ಟೊಯೊಟಾ ಇನ್ನೋವಾ ಕ್ರಿಸ್ಟಾ ಸೇರಿ ಮುಂಬರಲಿರುವ ಬೆಸ್ಟ್ ಕಾರುಗಳು
ಭಾರತದ ವಾಹನ ಮಾರುಕಟ್ಟೆ ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿತ್ತು. ಇದೀಗ ಮಾರಾಟದಲ್ಲಿ ಸುಧಾರಣೆ ಕಂಡಿದೆ. ಟೊಯೊಟಾ, ಮಾರುತಿ ಸುಜುಕಿ, ಟಾಟಾ ಸೇರಿದಂತೆ ವಿವಿಧ ವಾಹನ ತಯಾರಕ ಕಂಪನಿಗಳು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಮುಂಬರಲಿರುವ ರೂ.15-20 ಲಕ್ಷ ಬೆಲೆಯ ಕಾರುಗಳು ಯಾವುದೆಂದು ತಿಳಿಯೋಣ.
ಟೊಯೊಟಾ ಇನ್ನೋವಾ ಕ್ರಿಸ್ಟಾ: ಆಕರ್ಷಕ ಬಾಹ್ಯ ವಿನ್ಯಾಸ, ನವೀಕರಿಸಿದ ಕ್ಯಾಬಿನ್ ಹಾಗೂ ನೂತನ ವೈಶಿಷ್ಟ್ಯಗಳೊಂದಿಗೆ ಇನ್ನೋವಾ ಕ್ರಿಸ್ಟಾವನ್ನು 'ಟೊಯೊಟಾ' ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದು ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಆದರೆ, ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರಲಿದೆ. ಕಂಪನಿಯು ಈ ಎಂಪಿವಿಯನ್ನು ಇನ್ನೋವಾ ಹೈಕ್ರಾಸ್ ನೊಂದಿಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದೆ. ಇದು 6 ಅಥವಾ 7 ಆಸನ ಆಯ್ಕೆಯಲ್ಲಿ ದೊರೆಯಲಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾದ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.4 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿರಲಿದೆ. 16 ಇಂಚಿನ ಸ್ಟೀಲ್ ಅಲಾಯ್ ವೀಲ್ಸ್, ಏರ್ ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBS (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರಲಿದೆ.
ಹುಂಡೈ ಅಲ್ಕಾಜರ್ ಫೇಸ್‌ಲಿಫ್ಟ್: ದೇಶೀಯ ಮಾರುಕಟ್ಟೆಗೆ ಮುಂಬರಲಿರುವ ಹುಂಡೈ ಅಲ್ಕಾಜರ್ ಫೇಸ್‌ಲಿಫ್ಟ್, ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಮಹೀಂದ್ರಾ XUV700ಗೆ ನೇರ ಪ್ರತಿಸ್ಪರ್ದಿಯಾಗಿದ್ದು, ಈ ಹುಂಡೈ ಅಲ್ಕಾಜರ್ ಹೊರ, ಒಳಭಾಗದ ವಿನ್ಯಾಸ, ಎಂಜಿನ್ ಹಾಗೂ ವೈಶಿಷ್ಟ್ಯಗಳಲ್ಲಿ ನವೀಕರಣಗಳನ್ನು ಪಡೆದುಕೊಳ್ಳುತ್ತಿದೆ. ಹೊಸ ಕಾರು ದೊಡ್ಡದಾದ ಸನ್ ರೂಫ್, ವೈರ್ ಲೆಸ್ ಚಾರ್ಜಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕನ್ಸೋಲ್ ಅನ್ನು ಹೊಂದಿರಲಿದ್ದು, ರೂ.15-20 ಲಕ್ಷ ಬೆಲೆಯೊಳಗೆ ಖರೀದಿಗೆ ದೊರೆಯಬಹುದು.

