Toyota Innova, Fortuner Cars: ಟೊಯೊಟಾ ಇನೋವಾ, ಫಾರ್ಚುನರ್ ಗ್ರಾಹಕರೇ.. ಕಂಪನಿಯಿಂದ ಮಹತ್ವದ ನಿರ್ಧಾರ
ಭಾರತದಲ್ಲಿ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯ ಇನೋವಾ, ಫಾರ್ಚುನರ್ ಕಾರುಗಳು ಭಾರೀ ಜನಪ್ರಿಯತೆಯನ್ನು ಪಡೆದಿವೆ. ಅವುಗಳನ್ನು ಇವತ್ತು ಬುಕ್ ಮಾಡಿದ್ರು ವಿತರಣೆ ಪಡೆಯಲು ಹಲವು ತಿಂಗಳು ಕಾಯುವ ಪರಿಸ್ಥಿತಿ ಇದ್ದು, ಇದೀಗ ಒಳ್ಳೆಸುದ್ದಿಯೊಂದು ಸಿಕ್ಕಿದ್ದು, ಆ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ ಬನ್ನಿ.
ದೇಶದಲ್ಲಿ ಟೊಯೊಟಾ, ತನ್ನ ಕಾರುಗಳ ಮಾರಾಟವನ್ನು ಆರಂಭಿಸಿದಾಗಿನಿಂದಲೂ ಈ ಪ್ರಮಾಣದಲ್ಲಿ ಬೇಡಿಕೆಯನ್ನು ಪಡೆದುಕೊಂಡಿರಲಿಲ್ಲ. ಸದ್ಯ, ಇನೋವಾ, ಫಾರ್ಚುನರ್ ಹಾಗೂ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬುಕ್ ಮಾಡಿದ್ದು, 1,20,000 ಯುನಿಟ್ ಗಳನ್ನು ತನ್ನ ಖರೀದಿದಾರರಿಗೆ ಪೂರೈಸಬೇಕಾಗಿದೆ. ಈ ಕಾರಣದಿಂದಾಗಿ ಇತ್ತೀಚೆಗೆ ಇನೋವಾ ಹೈಕ್ರಾಸ್ ಹೈಬ್ರಿಡ್ ರೂಪಾಂತರಗಳಾದ ZX & ZX (O) ಬುಕ್ಕಿಂಗ್ ಅನ್ನೇ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ಟೊಯೊಟಾ ಇನೋವಾ ಹೈಕ್ರಾಸ್ ಎಂಪಿವಿಯ ZX & ZX (O) ರೂಪಾಂತರಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು, ವಿತರಣೆ ಪಡೆಯಲು ಕನಿಷ್ಠವೆಂದರೂ 24 ರಿಂದ 30 ತಿಂಗಳು ಕಾಯಬೇಕು. G ರೂಪಾಂತರವು ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದ್ದು, 3 ರಿಂದ 4 ತಿಂಗಳಲ್ಲಿಯೇ ಡೆಲಿವರಿಯಾಗಲಿದೆ. GX ರೂಪಾಂತರ 6 ತಿಂಗಳು ಹಾಗೂ VX ಹಾಗೂ VX (O) ರೂಪಾಂತರಗಳು 4 ರಿಂದ 10 ತಿಂಗಳಲ್ಲಿ ವಿತರಣೆಯಾಗಲಿವೆ.
