ವಂದೇ ಭಾರತ್ ರೈಲುಗಳಿಂದ ರೈಲ್ವೆಗೆ 55 ಲಕ್ಷ ರೂ. ನಷ್ಟ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಭಾರತೀಯ ರೈಲ್ವೆಯನ್ನು ಅತ್ಯಾಧುನಿಕವಾಗಿ ಮಾಡುವಲ್ಲಿ ವಂದೇ ಭಾರತ್ ರೈಲುಗಳು ಪ್ರಮುಖ ಪಾತ್ರ ವಹಿಸಿವೆ. ಸದ್ಯ ಒಂದೊಂದೆ ರಾಜ್ಯಗಳಲ್ಲಿ ವಂದೇ ಭಾರತ್ ರೈಲುಗಳ ಸೇವೆ ಆರಂಭವಾಗುತ್ತಿದೆ. ಆದ್ರೆ ಹಲವೆಡೆ ಈ ರೈಲುಗಳಿಗೆ ಕಲ್ಲು ತೂರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ರೈಲ್ವೆಗೆ ಬರೋಬ್ಬರಿ 55 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಹೌದು ಈ ಕುರಿತು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಕಳೆದ ಐದು ವರ್ಷಗಳಲ್ಲಿ ವಂದೇ ಭಾರತ್ ರೈಲುಗಳ ಮೇಲೆ ಸಾರ್ವಜನಿಕರಿಂದ ಕಲ್ಲು ತೂರಾಟದ ಪ್ರಕರಣಗಳ ಪರಿಣಾಮವಾಗಿ ರೈಲ್ವೆಗೆ 55 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು 151 ಮಂದಿಯನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ರೈಲ್ವೆ ರಕ್ಷಣಾ ಪಡೆ ಜಿಆರ್‌ಪಿ/ ಜಿಲ್ಲಾ ಪೊಲೀಸ್ ಮತ್ತು ನಾಗರಿಕ ಆಡಳಿತದ ಸಮನ್ವಯದಲ್ಲಿ ರೈಲ್ವೆ ಹಳಿಗಳ ಪಕ್ಕದ ಜನವಸತಿ ಪ್ರದೇಶಗಳಲ್ಲಿ ಇಂತಹ ಕೃತ್ಯವೆಸಗಿ ಪ್ರಯಾಣಿಕರ ಜೀವ ಮತ್ತು ರೈಲ್ವೆ ಆಸ್ತಿಗೆ ಹಾನಿ ಮಾಡುವವರ ನಿಯಂತ್ರಣಕ್ಕಾಗಿ ಆಪರೇಷನ್ ಸತಿಯನ್ನು ನಡೆಸುತ್ತಿದೆ ಎಂದು ತಿಳಿಸಿದರು. ಕಲ್ಲು ತೂರಾಟ ಮತ್ತು ಅದರ ಪರಿಣಾಮಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಇದನ್ನು ಮಾಡಲಾಗುತ್ತಿದೆ ಎಂದರು.
ತಿಂಗಳ ಆರಂಭದಲ್ಲಿ, ಹೊಸದಾಗಿ ಪ್ರಾರಂಭಿಸಲಾದ ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಸೊಹಾವಾಲ್ ನಿಲ್ದಾಣದ ಬಳಿ ಕಲ್ಲು ತೂರಾಟದ ಘಟನೆ ನಡೆದಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದೆ ಅಲ್ಲದೇ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ, ಕಳ್ಳತನ ಅಥವಾ ಪ್ರಯಾಣಿಕರ ಸಾಮಾನುಗಳಿಗೆ ಹಾನಿಯಾದ ಪ್ರಕರಣಗಳು ವರದಿಯಾಗಿಲ್ಲ ಎಂದರು.

ಜುಲೈ 5 ರಂದು ಕರ್ನಾಟಕದಲ್ಲಿ ಹೊಸದಾಗಿ ಆರಂಭಿಸಲಾಗಿದ್ದ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕೆಲವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಬೆಳಗ್ಗೆ 8:30ಕ್ಕೆ 'ಕೆಎಂ 2017/500' ನಲ್ಲಿ ಕಡೂರು-ಬೀರೂರು ವಿಭಾಗದ ನಡುವೆ ರೈಲು ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲು ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ಹೊಸ ರೈಲುಗಳು: ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಕನಿಷ್ಠ 12 ಹೊಸ ರೈಲುಗಳು ಪ್ರಾಥಮಿಕವಾಗಿ ದೂರದ ವಲಸಿಗರನ್ನು ಗುರಿಯಾಗಿಟ್ಟುಕೊಂಡು ಆಗಸ್ಟ್ 15 ಕ್ಕೂ ಮೊದಲೇ ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ಗಢ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಪಂಜಾಬ್, ಒಡಿಶಾ, ಮಹಾರಾಷ್ಟ್ರ, ದೆಹಲಿ ಮತ್ತು ಇತರ ಸ್ಥಳಗಳನ್ನು ಸಂಪರ್ಕಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಝೋನಲ್ ರೈಲ್ವೇಗಳು ಈ ರೈಲುಗಳಿಗೆ ಮಾರ್ಗಗಳನ್ನು ರಚಿಸುತ್ತಿವೆ, ಇದಕ್ಕಾಗಿ ಎರಡು ರೀತಿಯ ಸಂಯೋಜನೆಗಳನ್ನು ಆಲೋಚಿಸಲಾಗುತ್ತಿದೆ. ಕಾಯ್ದಿರಿಸದ ಸಾಮಾನ್ಯ ವರ್ಗದ ಆಸನಗಳನ್ನು ಹೊಂದಿರುವ ರೈಲುಗಳು ಮತ್ತು ಸಾಮಾನ್ಯ ವರ್ಗದ ಆಸನಗಳು ಮತ್ತು ನಾನ್-ಎಸಿ ಸ್ಲೀಪರ್ ವರ್ಗದ ಮಿಶ್ರಣವನ್ನು ಹೊಂದಿರುವ ರೈಲುಗಳು ಎಂದು ತಿಳಿದುಬಂದಿದೆ.
ಯಾವ ಮಾರ್ಗಗಳು ದೀರ್ಘಕಾಲಿಕ ಬೇಡಿಕೆಗಳನ್ನು ಹೊಂದಿವೆ ಎಂಬುದನ್ನು ತಿಳಿಯಲು ಅಧ್ಯಯನ ನಡೆಸಿದ್ದೇವೆ, ಇದರಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಕೆಲಸಕ್ಕಾಗಿ ದೊಡ್ಡ ನಗರಗಳಿಗೆ ಪ್ರಯಾಣಿಸುವವರು ಹೆಚ್ಚಾಗಿ ಇದ್ದಾರೆ. ಈ ತರಗತಿಗಳಿಗೆ ಹೆಚ್ಚಿನ ಬೇಡಿಕೆ ಈಡೇರಿಲ್ಲ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದು, ಹೊಸ ರೈಲುಗಳನ್ನು ನಿರ್ಧರಿಸಲು ರೈಲ್ವೆ ಸಚಿವಾಲಯವು ಕಳೆದ ಒಂದು ವರ್ಷದಿಂದ ಮಾರ್ಗಗಳಲ್ಲಿನ ಬೇಡಿಕೆಯ ಡೇಟಾವನ್ನು ಶೋಧಿಸುತ್ತಿದೆ ಎಂದು ತಿಳಿಸಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








