ಹೊಸ ತಂತ್ರಜ್ಞಾನ: ರೈಲುಗಳಲ್ಲಿನ ದುರ್ವಾಸನೆಗೆ ಪರಿಹಾರ ಕಂಡುಕೊಂಡ ಭಾರತೀಯ ರೈಲ್ವೆ!
ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ರೈಲ್ವೆಯು (Indian Railways) ಭಾರೀ ಸುಧಾರಣೆ ಕಂಡಿದೆ. ರೈಲುಗಳು, ನಿಲ್ದಾಣಗಳು ಸೇರಿದಂತೆ ಪ್ರಯಾಣಿಕರು ಸುಲಭವಾಗಿ ಸೇವೆ ಪಡೆಯಲು ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಆದರೆ, ಎಷ್ಟೇ ಅಭಿವೃದ್ಧಿಗೆ ಒತ್ತು ನೀಡಿದ್ರು ಪ್ರಯಾಣಿಕರನ್ನು ಕಾಡುತ್ತಿರುವ ಒಂದೇ ಒಂದು ಸಮಸ್ಯೆಯೆಂದರೆ, ವಾಸನೆ ಮತ್ತು ಕೊಳಕು ಶೌಚಾಲಯಗಳು.
ರೈಲಿನಲ್ಲಿ ಪ್ರಯಾಣಿಸಿದ ಪ್ರತಿಯೊಬ್ಬರು ಈ ಬಗ್ಗೆ ಅನೇಕ ದೂರುಗಳನ್ನು ನೀಡುತ್ತಲೇ ಇದ್ದಾರೆ. ಭಾರತೀಯ ರೈಲ್ವೆ (Indian Railways) ಕೂಡ ಈ ಸಮಸ್ಯೆಯನ್ನು ಪರಿಹರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆಯಾದ್ರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿಯೇ ಈ ಬಾರಿ ತಂತ್ರಜ್ಞಾನದ ಕಡೆಗೆ ತಿರುಗಲು ಯೋಜಿಸಿದೆ. ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ರೈಲ್ವೆ ಮಂಡಳಿ ಐಒಟಿ (IOT) ಆಧಾರಿತ ತಂತ್ರಜ್ಞಾನವನ್ನು ಪರೀಕ್ಷಿಸುವ ಆಲೋಚನೆಯಲ್ಲಿದೆ. ಡಿಟೆಕ್ಟರ್‌ಗಳ ಮೂಲಕ ದುರ್ವಾಸನೆ ಹೀರಿಕೊಳ್ಳುವ ತಂತ್ರಜ್ಞಾನವನ್ನು ಬಳಸುವುದು ಇದರ ಮೂಲ ಉದ್ದೇಶವಾಗಿದೆ. ಇದು ಕಾರ್ಯಾಚರಣೆಗೆ ಬಂದರೆ ಸಮಸ್ಯೆ ಬಗೆಹರಿಯುವ ವಿಶ್ವಾಸದಲ್ಲಿ ಭಾರತೀಯ ರೈಲ್ವೆ ಇದೆ.

ಮುಂಬೈ ಮೂಲದ ಸ್ಟಾರ್ಟ್ಅಪ್ ವಿಲಿಸೊ ಟೆಕ್ನಾಲಜೀಸ್ ಅನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಸದ್ಯಕ್ಕೆ ಪರೀಕ್ಷಾ ಯೋಜನೆಯಾಗಿದ್ದು, ಇದನ್ನು ಕೆಲವು ಬೋಗಿಗಳಲ್ಲಿ ಮಾತ್ರ ಮೊದಲಿಗೆ ಜಾರಿಗೆ ತರಲಾಗುವುದು. ಒಮ್ಮೆ ಇದು ಅಂದುಕೊಂಡಂತೆ ಯಶಸ್ಸು ಕಂಡರೆ ನಿಧಾನವಾಗಿ ಎಲ್ಲಾ ಭೋಗಿಗಳಲ್ಲೂ ಇದನ್ನು ಪರಿಚಯಿಸಲಾಗುವುದು.
ಹೇಗೆ ಕೆಲಸ ಮಾಡುತ್ತದೆ?: ಶೌಚಾಲಯಗಳಲ್ಲಿ ದುರ್ವಾಸನೆಯನ್ನು ಗುರುತಿಸಲು ಸಂವೇದಕ (ಸೆನ್ಸಾರ್)ಗಳನ್ನು ಬಳಸುವ ಸ್ಮಾರ್ಟ್ ವ್ಯವಸ್ಥೆಗಳಿವೆ. ಇವು ಗಾಳಿಯಲ್ಲಿರುವ ಬಾಷ್ಪಶೀಲ ಸಂಯುಕ್ತಗಳು ಮತ್ತು ಅಣುಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ನಂತರ ಡೇಟಾವನ್ನು ಕೇಂದ್ರ-ಕೇಂದ್ರಕ್ಕೆ ರವಾನಿಸಲಾಗುತ್ತದೆ. ಹಬ್ ಮಾಹಿತಿಯನ್ನು ವಿಶ್ಲೇಷಿಸುತ್ತದೆ ಮತ್ತು ಸ್ವಯಂಚಾಲಿತ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ.