ಗ್ರಾಹಕರಿಗೆ ತನ್ನ ಕಾರುಗಳನ್ನು ಬೇಗ ವಿತರಣೆ ಮಾಡಲು ಟೊಯೊಟಾ ಕಂಪನಿ ಮಹತ್ವದ ನಿರ್ಧಾರ ಕೈಗೊಂಡಿದೆ. ತನ್ನ ಉತ್ಪಾದನಾ ಸಾಮರ್ಥ್ಯವನ್ನು ಶೇಕಡ 20-30% ಹೆಚ್ಚಿಸಲು ತೀರ್ಮಾನಿಸಿದ್ದು, ಕಳೆದ ವರ್ಷದ ಆರ್ಥಿಕ ವರ್ಷಕ್ಕೆ (1.66 ಲಕ್ಷ ಯುನಿಟ್) ಹೋಲಿಸಿದರೆ, ಈ ವರ್ಷ, ಈ ಹಣಕಾಸು ವರ್ಷದಲ್ಲಿ ಉತ್ಪಾದನೆಯನ್ನು (3.2 ಲಕ್ಷ ಯುನಿಟ್) ಎರಡುಪಟ್ಟು ಹೆಚ್ಚಿಸಲು ನಿರ್ಧಾರ ಮಾಡಿದೆ.
ಇದಾಕ್ಕಾಗಿ ರಾಮನಗರ ಸಮೀಪದ ಬಿಡದಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಮೂರನೇ ಪಾಳಿಯನ್ನು ಮೇ ಮೊದಲ ವಾರದಿಂದ ಆರಂಭಿಸಲಿದ್ದು, ಪ್ರತಿದಿನ 510 ಯುನಿಟ್ ಕಾರುಗಳನ್ನು ತಯಾರಿಸುವ ಗುರಿಯನ್ನು ಹಾಕಿಕೊಂಡಿದ್ದು, ಈ ಮೂಲಕ ವಾರ್ಷಿಕ 4,00,000 ಯುನಿಟ್ ವಾಹನಗಳನ್ನು ಉತ್ಪಾದಿಸಲಿದೆ. ಕಳೆದ ಮಾರ್ಚ್ (2023) ತಿಂಗಳಲ್ಲಿ 18,670 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, ಟೊಯೊಟಾ ಕಂಪನಿ ವರ್ಷದಿಂದ ವರ್ಷಕ್ಕೆ ಶೇಕಡ 9% ಪ್ರಗತಿ ಸಾಧಿಸಿತ್ತು.
ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾ ಇನೋವಾ ಹೈಕ್ರಾಸ್ ರೂ.18.30 ಲಕ್ಷದಿಂದ ರೂ.28.97 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್, 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 21 kmpl ಮೈಲೇಜ್ ನೀಡಲಿದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ರೂ.10.48 ಲಕ್ಷದಿಂದ ರೂ.19.49 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ 19.39 - 27.97 kmpl ಮೈಲೇಜ್ ನೀಡಲಿದೆ. ಫಾರ್ಚುನರ್ ರೂ.32.59 ರಿಂದ 50.34 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 10.0 kmpl ಮೈಲೇಜ್ ಕೊಡುತ್ತದೆ.
ಒಟ್ಟಾರೆ, ಬಹುಬೇಡಿಕೆಯ ಇನೋವಾ, ಫಾರ್ಚುನರ್ ಹಾಗೂ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳನ್ನು ವೇಗವಾಗಿ ಪೂರೈಸಲು ಟೊಯೊಟಾ ಕಂಪನಿ ಕೈಗೊಂಡಿರುವ ನಿರ್ಧಾರ ಗ್ರಾಹಕರಿಗೆ ಖುಷಿತಂದಿದೆ. ಮುಂದಿನ ದಿನಗಳಲ್ಲಿ ಕೆಲವೇ ತಿಂಗಳಲ್ಲಿ ಈ ಕಾರುಗಳು ವಿತರಣೆಯಾಗಲಿದ್ದು, ಇನೋವಾ ಹೈಕ್ರಾಸ್ ಎಂಪಿವಿಯ ಟಾಪ್ ಎಂಡ್ ರೂಪಾಂತರಗಳಿಗೆ 24 ರಿಂದ 30 ತಿಂಗಳು ಕಾಯುವಿಕೆಯು ತಪ್ಪುತ್ತದೆ.


Click it and Unblock the Notifications