Xiaomi ಮೊದಲ ಎಲೆಕ್ಟ್ರಿಕ್ ಕಾರು: ಒಂದೇ ಚಾರ್ಜ್‌ನಲ್ಲಿ 1000 ಕಿಮೀ ಓಡಲಿದೆ.. ಚಿತ್ರಗಳು ಸೋರಿಕೆ

ಚೀನಾದ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಶಿಯೋಮಿ (Xiaomi), ತನ್ನ ವಿವಿಧ ಉತ್ಪನ್ನಗಳ ಮೂಲಕ ಅಬ್ಬರಿಸುತ್ತಿದ್ದು, ವಾಹನ ಮಾರುಕಟ್ಟೆಗೂ ಕಾಲಿಡಲು ಸಿದ್ಧವಾಗಿದೆ. ಶೀಘ್ರದಲ್ಲೇ ತನ್ನ Xiaomi ms11 ಎಲೆಕ್ಟ್ರಿಕ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಅದಕ್ಕೂ ಮೊದಲೇ ಈ ಕಾರಿನ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಶಿಯೋಮಿ ಸ್ಮಾರ್ಟ್‌ಫೋನ್‌ ಸೇರಿದಂತೆ ಕಡಿಮೆ ಬೆಲೆಯ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಿಂದ ವಿಶ್ವಾದ್ಯಂತ ಖ್ಯಾತಿಗಳಿಸಿದೆ. ಸದ್ಯ ಸ್ಮಾರ್ಟ್ ವಾಚ್, ಏರ್ ಪ್ಯೂರಿಫೈಯರ್, ಎಲ್‌ಇಡಿ ಟಿವಿ, ಪ್ರೊಜೆಕ್ಟರ್, ವ್ಯಾಕ್ಯೂಮ್ ಕ್ಲೀನರ್, ಬ್ಲೂಟೂತ್ ಸ್ಪೀಕರ್, ಇಂಟರ್ನೆಟ್ ರೂಟರ್, ಇಯರ್‌ಫೋನ್, ಇಯರ್‌ಬಡ್ಸ್, ಎಲ್‌ಇಡಿ ಲೈಟ್ ಒಳಗೊಂಡಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು 'Xiaomi ms11' ಸೆಡಾನ್ ರೂಪದಲ್ಲಿ ಗ್ರಾಹಕರಿಗೆ ಖರೀದಿಗೆ ನೀಡಲು ಮುಂದಾಗಿದೆ.

Xiaomi ಮೊದಲ ಎಲೆಕ್ಟ್ರಿಕ್ ಕಾರು: ಫುಲ್ ಚಾರ್ಜ್‌ನಲ್ಲಿ 1000 KM ಓಡಲಿದೆ.. ಫೋಟೋ ಲೀಕ್

ಆದರೆ, Xiaomi ಕಂಪನಿಯು ಅಧಿಕೃತವಾಗಿ ಈ ಕಾರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರದರ್ಶಿಸುವ ಮೊದಲೇ ಪೋಟೋಗಳು ಲೀಕ್ ಆಗಿದ್ದು, ಎಲ್ಲೆಡೆ ಹರಿದಾಡುತ್ತಿವೆ. ಕೆಲವೇ ದಿನಗಳ ಹಿಂದೆ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾದ BYD 'ಸೀಲ್' ಎಲೆಕ್ಟ್ರಿಕ್ ಸೆಡಾನ್‌ ವಿನ್ಯಾಸವನ್ನೇ ಈ Xiaomi ms11 ಕಾರು ಸಹ ಹೋಲುತ್ತದೆ. ಅಲ್ಲದೆ, ಸಂಪೂರ್ಣ ಚಾರ್ಜ್‌ನಲ್ಲಿ 1000 KM ರೇಂಜ್ ನೀಡುವ ಬ್ಯಾಟರಿ ಪ್ಯಾಕ್ ಹೊಂದಿರುವಂತೆ ಈ ಸೆಡಾನ್‌ ಅನ್ನು ತಯಾರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಸೋರಿಕೆಯಾಗಿರುವ ಫೋಟೋಗಳ ಪ್ರಕಾರ, Xiaomi ms11 ಕಾರಿನ ವಿನ್ಯಾಸವನ್ನು ನೋಡವುದಾದರೆ, ಇದು ನಾಲ್ಕು-ಡೋರ್ ಒಳಗೊಂಡ ಎಲೆಕ್ಟ್ರಿಕ್ ಸೆಡಾನ್‌ ಆಗಿದ್ದು, ಫ್ರಂಟ್ ಎಲ್ಇಡಿ ಲೈಟ್ಸ್ ಹೊಂದಿದೆ. McLaren 720S ಕಾರಿನಂತೆ ಆಕರ್ಷಕವಾಗಿ ಕಾಣಿಸಲಿದ್ದು, ದೊಡ್ಡದಾದ ವಿಂಡ್‌ಶೀಲ್ಡ್‌ ಹಾಗೂ ಸೈಡ್ ಗ್ಲಾಸ್ ಜೊತೆಗೆ ಹಿಂಭಾಗದವರೆಗೆ ವಿಸ್ತರಿಕೊಂಡಿರುವ ಸನ್‌ರೂಫ್ ಅನ್ನು ಪಡೆದುಕೊಂಡಿದೆ. ವೀಲ್ಸ್ ಮಧ್ಯದಲ್ಲಿ 'Xiaomi' ಲೋಗೋ ಇದ್ದು, ವಿಂಡ್‌ಶೀಲ್ಡ್‌ ಮೇಲೆ LiDAR ಸೇನಾರ್ಸ್ ಒಳಗೊಂಡಿದ್ದು, ಟೈಲ್‌ಲೈಟ್‌ ಡಿಸೈನ್ ಕೂಡ ಅತ್ಯುನ್ನತವಾಗಿದೆ ಎಂದು ಹೇಳಬಹುದು.

