EV ಖರೀದಿದಾರರಿಗೆ ತೆರಿಗೆ, ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಿದ ಯುಪಿ ಸರ್ಕಾರ
ಉತ್ತರ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜಿಸುತ್ತಿರುವ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಅಕ್ಟೋಬರ್ 14, 2022 ರಿಂದ ಮೂರು ವರ್ಷಗಳವರೆಗೆ ಎಲೆಕ್ಟ್ರಿಕ್ ವಾಹನಗಳ ಖರೀದಿಯ ಮೇಲಿನ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ಶುಕ್ರವಾರ ಹೇಳಿಕೆಯೊಂದು ತಿಳಿಸಿದೆ.
ದೆಹಲಿ ಸುತ್ತಮುತ್ತಲಿನ ವಾತಾವರಣ ಹೆಚ್ಚು ಕಾಲುಷ್ಯವಾಗಿದೆ, ಈಗಾಗಲೇ ಡೀಸಲ್ ವಾಹನಗಳ ಸ್ಥಗಿತ ಹಾಗೂ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯಲ್ಲಿ ದೇಶ ರಾಜಧಾನಿ ಕಟ್ಟುನಿಟ್ಟಾಗಿದೆ. ಹಾಗೆಯೇ ಯುಪಿಯಲ್ಲೂ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ತಯಾರಾಗುವ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ವಿನಾಯಿತಿ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜಿಲ್ಲೆಗಳ ಆರ್‌ಟಿಒಗಳಿಗೆ ಸರ್ಕಾರದ ಪರವಾಗಿ ಆದೇಶವನ್ನು ಹೊರಡಿಸಲಾಗಿದೆ.

ಪ್ರಧಾನ ಕಾರ್ಯದರ್ಶಿ ಎಲ್. ವೆಂಕಟೇಶ್ವರಲು ಹೊರಡಿಸಿದ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಉತ್ತರ ಪ್ರದೇಶ ಎಲೆಕ್ಟ್ರಿಕ್ ವೆಹಿಕಲ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಮೊಬಿಲಿಟಿ ಪಾಲಿಸಿ 2022 ರ ಪ್ರಕಾರ, ಅಕ್ಟೋಬರ್ 14 ರಿಂದ ಉತ್ತರ ಪ್ರದೇಶದಲ್ಲಿ ಮಾರಾಟವಾದ ಮತ್ತು ನೋಂದಾಯಿಸಲಾದ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) 2022 ರಿಂದ ಅಕ್ಟೋಬರ್ 13, 2025 ರವರೆಗೆ ಶೇ 100 ರಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಇದರಲ್ಲಿ ವಿವರಿಸಲಾಗಿದೆ.
ಇದಲ್ಲದೆ, ಅಕ್ಟೋಬರ್ 14, 2022 ರಂದು ಅಧಿಸೂಚಿಸಲಾದ ಎಲೆಕ್ಟ್ರಿಕ್ ವಾಹನ ನೀತಿಯ ಪರಿಣಾಮಕಾರಿ ಅವಧಿಯ ನಾಲ್ಕನೇ ಮತ್ತು ಐದನೇ ವರ್ಷದಲ್ಲಿ, ಅಂದರೆ ಅಕ್ಟೋಬರ್ 14, 2025 ರಿಂದ ಅಕ್ಟೋಬರ್ 13, 2027 ರವರೆಗೆ, ತಯಾರಿಸಿದ ಮತ್ತು ಮಾರಾಟವಾದ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡಾ 100 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಇದರಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾತ್ರ ಸ್ಪಷ್ಟೀಕರಣವನ್ನು ನೀಡಲಾಗಿದೆ ಎಂಬುದನ್ನು ತಿಳಿಸಿದ್ದಾರೆ.

