Tesla: ವಿಶ್ವ EV ಜಗತ್ತನ್ನೇ ಆಳುತ್ತಿರುವ ಟೆಸ್ಲಾಗೆ ಭಾರತವೇಕೆ ಕಷ್ಟ? ಸ್ವದೇಶಿ ಬ್ರಾಂಡ್‌ಗಳ ಕೈವಾಡ?
ವಿಶ್ವ ಎಲೆಕ್ಟ್ರಿಕ್ ವಾಹನ ತಯಾರಕರಲ್ಲಿ ಮೊದಲು ನೆನಪಾಗುವ ಟೆಸ್ಲಾ, ಭಾರತಕ್ಕೆ ಎಂಟ್ರಿ ಕೊಡುವಲ್ಲಿ ಮಾತ್ರ ವಿಫಲವಾಗಿದೆ. 2030 ರ ವೇಳೆಗೆ ಪ್ರತಿ ವರ್ಷ 20 ಮಿಲಿಯನ್ (2 ಕೋಟಿ) ಕಾರುಗಳನ್ನು ತಯಾರಿಸುವ ಬೃಹತ್ ಮಹತ್ವಾಕಾಂಕ್ಷೆಯ ಯೋಜನೆ ಹೊಂದಿರುವ ಟೆಸ್ಲಾಗೆ ಭಾರತದಲ್ಲಿ ತನ್ನ ಉತ್ಪನ್ನವನ್ನು ಮಾರಾಟ ಮಾಡಲಾಗುತ್ತಿಲ್ಲವೇಕೆ?
ಭಾರತೀಯ ವಾಹನ ಮಾರುಕಟ್ಟೆಯು ಒಟ್ಟಾರೆ ಪ್ರಯಾಣಿಕ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕೇವಲ ಶೇ2 ರಷ್ಟು ಪಾಲನ್ನು ಹೊಂದಿದೆ. ಮುಂಬರುವ ವರ್ಷಗಳಲ್ಲಿ ಗಮನಾರ್ಹವಾಗಿ ಬೆಳೆಯುವ ನಿರೀಕ್ಷೆಯಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಹ್ಯುಂಡೈ, ಕಿಯಾ, ಮಹೀಂದ್ರಾ, ಸಿಟ್ರನ್, ಎಂಜಿ, ಆಡಿ, ಬೆಂಝ್, ಬಿಎಂಡಬ್ಲ್ಯು ಮತ್ತು ಜಾಗ್ವಾರ್‌ಗಳು ಕನಿಷ್ಠ ಒಂದು ಸಂಪೂರ್ಣ-ಎಲೆಕ್ಟ್ರಿಕ್ ಮಾದರಿಯನ್ನು ಹೊಂದಿವೆ.

ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಕೂಡ 2024 ರ ಅಂತ್ಯದ ವೇಳಗೆ ತನ್ನ ಮೊದಲ ಸಂಪೂರ್ಣ ಬ್ಯಾಟರಿ ಚಾಲಿತ ಮಾದರಿಯನ್ನು ತರಲಿದೆ. ಆದರೆ ಟೆಸ್ಲಾ ಮಾತ್ರ ಭಾರತಕ್ಕೆ ಬರಲು ಹೆಣಗಾಡುತ್ತಿದೆ. ಭಾರತದಂತಹ ಬೆಲೆ ಸೂಕ್ಷ್ಮ ಮಾರುಕಟ್ಟೆಯಲ್ಲಿ ಇದು ಸಾಧ್ಯವಾಗದಿರಬಹುದು. ಇದಕ್ಕಿರುವ ಪ್ರಮುಖ ಕಾರಣಗಳನ್ನು ಇಲ್ಲಿ ನೋಡೋಣ.
ಕಡಿಮೆ ಬೆಲೆಯ ಟೆಸ್ಲಾ - ಮಾಡೆಲ್ 3 ಇವಿ ರೂ. 32.50 ($39,000)ಲಕ್ಷಕ್ಕಿಂತ ಹೆಚ್ಚಿನ ಬೆಲೆ ಇದೆ. ಜೊತೆಗೆ ಭಾರತದಲ್ಲಿ ಶೇ70 ರಷ್ಟು ಆಮದು ಸುಂಕವನ್ನು ಸೇರಿಸಿ ಆಮದು ಮಾಡಿಕೊಂಡರೆ ಮಧ್ಯಮ ಮಟ್ಟದ ಮರ್ಸಿಡಿಸ್, ಆಡಿ ಅಥವಾ BMW SUV ಯಷ್ಟು ದುಬಾರಿಯಾಗಬಹುದು. ಇದು ಭಾರತದಲ್ಲಿ ಕಂಪನಿಗೆ ಅಂದುಕೊಂಡ ಲಾಭವನ್ನು ತರುವುದು ತುಂಬಾ ಕಷ್ಟ.

