ್ಸ್ ಶೋರೂಂ) ಆರಂಭವಾಗಿ 11.99 ಲಕ್ಷ (ಎಕ್ಸ್ ಶೋರೂಂ) ವರೆಗೆ ಹೋಗುತ್ತದೆ. ಎರಡು ಟ್ರಿಮ್‌ಗಳಿದ್ದು P67-ರೇಟೆಡ್ 24 kWh ಮತ್ತು 19.2 kWh ಬ್ಯಾಟರಿ ಪ್ಯಾಕ್‌ಗಳನ್ನು ಅಳವಡಿಸಲಾಗಿದೆ. ಮೊದಲನೆಯದು 315 ಕಿ.ಮೀ ರೇಂಜ್ ಅನ್ನು ನೀಡಿದರೆ, ಎರಡನೆಯದು ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತದೆ. 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.
ಇನ್ನು ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಕೇವಲ ಒಂದೇ ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, 7.98 ಲಕ್ಷ (ಎಕ್ಸ್ ಶೋರೂಂ) ರೂ. ಬೆಲೆಯನ್ನು ಹೊಂದಿದೆ. ಜೊತೆಗೆ ಗ್ರಾಫಿಕ್ಸ್ ಹಾಗೂ ಇತರೆ ಅಕ್ಸೆಸೊರಿಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು IP67-ರೇಟ್ ಮಾಡಲ್ಪಟ್ಟಿದೆ. ಹಾಗೆಯೇ ARAI- ಪ್ರಮಾಣೀಕೃತ ರೇಂಜ್ 230 ಕಿ.ಮೀ ಆಗಿದೆ. ಈ ಎಂಜಿ ಕಾರಿನಲ್ಲಿ 3.3kW ಆನ್‌ಬೋರ್ಡ್ ಚಾರ್ಜರ್ ಅನ್ನು ಸಹ ನೀಡುತ್ತಿದೆ, ಇದು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.


Click it and Unblock the Notifications