ಉದಾಹರಣೆಗೆ ತೀರಾ ಕೆಟ್ಟ ದುರ್ವಾಸನೆ ಇದ್ದಲ್ಲಿ ಆ ಬಗ್ಗೆ ನೈರ್ಮಲ್ಯ ಸಿಬ್ಬಂದಿಯನ್ನು ಎಚ್ಚರಿಸುವುದು ಮತ್ತು ಸ್ವಚ್ಛಗೊಳಿಸುವ ಅಗತ್ಯವಿದೆ ಎಂದು ಅವರಿಗೆ ತಿಳಿಸುವಂತೆ ಮಾಡುತ್ತದೆ. ಈ ನೈಜ - ಸಮಯದ ಮೇಲ್ವಿಚಾರಣೆಯು ತ್ವರಿತ ಮಧ್ಯಪ್ರವೇಶ ಮತ್ತು ಸುಧಾರಿತ ವಾಸನೆ ನಿಯಂತ್ರಣಕ್ಕೆ ಅನುವು ಮಾಡಿಕೊಡುತ್ತದೆ. ವಿಲಿಸೊ ಟೆಕ್ನಾಲಜೀಸ್ ವೆಬ್‌ಸೈಟ್ ಪ್ರಕಾರ, ಸ್ಟಾರ್ಟ್ಅಪ್ ಕೆಲವು ಐಒಟಿ ಆಧಾರಿತ ಉತ್ಪನ್ನಗಳನ್ನು ಹೊಂದಿದೆ. ಇದು ಉತ್ತಮ ನೈರ್ಮಲ್ಯಕ್ಕೆ ಸಹಾಯ ಮಾಡುತ್ತದೆ. ಉದಾಹರಣೆಗೆ, ವಾಸನೆ, ಒಟ್ಟು ಬಾಷ್ಪಶೀಲ ಸಾವಯವ ಸಂಯುಕ್ತ (ಟಿವಿಒಸಿ), ತಾಪಮಾನ ಮತ್ತು ಆರ್ದ್ರತೆ (humidity)ಯನ್ನು ಮೇಲ್ವಿಚಾರಣೆ ಮಾಡುವ ಐಒಟಿ ಆಧಾರಿತ ಎಲೆಕ್ಟ್ರಾನಿಕ್ ಸಾಧನವಾದ ಗಂಧವೇದ್ ಇದೆ.
ವಾಸನೆ ಮೇಲ್ವಿಚಾರಣೆ ಅಗತ್ಯವಿರುವ ಶೌಚಾಲಯದಲ್ಲಿ ಈ ಸಾಧನವನ್ನು ಅಳವಡಿಸಲಾಗುವುದು ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಉತ್ಪನ್ನ ವಿವರಣೆಯನ್ನು ಉಲ್ಲೇಖಿಸಲಾಗಿದೆ. "ಈ ಸಾಧನವು ವಾಸನೆಯ ಡೇಟಾವನ್ನು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಅಪ್ಲಿಕೇಶನ್‌ಗೆ ಕಳುಹಿಸುತ್ತದೆ, ಇದನ್ನು ಶೌಚಾಲಯದ ನೈರ್ಮಲ್ಯಕ್ಕೆ ಜವಾಬ್ದಾರರಾಗಿರುವ ಉಸ್ತುವಾರಿ ಅಥವಾ ಮೇಲ್ವಿಚಾರಣಾ ಪ್ರಾಧಿಕಾರವು ಬಳಸುತ್ತದೆ" ಎಂದು ಕಂಪನಿಯು ಉತ್ಪನ್ನದ ಬಗ್ಗೆ ಹೇಳಿದೆ.

ಸದ್ಯಕ್ಕೆ ಈ ಉತ್ಪನ್ನದ ವಿಲಿಸೊ ಟೆಕ್ನಾಲಜೀಸ್ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಒದಗಿಸಲಾಗಿದೆ. ಆದ್ರೆ ರೈಲುಗಳು ಮತ್ತು ನಿಲ್ದಾಣಗಳ ಶೌಚಾಲಯಗಳಲ್ಲಿ ಬಳಸಲು ಭಾರತೀಯ ರೈಲ್ವೆ ಯೋಜಿಸಿರುವ ಉತ್ಪನ್ನ ಇದೇ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಭಾರತೀಯ ರೈಲ್ವೆಯು ಈ ಬಗ್ಗೆ ಮಾಹಿತಿ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