ಕ್ಯಾಬಿನ್ ಒಳಭಾಗ ಯಾವೆಲ್ಲ ವಿಶೇಷತೆಗಳನ್ನು ಪಡೆದಿದೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಕಾರಿನ ತಯಾರಿಕೆ ಸದ್ಯ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದ್ದು, ಇದರ ಉತ್ಪಾದನೆಯು 2024ರಲ್ಲಿ ಪ್ರಾರಂಭವಾಗಬಹುದು. ಚೀನಾದ ರಸ್ತೆಯಲ್ಲಿ ಈ ಕಾರನ್ನು ಹಲವು ಬಾರಿ ಪರೀಕ್ಷೆ ನಡೆಸಲಾಗಿದೆ. ವಿಶೇಷವಾಗಿ Xiaomi ಕಂಪನಿಯು ತಾನೇ ತಯಾರಿಸಿರುವ ಎಲೆಕ್ಟ್ರಿಕ್ ಮೋಟರ್ ಅನ್ನು ಈ ಕಾರಿನಲ್ಲಿ ಬಳಕೆ ಮಾಡಿದೆ. ಇದರ ಬ್ಯಾಟರಿಯನ್ನು CATL ಮತ್ತು BYD ಕಂಪನಿಗಳು ಅಭಿವೃದ್ಧಿಪಡಿಸಿವೆ. ಗ್ರಾಹಕರ ಕೈಗೆಟುಕುವ ಬೆಲೆಗೆ ಖರೀದಿಗೆ ದೊರೆಯಬಹುದು.

2021ರ ಮಾರ್ಚ್ ತಿಂಗಳಲ್ಲಿ Xiaomi ಆಟೋಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಘೋಷಣೆ ಮಾಡಿತ್ತು. ಅಲ್ಲದೆ, ಹತ್ತು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿರುವುದಾಗಿ ತಿಳಿಸಿತ್ತು. ಈಗಾಗಲೇ ಕಂಪನಿಯ ಎಲೆಕ್ಟ್ರಿಕ್ ಇ-ಬೈಕ್‌ಗಳು ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಕಂಪನಿಯು ಎಲೆಕ್ಟ್ರಿಕ್ ಕಾರಿನ ತಯಾರಿಕೆಯಲ್ಲಿ ತೊಡಗಿದೆ. 2024ರ ಮೊದಲಾರ್ಧದ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಕಾರುಗಳನ್ನು ಉತ್ಪಾದಿಸಲು ಸಿದ್ಧತೆ ನಡೆಸುತ್ತಿದೆ.

ಮುಂಬರುವ ಕಾರಿನ ಫೋಟೋಗಳು ಸೋರಿಕೆಯಾದ ನಂತರ, ಪೂರೈಕೆದಾರರ ಕಂಪನಿಗೆ 1 ಮಿಲಿಯನ್ ಯುವಾನ್ (149,000 ಡಾಲರ್) ದಂಡವನ್ನು ವಿಧಿಸಿಸಲಾಗಿದೆ ಎಂದು Xiaomi ಗುರುವಾರ ಹೇಳಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ Xiaomi ಮಾತ್ರವಲ್ಲದೆ, ಇತರೆ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳಾದ ಲೆನೋವಾ, ಆಪಲ್, Huawei, ಗೂಗಲ್ ಮತ್ತು ಸೋನಿ ಕೂಡ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಬಹದು.

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಲು Xiaomi ಸಜ್ಜಾಗುತ್ತಿದ್ದು, ಸೋರಿಕೆಯಾಗಿರುವ ಚಿತ್ರಗಳಲ್ಲಿ ಈ ಕಾರು ನೋಡಲು ಆಕರ್ಷಕವಾಗಿ ಕಾಣಿಸುತ್ತಿದ್ದು, ಮುಂದಿನ ವರ್ಷದೊಳಗೆ ಖರೀದಿಗೆ ಸಿಗಬಹುದು. ಭಾರತದ ಮಾರುಕಟ್ಟೆಗೆ ಯಾವಾಗ ಬರಲಿದೆ, ಬೆಲೆ, ಎಷ್ಟಿರಲಿದೆ ಎಂಬುದರ ಬಗ್ಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಮಾಹಿತಿ ತಿಳಿಯಲಿದೆ. ಈ ಕಾರು ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು, ಜೊತೆಗೆ ಹೆಚ್ಚಿನ ರೇಂಜ್ ನೀಡುವ ಸಾಮರ್ಥ್ಯ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು.

Most Read Articles

Kannada
English summary
Xiaomi first electric car will run 1000 km full charge photo leak details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X