ಅಲ್ಲದೇ ಆಮದು ತೆರಿಗೆ ಕಡಿತಕ್ಕೆ ಅವಕಾಶ ನೀಡದಂತೆ ಟಾಟಾ ಮೋಟಾರ್ಸ್ ಸರ್ಕಾರವನ್ನು ಲಾಬಿ ಮಾಡುತ್ತಿದೆ ಎಂದು ರಾಯಿಟರ್ಸ್ ಕಳೆದ ವಾರ ವರದಿ ಮಾಡಿತ್ತು. ಟೆಸ್ಲಾಗೆ ಭಾರತ ಬೇಕೇ ಅಥವಾ ಭಾರತಕ್ಕೆ ಟೆಸ್ಲಾದ ಅಗತ್ಯವಿದೆಯೇ? ಅಥವಾ ಯಾವುದೇ ಸಂಪರ್ಕವಿಲ್ಲದೆ ಇಬ್ಬರಿಗೂ ಎಂದಿನಂತೆ ವ್ಯವಹಾರ ಮಾಡಬಹುದೇ? ನಿಜಕ್ಕೆ ಭಾರತದಿಂದಲೇ ಟೆಸ್ಲಾ ಕಾರುಗಳ ಉತ್ಪಾದನೆಯಾದರೆ ಭಾರಿ ಲಾಭವನ್ನು ಪಡಿಯಬಹುದು.
ನಿಜಕ್ಕೆ ಟೆಸ್ಲಾ ತನ್ನ ಹತ್ತಿರದ ಪ್ರತಿಸ್ಪರ್ಧಿಗಳಿಗಿಂತ ದ್ವಿಗುಣವಾದ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲು ನೋಡುತ್ತಿದೆ. ಚೀನಾ ಮತ್ತು ಅಮೆರಿಕಾ ಅದರ ದೊಡ್ಡ ಮಾರುಕಟ್ಟೆಗಳಾಗಿವೆ. ಎರಡೂ ದೇಶಗಳು ವಾಹನ ಮಾರಾಟದಲ್ಲಿ ಜಾಗತಿಕ ನಾಯಕರು. ಆದರೆ ಮೂರನೇ ಸ್ಥಾನದಲ್ಲಿರುವ ಭಾರತವು ಅನೇಕ ಆಟೋಮೋಟಿವ್ ಬ್ರಾಂಡ್‌ಗಳಿಗೆ ಚಿನ್ನದ ಗಣಿಯಾಗಿದೆ.

ಕಳೆದ ತಿಂಗಳಷ್ಟೇ, ಟೆಸ್ಲಾ ಮತ್ತು ಭಾರತದ ಸರ್ಕಾರಿ ಅಧಿಕಾರಿಗಳು 2024 ರಲ್ಲಿ ದೇಶಕ್ಕೆ EV ಗಳನ್ನು ತರುವ ಅಂಚಿನಲ್ಲಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್, ಟೆಸ್ಲಾ ಮಾದರಿಗಳನ್ನು ಗ್ರಾಹಕರಿಗೆ ನೀಡುವ ಮೊದಲು ಆಮದು ಸುಂಕವನ್ನು ಕಡಿತಗೊಳಿಸಬೇಕೆಂದು ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದಾರೆ.
ಇಲ್ಲಿ ಆಮದು ಸುಂಕದ ದರವು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದಷ್ಟು ಅತ್ಯಧಿಕವಿದೆ, 40,000 ಡಾಲರ್‌ಗಿಂತ ಹೆಚ್ಚಿನ ಬೆಲೆಯ ಆಮದು ಮಾಡಿದ EV ಗಳ ಮೇಲೆ ಶೇ100 ರಷ್ಟಿದೆ. ಅಲ್ಲಿಗೆ ಕಾರಿನ ಬೆಲೆ ದ್ವಿಗುಣವಾಗುತ್ತದೆ, ಕಂಪನಿಯು ಸ್ಥಳೀಯವಾಗಿ ಉತ್ಪಾದನೆಗೆ ಬದ್ಧವಾಗಿದ್ದರೆ ಭಾರತ ಸರ್ಕಾರ ಈ ಸುಂಕವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಲು ಸಿದ್ಧವಿರುವುದಾಗಿ ಈ ಹಿಂದೆ ವರದಿಗಳಾಗಿದ್ದವು.

ಆದರೆ ಟೆಸ್ಲಾ ಈಗಾಗಲೇ ಚಿನಾದಲ್ಲಿ ತನ್ನ ಬೃಹತ್ ಉತ್ಪಾದನಾ ಸ್ಥಾವರವನ್ನು ಹೊಂದಿದ್ದು, ಅಲ್ಲಿಂದ ಆಮದು ಮಾಡಿ ಭಾರತದಲ್ಲಿ ಮಾರಾಟ ಮಾಡುವ ಯೋಚನೆ ಕೂಡ ಇದೆ. ಆದರೆ ಭಾರತ ಸರ್ಕಾರ ಆಮದು ಸುಂಕದಲ್ಲಿ ಯಾವುದೇ ರಾಜಿಯಿಲ್ಲ ಎಂದು ಖಡಕ್ ಆಗಿ ಹೇಳಿಬಿಟ್ಟಿದೆ. ಇದರಿಂದ ಟೆಸ್ಲಾ ಭಾರತಕ್ಕೆ ಬರುವ ತೀರಾ ಕಡಿಮೆ ಎಂದು ಹೇಳಬಹುದು.


Click it and Unblock the Notifications