ಇದರ ಪ್ರಕಾರ, ಬ್ಯಾಟರಿಗಳು, ಅಲ್ಟ್ರಾಕಾಪಾಸಿಟರ್‌ಗಳು ಅಥವಾ ಇಂಧನ ಕೋಶಗಳಿಂದ ಚಾಲಿತವಾಗುವ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಬಳಸುವ ಎಲ್ಲಾ ಆಟೋಮೊಬೈಲ್‌ಗಳನ್ನು EV ಒಳಗೊಂಡಿರುತ್ತವೆ. ಇವುಗಳಲ್ಲಿ ಎಲ್ಲಾ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳು, ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (HEV), ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (PHEV), ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (BEV), ಮತ್ತು ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (FCEV) ಸೇರಿವೆ.
ಈ ನಿರ್ಧಾರವು ಈಗಾಗಲೇ ಖರೀದಿ ಹಾಗೂ ನೋಂದಣಿಯಾಗಿರುವ ಅಂದರೆ, ಅಕ್ಟೋಬರ್ 14, 2022 ರ ನಡುವೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ವಿಧಿಸಿರುವ ಆಗ್ರಾದ 3,997 EV ಮಾಲೀಕರಿಗೆ ಪರಿಹಾರವನ್ನು ನೀಡುತ್ತದೆ. ಇಲ್ಲಿಯವರೆಗೆ, 11,340 ಇವಿಗಳು ಆಗ್ರಾದ ವಿಭಾಗೀಯ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ನೋಂದಾಯಿಸಲ್ಪಟ್ಟಿವೆ, ಅವುಗಳಲ್ಲಿ 3,997 ವಾಹನಗಳನ್ನು ಅಕ್ಟೋಬರ್ 14, 2022 ರಿಂದ ಇಲ್ಲಿಯವರೆಗೆ ಖರೀದಿಸಲಾಗಿದೆ. ಇದರಲ್ಲಿ 437 ಇ-ರಿಕ್ಷಾಗಳು, 30 ಕಾರುಗಳು ಮತ್ತು ಉಳಿದ ದ್ವಿಚಕ್ರ ವಾಹನಗಳು (ಇವಿಗಳು) ಸೇರಿವೆ.

ಯುಪಿ ಸರ್ಕಾರದ ವಿನಾಯಿತಿಯು ಎಲೆಕ್ಟ್ರಿಕ್ ವಾಹನಗಳ ಖರೀದಿಯ ಮೇಲೆ ಕೇಂದ್ರ ಸರ್ಕಾರ ಒದಗಿಸುವ ಸಬ್ಸಿಡಿಗಿಂತಲೂ ಹೆಚ್ಚುವರಿಯಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಒದಗಿಸುವ ಈ ಪರಿಹಾರಗಳು ಒಟ್ಟಾಗಿ ದ್ವಿಚಕ್ರ ವಾಹನಗಳ ಬೆಲೆಯನ್ನು 15,000 ರಿಂದ 20,000 ರೂ.ಗಳಷ್ಟು ಮತ್ತು ಕಾರುಗಳ ಬೆಲೆಯನ್ನು 1 ಲಕ್ಷದವರೆಗೆ ಕಡಿಮೆ ಮಾಡುತ್ತದೆ. ಸರ್ಕಾರದ ನಿರ್ಧಾರವು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಇವಿಗಳ ನೋಂದಣಿಯ ವ್ಯತ್ಯಾಸವನ್ನು ಕೊನೆಗೊಳಿಸುತ್ತದೆ. ರಾಜ್ಯ ಮತ್ತು ಯುಟಿಯಲ್ಲಿ ದರಗಳು ಒಂದೇ ಆಗಿರುತ್ತವೆ.
ನೀತಿಯ ಪ್ರಕಾರ, ರಾಜ್ಯದಲ್ಲಿ ಖರೀದಿಸುವ ಎಲೆಕ್ಟ್ರಿಕ್ ವಾಹನಗಳ ಕಾರ್ಖಾನೆ ಬೆಲೆಯ ಮೇಲೆ ಶೇ15 ರಷ್ಟು ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಇದರಲ್ಲಿ ಮೊದಲ ಎರಡು ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರತಿ ವಾಹನಕ್ಕೆ 5,000 ರೂ., ಮೊದಲ 50,000 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಗರಿಷ್ಠ 12,000 ರೂ. ಮತ್ತು ಮೊದಲ 25,000 ಎಲೆಕ್ಟ್ರಿಕ್ ವಾಹನಗಳಿಗೆ ಒಂದು ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತದೆ. ಹಾಗೆಯೇ ರಾಜ್ಯದಲ್ಲಿ ಖರೀದಿಸುವ ಮೊದಲ 400 ಬಸ್‌ಗಳಿಗೆ ಪ್ರತಿ ಇ-ಬಸ್‌ಗೆ 20 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ.


Click it and Unblock the Notifications