ಫೋರ್ಸ್ ಗೂರ್ಖಾ 5 ಡೋರ್: ಮುಂಬರಲಿರುವ ಮಹೀಂದ್ರಾ ಥಾರ್ 5 ಡೋರ್ ಎಸ್‌ಯುವಿಗೆ ಫೋರ್ಸ್ ಗೂರ್ಖಾ 5 ಡೋರ್ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 3 ಡೋರ್ ಗೂರ್ಖಾದ ಪ್ಲಾಟ್‌ಫಾರ್ಮ್ ಆಧಾರಿತವಾಗಿರಲಿದೆ. ಆದರೆ, ಕೊಂಚ ಮಟ್ಟಿಗೆ ಉದ್ದವಿರಲಿದೆ. ವೈಶಿಷ್ಟ್ಯದ ವಿಚಾರದಲ್ಲೂ ಬಹುತೇಕ ಹಿಂದಿನ ಮಾದರಿಗೆ ಹೋಲಿಕೆಯಾಗುತ್ತದೆ. ಇದು ಕೂಡ 2.6 ಲೀಟರ್ ಡಿಸೇಲ್ ಎಂಜಿನ್ ಜೊತೆಗೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು.
ಮಾರುತಿ ಸುಜುಕಿ ಇನ್ನೋವಾ ಆಧಾರಿತ ಎಂಪಿವಿ: ಜಾಗತಿಕವಾಗಿ ಟೊಯೊಟಾ ಹಾಗೂ ಮಾರುತಿ ಸಜುಕಿ ಕಂಪನಿಗಳು ತಂತ್ರಜ್ಞಾನ ಹಂಚಿಕೆ ಸಂಬಂಧ ಒಪ್ಪಂದ ಮಾಡಿಕೊಂಡಿವೆ. ಮಾರುತಿ ಸುಜುಕಿ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ ಎಂಪಿವಿಯನ್ನು ತಯಾರಿಸುವ ಕಾರ್ಯದಲ್ಲಿ ನಿರತವಾಗಿದೆ. ಮುಂಬರುಲಿರುವ ಹೊಸ ಕಾರು, ಇನ್ನೋವಾ ಹೊಂದಿರುವ ರೀತಿಯಲ್ಲಿ ಎಂಜಿನ್ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿರಲಿದೆ.
ಮಾರುತಿ ಸುಜುಕಿ 7 ಆಸನಗಳ ಗ್ರ್ಯಾಂಡ್ ವಿಟಾರಾ: ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಮಿಡ್-ಸೈಜ್ ಎಸ್‌ಯುವಿ ಗ್ರ್ಯಾಂಡ್ ವಿಟಾರಾವನ್ನು ಬಹುತೇಕ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಕಂಪನಿಯು 7 ಆಸನಗಳ ಗ್ರ್ಯಾಂಡ್ ವಿಟಾರಾವನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದ್ದು, ಇದು ಹುಂಡೈ ಕ್ರೆಟಾ ಹಾಗೂ ಅಲ್ಕಾಜರ್ ಕಾರುಗಳಿಂದ ಭಾರೀ ಪೈಪೋಟಿಯನ್ನು ಎದುರಿಸಬೇಕಾಗಿದ್ದು, ನೂತನ ಗ್ರ್ಯಾಂಡ್ ವಿಟಾರಾ, ಹಿಂದಿನ ಮಾದರಿ ಹೊಂದಿರುವ ಎಂಜಿನ್ ಅನ್ನೇ ಹೊಂದಿರಲಿದ್ದು, ದೊಡ್ಡದಾದ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಟಾಟಾ Curvv: ಕಳೆದ ತಿಂಗಳು ಮುಕ್ತಾಯಗೊಂಡ ದೆಹಲಿಯಲ್ಲಿ ಆಟೋ ಎಕ್ಸ್‌ಪೋದಲ್ಲಿ ICE ಚಾಲಿತ Curvv ಕಾರನ್ನು ಟಾಟಾ ಮೋಟಾರ್ಸ್ ಅನಾವರಣ ಮಾಡಿತ್ತು. ಇದು ಮುಂದಿನ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ಇದು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಒಟ್ಟಾರೆಯಾಗಿ ಈ ಕಾರುಗಳು ಹತ್ತು ಹಲವು ವೈಶಿಷ್ಟ್ಯಗಳಿಂದ ದೇಶದಲ್ಲಿ ಬಿಡುಗಡೆಯಾಗುತ್ತಿದ್ದು, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು.


Click it and Unblock the Notifications