Toyota: ಸದ್ದಿಲ್ಲದೇ ತನ್ನ ಗ್ರಾಹಕರಿಗೆ ಟೊಯೊಟಾದಿಂದ ಧಿಡೀರ್ ಶಾಕ್!
ಭಾರತದ ಟೊಯೊಟಾ (Toyota) ಕಾರುಗಳು ಎಲ್ಲರಿಗೂ ಅಚ್ಚುಮೆಚ್ಚು. ಕಂಪನಿಯ ಎಸ್‌ಯುವಿ ಹಾಗೂ ಎಂಪಿವಿಗಳು ಆಕರ್ಷಕ ವೈಶಿಷ್ಟ್ಯ ಹೊಂದಿರುವುದರಿಂದ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಲು ಬಯಸುತ್ತಾರೆ. ಇದೀಗ, ಟೊಯೊಟಾ ಸದ್ದಿಲ್ಲದೇ ತನ್ನೆಲ್ಲ ವಾಹನಗಳ ಬೆಲೆಯನ್ನು ಕೊಂಚ ಮಟ್ಟಿಗೆ ಏರಿಕೆ ಮಾಡಿದೆ ಎಂದು ವರದಿಯಾಗಿದೆ.
ನೂತನ ದರಗಳು ಜೂಲೈ 5 (ಬುಧವಾರ)ದಿಂದಲೇ ಜಾರಿಗೆ ಬಂದಿವೆ. ಆದರೆ, ಯಾವ ಕಾರಿನ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಟೊಯೊಟಾ ಈವರೆಗೆ ಬಹಿರಂಗಪಡಿಸಿಲ್ಲ. ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ ಎಂದು ಹೇಳಿದೆ. ಪ್ರತಿಯೊಂದು ಮಾದರಿ ಮೇಲೆ ಶೇಕಡ 1.5 - 2% ಬೆಲೆ ಹೆಚ್ಚಳವಾಗಿದೆ ಎಂಬ ವಿವರ ಲಭ್ಯವಾಗಿದೆ.

ಈ ವರ್ಷದಲ್ಲಿ ಇದು ಎರಡನೇ ಬಾರಿಗೆ ದರ ಹೆಚ್ಚಳವಾಗಿದೆ. ಜೊತೆಗೆ ಇನ್‌ಪುಟ್ ವೆಚ್ಚವನ್ನು ಸಂಪೂರ್ಣವಾಗಿ ಗ್ರಾಹಕರ ಮೇಲೆಯೇ ವರ್ಗಾಯಿಸಿಲ್ಲ ಎಂದು ಕಂಪನಿ ತಿಳಿಸಿದೆ. ಟೊಯೊಟಾ ಭಾರತದ ಮಾರುಕಟ್ಟೆಯಲ್ಲಿ ಅರ್ಬನ್ ಕ್ರೂಸರ್ ಹೈರಿಡರ್, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್, ಫಾರ್ಚುನರ್, ಲೆಜೆಂಡರ್, ಕ್ಯಾಮ್ರಿ ಹಾಗೂ ವೆಲ್‌ಫೈರ್ ಕಾರುಗಳನ್ನು ಮಾರಾಟ ಮಾಡುತ್ತದೆ.
ಸದ್ಯ ವಿವಿಧ ಮಾಧ್ಯಮಗಳ ಮಾಹಿತಿ ಪ್ರಕಾರ, ಇನ್ನೋವಾ ಹೈಕ್ರಾಸ್ ಈ ಮೊದಲು ರೂ.18.55 ಲಕ್ಷ ಆರಂಭಿಕ ಬೆಲೆ ಹೊಂದಿತ್ತು. ಪ್ರಸ್ತುತ ದರ ರೂ.18.82 ಲಕ್ಷವಾಗಿದೆ. ರೂ.10.73 ಲಕ್ಷ ಪ್ರಾರಂಭಿಕ ದರ ಪಡೆದಿದ್ದ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ ಬೆಲೆ ರೂ.10.86 ಲಕ್ಷ ಆಗಿದೆ. ದರ ಏರಿಕೆಗೆ ಫಾರ್ಚುನರ್ ಕೂಡ ಹೊರತಾಗಿಲ್ಲ. ಕೆಲವೇ ದಿನಗಳ ಹಿಂದೆ, ರೂ.32.59 ಲಕ್ಷವಿದ್ದ ಆರಂಭಿಕ ಬೆಲೆ, ಪ್ರಸ್ತುತ ರೂ.32.99 ಲಕ್ಷವಾಗಿದೆ.

ಮೊದಲಿಗೆ ಟೊಯೊಟಾದ ಬಹುಬೇಡಿಕೆ ಪಡೆದಿರುವ ಇನ್ನೋವಾ ಹೈಕ್ರಾಸ್ ಹಾಗೂ ಇನ್ನೋವಾ ಕ್ರಿಸ್ಟಾ ಎಂಪಿವಿಗಳ ವಿಶೇಷತೆಗಳ ಬಗ್ಗೆ ಮಾತನಾಡೋಣ. ಹೈಕ್ರಾಸ್ ಎಂಪಿವಿ, ಎರಡು ಎಂಜಿನ್ ಆಯ್ಕೆಯನ್ನು ಹೊಂದಿದ್ದು, 21 kmpl ಮೈಲೇಜ್ ನೀಡುತ್ತದೆ. ಇನ್ನೋವಾ ಕ್ರಿಸ್ಟಾ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಪಡೆದಿದ್ದು, 12 ತಿಂಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿದೆ.
ಟೊಯೊಟಾ ಕಂಪನಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ಎಸ್‌ಯುವಿಗಳಲ್ಲಿ 'ಅರ್ಬನ್ ಕ್ರೂಸರ್ ಹೈರೈಡರ್' ಪ್ರಮುಖವಾಗಿದೆ. ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ಲಾನ್ಜಾ ಹಾಗೂ ಫಾರ್ಚುನರ್ ಕಾರುಗಳಿಗೆ ಭಾರತದಲ್ಲಿ ಸಪರೇಟ್ ಅಭಿಮಾನಿ ಬಳಗವೇ ಇದೆ.
ಟೊಯೊಟಾ ಕಳೆದ ಜೂನ್ ತಿಂಗಳು 19,608 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 19% ಪ್ರಗತಿಯನ್ನು ಸಾಧಿಸಿದೆ. ಇನ್ನು, ಯಾವ ಕಾರಿನ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಕಂಪನಿ ಕಡೆಯಿಂದ ಅಧಿಕೃತ ಪ್ರಕಟಣೆ ಬರಬೇಕಿದ್ದು, ಟೊಯೊಟಾ ಕಾರುಗಳಿಗೆ ಬಹುಬೇಡಿಕೆ ಇದ್ದು, ಈ ದರ ಹೆಚ್ಚಳ ಗ್ರಾಹಕರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications