Volvo C40 Recharge: ವೋಲ್ವೋ C40 ರೀಚಾರ್ಜ್ ಬಿಡುಗಡೆ: ಸಿಂಗಲ್ ಚಾರ್ಜ್-530km ರೇಂಜ್
ಹೊಸ ವೋಲ್ವೋ ಎಲೆಕ್ಟ್ರಿಕ್ C40 ರೀಚಾರ್ಜ್ (Volvo C40 Recharge) ಅನ್ನು 61.25 ಲಕ್ಷ ರೂ.ಗೆ (ಎಕ್ಸ್ ಶೋರೂಂ) ಇಂದು ಬಿಡುಗಡೆ ಮಾಡಲಾಗಿದೆ. ವೊಲ್ವೊ ಕಂಪನಿಯು ಸೆಪ್ಟೆಂಬರ್ 5, ಸಂಜೆ 5 ರಿಂದ ಬುಕಿಂಗ್‌ಗಳನ್ನು ಪ್ರಾರಂಭಿಸಲಿದ್ದು, ಮುಂದಿನ ವಾರದಲ್ಲಿ ವಿತರಣೆಗಳು ಪ್ರಾರಂಭವಾಗಲಿವೆ.
ವೊಲ್ವೊ ತನ್ನ ಹಿಂದಿನ ಮಾದರಿಯಾದ XC40 ರೀಚಾರ್ಜ್ ಅನ್ನೇ SUV-ಕೂಪ್ ಆಗಿ C40 ರೀಚಾರ್ಜ್ ಅನ್ನು ಮರು-ವಿನ್ಯಾಸಗೊಳಿಸಿದೆ. ವೋಲ್ವೋದ ಭಾರತೀಯ ಇವಿ ಮಾದರಿಗಳಲ್ಲಿ ಇದು ಎರಡನೇ EV ಆಗಿದ್ದು, ಇದರೊಂದಿಗೆ ಕಂಪನಿಯು ತನ್ನ EV ಮಾದರಿಗಳ ಬೆಳವಣಿಗೆಯನ್ನು ಮುಂದಿನ ವರ್ಷದ ವೇಳೆಗೆ ಶೇ35 ರಷ್ಟು ಹೆಚ್ಚಿಸಲು ಯೋಜನೆ ರೂಪಿಸಿಕೊಂಡಿದೆ.

ಹೇಗಿದೆ ಕಾರಿನ ವಿನ್ಯಾಸ: ಮೊದಲೇ ಹೇಳಿದಂತೆ ತನ್ನ ಹಿಂದಿನ ಮಾದರಿಯಾದ XC40 ಅಂತೆಯೇ ಅದೇ ಹಿಂಭಾಗವನ್ನು ಉಳಿಸಿ, ರೂಫ್ ಅನ್ನು ಕೂಪ್-ತರಹದ ಡಿಸೈನ್ ಕೊಟ್ಟು ಹಿಂಭಾಗದ ವಿಂಡ್‌ಸ್ಕ್ರೀನ್ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಹೊಸ ಟೈಲ್‌ಗೇಟ್ ಮತ್ತು ಟೈಲ್-ಲ್ಯಾಂಪ್ ಅಸೆಂಬ್ಲಿಯನ್ನು ಪಡೆದಿದೆ. ಟೈಲ್ ಲ್ಯಾಂಪ್‌ಗಳು ಸಾಕಷ್ಟು ತೆಳ್ಳಗಿದ್ದು, ಹೊಸ ರಿವರ್ಸ್ ಲೈಟ್‌ಗಳನ್ನು ಸಹ ಪಡೆದಿದೆ.
ಒಟ್ಟಾರೆ C40 ರೀಚಾರ್ಜ್‌ನ ಹಿಂಭಾಗದ ವಿನ್ಯಾಸವು XC40 ರೀಚಾರ್ಜ್‌ಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ. ಹೆಚ್ಚುವರಿಯಾಗಿ, ಇಳಿಜಾರಿನ ರೂಫ್ ಇರುವ ಕಾರಣದಿಂದಾಗಿ ವಿಂಡೋ ಲೈನ್ ಅನ್ನು ಸ್ವಲ್ಪಮಟ್ಟಿಗೆ ಮರುವಿನ್ಯಾಸಗೊಳಿಸಲಾಗಿದೆ. C40 ರೀಚಾರ್ಜ್ ವಿಶೇಷವಾಗಿ Pixel LED ಹೆಡ್‌ಲೈಟ್‌ಗಳನ್ನು ಪಡೆದಿದ್ದು, ನೀವು ಭಾರತದಲ್ಲಿನ ಯಾವುದೇ ವೋಲ್ವೋದಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ.

ಥಾರ್‌ನ ಹ್ಯಾಮರ್ LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಹೆಡ್‌ಲ್ಯಾಂಪ್‌ಗಳು, ಮುಂಭಾಗದ ಬಂಪರ್ ಮತ್ತು ಹುಡ್, ಬಾಗಿಲುಗಳ ಮೇಲಿನ ಲೈನ್‌ಗಳು, ಡ್ಯುಯಲ್-ಟೋನ್ 19-ಇಂಚಿನ ಅಲಾಯ್ ವೀಲ್‌ಗಳು ಕಾರಿಗೆ ಇನ್ನಷ್ಟು ಸ್ಪೋರ್ಟಿ ಲುಕ್ ನೀಡಿವೆ. ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್ ವಿನ್ಯಾಸವು ವಿಶಿಷ್ಟವಾಗಿದ್ದು, ವೋಲ್ವೊ ಮತ್ತೊಮ್ಮೆ ತನ್ನ ಐಷಾರಾಮಿತನವನ್ನು ಸಾಭೀತುಪಡಿಸಿದೆ.
ಒಳಾಂಗಣದಲ್ಲಿ 9.0-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಸ್ಲಿಮ್ ಎಸಿ ವೆಂಟ್‌ಗಳು, ಡ್ಯಾಶ್‌ಬೋರ್ಡ್‌ನಲ್ಲಿ ವುಡ್ ಇಂಟೇಕ್ ಮತ್ತು 12.3-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ. C40 ರೀಚಾರ್ಜ್ ಆಂಡ್ರಾಯ್ಡ್-ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು Google ಮ್ಯಾಪ್ಸ್, ಆನ್‌ಬೋರ್ಡ್ ಇ-ಸಿಮ್ ಸಹಾಯದಿಂದ ಪ್ಲೇ ಸ್ಟೋರ್‌ನಿಂದ ಹಲವಾರು ಅಪ್ಲಿಕೇಶನ್‌ಗಳನ್ನು ಪಡೆಯುತ್ತದೆ.

ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ, ADAS ತಂತ್ರಜ್ಞಾನ, ಸಂಪರ್ಕಿತ ಕಾರ್ ಟೆಕ್, ಡ್ರೈವರ್ ಸೈಡ್ ಮೆಮೊರಿ ಕಾರ್ಯದೊಂದಿಗೆ ಚಾಲಿತ ಮುಂಭಾಗದ ಸೀಟುಗಳು, ಹೀಟಿಂಗ್ ಮತ್ತು ಕೂಲಿಂಗ್ ಅನ್ನು ಸಹ ಪಡೆಯುತ್ತದೆ. ಹವಾಮಾನ ನಿಯಂತ್ರಣ ವ್ಯವಸ್ಥೆ, ಪ್ರೀಮಿಯಂ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಇವೆಲ್ಲವನ್ನು ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮೂಲಕ ಮಾಡಬಹುದು.
C40 ಬೂಟ್ 452 ಲೀಟರ್‌ಗಳಿಂದ 413 ಲೀಟರ್‌ಗಳಿಗೆ ಇಳಿದಿದೆ. ಆದ್ರೆ 31-ಲೀಟರ್ ಫ್ರಂಕ್ ಸ್ಪೇಸ್ ಮಾತ್ರ ಬದಲಾಗದೆ ಹಾಗೇ ಉಳಿದಿದೆ. ಇಳಿಜಾರಿನ ರೂಫ್‌ನಿಂದಾಗಿ ಹಿಂದಿನ ಸೀಟಿನ ಹೆಡ್‌ರೂಮ್ ಸಹ ಕೆಳಗಿಳಿಯುತ್ತದೆ. ಗಮನಾರ್ಹವಾಗಿ, ಪ್ರಾಣಿಗಳ ಹಾನಿ ಮತ್ತು ಇಂಗಾಲವನ್ನು ಕಡಿಮೆ ಮಾಡಲು ತನ್ನ ಎಲ್ಲಾ ಎಲೆಕ್ಟ್ರಿಕ್ ಕಾರುಗಳಲ್ಲಿ ಲೆದರ್ ಬಳಕೆಯನ್ನು ಕಡೆಗಣಿಸಿದ್ದು, C40 ನ ಒಳಭಾಗವು ಸಂಪೂರ್ಣವಾಗಿ ಚರ್ಮ-ಮುಕ್ತವಾಗಿದೆ ಎಂದು ವೋಲ್ವೋ ಹೇಳಿಕೊಂಡಿದೆ.

ವೋಲ್ವೋ C40 ರೀಚಾರ್ಜ್ CMA ಪ್ಲಾಟ್‌ಫಾರ್ಮ್ (ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್) ಆಧಾರದ ಮೇಲೆ, ಭಾರತದಲ್ಲಿ C40 ರೀಚಾರ್ಜ್ ಡ್ಯುಯಲ್-ಮೋಟರ್ ಸೆಟಪ್ ಅನ್ನು ಪಡೆದಿದೆ. ಪ್ರತಿ ಆಕ್ಸಲ್‌ನಲ್ಲಿ ಒಂದು - 78kWh ಬ್ಯಾಟರಿ ಪ್ಯಾಕ್‌ನೊಂದಿಗೆ WLTP ಸೈಕಲ್‌ನಲ್ಲಿ ಒಂದೇ ಚಾರ್ಜ್‌ನಲ್ಲಿ 530km ವರೆಗೆ ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ICAT ಪ್ರಕಾರ 683ಕಿ.ಮೀ ರೇಂಜ್ ಅನ್ನು ನೀಡಲಾಗಿದೆ. ತನ್ನ ಹಿಂದಿನ ಮಾದರಿ SUV ನೀಡುತ್ತಿದ್ದ 418km ವ್ಯಾಪ್ತಿಯ ಮೇಲೆ ಶ್ರೇಣಿಯು ಬೃಹತ್ ಪ್ರಮಾಣದಲ್ಲಿ ಏರಿದೆ. ಎರಡು ಎಲೆಕ್ಟ್ರಿಕ್ ಮೋಟರ್‌ಗಳು ಆಲ್-ವೀಲ್-ಡ್ರೈವ್ ಸಾಮರ್ಥ್ಯವನ್ನು ಹೊಂದಿದ್ದು, ಒಟ್ಟಾಗಿ 408hp ಪವರ್ ಮತ್ತು 660Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ.
ವೋಲ್ವೋ 4.7 ಸೆಕೆಂಡ್‌ಗಳಲ್ಲಿ 100kph ವೇಗದಲ್ಲಿ ಚಲಿಸಬಹುದು ಎಂದು ಹೇಳಿಕೊಂಡಿದೆ, ಇದು XC40 ರೀಚಾರ್ಜ್‌ಗಿಂತ 0.2 ಸೆಕೆಂಡುಗಳಷ್ಟು ವೇಗವಾಗಿದೆ. C40 ರೀಚಾರ್ಜ್ 150kW DC ಚಾರ್ಜರ್‌ನೊಂದಿಗೆ ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 27 ನಿಮಿಷಗಳಲ್ಲಿ ಅದರ ಬ್ಯಾಟರಿಗಳನ್ನು ಶೇ 100 ರಷ್ಟು ಚಾರ್ಜ್ ಮಾಡಬಹುದು ಎಂದು ಹೇಳಿದೆ.


Click it and Unblock the Notifications