ಭಾರತದಲ್ಲಿ ಅಬ್ಬರಿಸಲು ರೆಡಿಯಾಗಿವೆ ಕಡಿಮೆ ಬೆಲೆಯ ಸಣ್ಣ ಕಾರುಗಳು
ದೇಶೀಯ ಕಾರು ಮಾರುಕಟ್ಟೆಯನ್ನು ಬಹುತೇಕ ಎಸ್‌ಯುವಿಗಳು ಆವರಿಸಿಕೊಂಡಿವೆ. ಆದರೂ ಟಾಟಾ, ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಂಪನಿಗಳ ಸಣ್ಣ ಕಾರುಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಅಂತಹದ್ದೇ ನಾಲ್ಕು ಕಾರುಗಳು ಈ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಎಂಜಿ ಕಾಮೆಟ್: ಪ್ರಮುಖ ಬ್ರಿಟಿಷ್ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಎಂಜಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಹೊರಟಿರುವ 2 ಡೋರ್ ಪುಟ್ಟ ಎಲೆಕ್ಟ್ರಿಕ್ ಕಾರಿಗೆ ಎಂಜಿ ಕಾಮೆಟ್ ಎಂದು ನಾಮಕರಣ ಮಾಡಿದೆ. ಇದು, ನೋಡಲು ಈ ಹಿಂದೆ, ದೇಶದ ರಸ್ತೆಗಳಲ್ಲಿ ಕಾಣಸಿಗುತ್ತಿದ್ದ ರೇವಾ ಪುಟ್ಟ ಕಾರಿಗೆ ಹೋಲಿಕೆಯಾಗುತ್ತದೆ. ಎಂಜಿ ಕಂಪನಿ ಈ ಕಾರನ್ನು ಹಲವು ಬಾರಿ ಪರೀಕ್ಷಿಸಿದೆ. ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನೂ ಪಡೆದುಕೊಂಡಿದೆ.

ನೂತನ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು, ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದ್ದು, ರೂ.10 ಲಕ್ಷದೊಳಗೆ ಗ್ರಾಹಕರಿಗೆ ಸಿಗಬಹುದು. ಈ ಪುಟ್ಟ ಕಾರು, 20-25kWh ಬ್ಯಾಟರಿ ಪ್ಯಾಕ್ ಹೊಂದಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರಬಹುದು. ಸಂಪೂರ್ಣ ಚಾರ್ಜಿನಲ್ಲಿ 300 km ರೇಂಜ್ ನೀಡಬಹುದು. ಬಹುತೇಕ ಈ ವರ್ಷದ ಮಧ್ಯ ಭಾಗದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದ್ದು, ಟಾಟಾ ಟಿಯಾಗೊ ಇವಿ, ಸಿಟ್ರಸ್ ಇಸಿ3 ಕಾರಿಗೆ ಪೈಪೋಟಿ ನೀಡಬಹುದು.
ಟಾಟಾ ಆಲ್ಟ್ರೋಜ್ ಸಿಎನ್‌ಜಿ: ಭಾರತದ ಗ್ರಾಹಕರು, ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುವ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಬಹುತೇಕರ ಆಯ್ಕೆ ಸಿಎನ್‌ಜಿ ಚಾಲಿತ ಕಾರುಗಳಿಗಿವೆ. ಈ ನೂತನ ಟಾಟಾ ಆಲ್ಟ್ರೋಜ್ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಸಿಎನ್‌ಜಿ ಮೋಡ್‌ನಲ್ಲಿ ಗರಿಷ್ಠ 77 bhp ಪವರ್ ಹಾಗೂ 97 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಬರೋಬ್ಬರಿ 60 ಲೀಟರ್ ಸಿಎನ್‌ಜಿ ಇಂಧನ ಸಂಗ್ರಹಣಾ ಟ್ಯಾಂಕ್ ಹೊಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಕಾರು, ರೂ.10.55 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಜೊತೆಗೆ 25km/kg ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ. 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಆಕರ್ಷಕ ಸನ್‌ರೂಫ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, ಆಟೋ ಫೋಲ್ಡಿಂಗ್ ORVM ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್: ದೇಶದಲ್ಲಿ ಪ್ರತಿಯೊಬ್ಬರು ಮಾರುತಿ ಸುಜುಕಿಯ ಸ್ವಿಫ್ಟ್ ಕಾರುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. 2024ರಲ್ಲಿ ಹೊಸ ತಲೆಮಾರಿನ ಸ್ವಿಫ್ಟ್ ಖರೀದಿಗೆ ದೊರೆಯುವ ಸಾಧ್ಯತೆ ಇದ್ದು, ಇದು 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿರಲಿದೆ. ಅಲ್ಲದೆ, ಅತ್ಯತ್ತಮ ಇಂಧನ ದಕ್ಷತೆ ಹೊಂದಿರಲಿದೆ ಎಂದು ಅಂದಾಜಿಸಲಾಗಿದ್ದು, 35kmpl - 40kmpl ಮೈಲೇಜ್ ನೀಡಬಹುದು. ಮಾರುತಿ ಸುಜುಕಿ ಡಿಜೈರ್ ಕೂಡ ಇದೇ ಪವರ್‌ಟ್ರೇನ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಬರಬಹುದು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ರೂ.6 ಲಕ್ಷದಿಂದ ರೂ.8.98 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಲಿದ್ದು, 23.2 - 23.76 kmpl ಮೈಲೇಜ್ ನೀಡಲಿದೆ. 1.2 ಲೀಟರ್ ಡ್ಯೂಯಲ್ ಜೆಟ್ ಪೆಟ್ರೋಲ್ ಎಂಜಿನ್ 90 PS ಪವರ್, 113 Nm ಪೀಕ್ ಟಾರ್ಕ್, CNG ಆವೃತ್ತಿಯು 77.5 PS ಪವರ್, 98.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್? AMT ಆಯ್ಕೆಯಲ್ಲಿ ಈ ಕಾರು ಖರೀದಿಗೆ ದೊರೆಯಲಿದೆ.
ಹೊಸ ತಲೆಮಾರಿನ ಟಿಯಾಗೊ: ಟಾಟಾ ಮೋಟಾರ್ಸ್ ಈಗಾಗಲೇ, ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿ ಟಿಯಾಗೊ ಕಾರನ್ನು ಮಾರಾಟ ಮಾಡುತ್ತಿದೆ. ಇದೀಗ, ಹೊಸ ತಲೆಮಾರಿನ ಟಿಯಾಗೊ ಕಾರನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಈ ಕಾರು, ಆಲ್ಟ್ರೋಜ್ ಹೊಂದಿರುವಂತೆ ಆಲ್ಪಾ ಪ್ಲಾಟ್‌ಫಾರ್ಮ್ ಆಧರಿಸಿದ್ದು, ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಬಹುದು. ಒಟ್ಟಾರೆಯಾಗಿ ಮುಂಬರುವ ಈ ಕಾರುಗಳು ರೂ.10 ಲಕ್ಷದೊಳಗೆ ಖರೀದಿಗೆ ಸಿಗಬಹುದು.


Click it and Unblock the Notifications