ಮಾರುತಿ ಆಲ್ಟೊದಲ್ಲಿ ADAS ಸಿಸ್ಟಮ್: ಕೇವಲ ಫೋನ್ ಸಾಕು: ಸೆಲ್ಫ್ ಡ್ರೈವಿಂಗ್ ವೀಡಿಯೊ ಹಂಚಿಕೊಂಡ ಮಾಲೀಕ!
ದುಬಾರಿ ಬೆಲೆಯ ಕಾರುಗಳಲ್ಲಿ ಮಾತ್ರ ನಾವು ವಿಶ್ವಾಸಾರ್ಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್) ಅನ್ನು ನಾವು ಪಡೆಯಬಹುದು. ಆದ್ರೆ ಇಲ್ಲಿ ನಾವು ನಿಮಗೆ ಹೇಳುವ ವಿಚಾರ ಆಶ್ಚರ್ಯಕ್ಕೆ ಗುರಿ ಮಾಡಬಹುದು. ಕೇವಲ ಸ್ಮಾರ್ಟ್‌ಫೋನ್ ಸಹಾಯದಿಂದ ಮಾರುತಿ ಆಲ್ಟೊದಂತಹ ಕಾರಿನಲ್ಲೂ ಈ ADAS ಬಳಸಬಹುದೇ?
ಹೌದು.. ಬಳಸಬಹುದು ಎಂದು ಈತ ತೋರಿಸಿಕೊಟ್ಟಿದ್ದಾರೆ. Redmi Note 9 Pro ಸ್ಮಾರ್ಟ್‌ಫೋನ್‌ನ ಕ್ಯಾಮೆರಾ, ಕಾರಿನ ಸಿಸ್ಟಮ್‌ಗೆ ಕಣ್ಣುಗಳಾಗಿ ಕಾರ್ಯನಿರ್ವಹಿಸಿ ಅದಕ್ಕೆ ಅನುಗುಣವಾಗಿ ಸ್ಟೀರಿಂಗ್ ತನ್ನಷ್ಟಕ್ಕೆ ತಾನೇ ನಿಯಂತ್ರಿಸುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ADAS ತಂತ್ರಜ್ಞಾನಕ್ಕಾಗಿ ಸಾವಿರಾರು ಕೋಟಿ ವೆಚ್ಚಿಸುವ ದೊಡ್ಡ ದೊಡ್ಡ ವಾಹನ ತಯಾರಕ ಕಂಪನಿಗಳಿಗೆ ಪ್ರಸ್ತುತ ಇದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಂತೆ ತೋರುತ್ತಿದೆ.

X (ಟ್ವಿಟ್ಟರ್) ಬಳಕೆದಾರರಾದ ಮಂಕರನ್ ಎಂಬುವರು ಈ ಕುರಿತ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ವಾಯತ್ತ ಚಾಲನೆಯು (Autonomous driving) ತುಂಬಾ ಅಡ್ವಾನ್ಸ್ ಟೆಕ್ನಾಲಜಿಯನ್ನು ಹೊಂದಿರುತ್ತದೆ. ಸಾವಿರಾರು ರಸ್ತೆ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಕಾರು ತನ್ನಷ್ಟಕ್ಕೆ ತಾನು ನಿಯಂತ್ರಣಗೊಳ್ಳಲು ಅಪಾರ ಸಂಶೋಧನೆ ಮತ್ತು ಅಭಿವೃದ್ಧಿಯ ಅಗತ್ಯವಿದೆ. ಆದರೂ ಇದನ್ನು ಸಂಪೂರ್ಣವಾಗಿ ನಂಬಲು ಅಸಾಧ್ಯ.
ಏಕೆಂದರೆ ಸ್ವಾಯತ್ತ ಚಾಲನೆ (Autonomous driving) ಎಂಬುದು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎರಡರ ಸಂಯೋಜನೆಯಾಗಿದೆ. ಇದಕ್ಕಾಗಿ ದೊಡ್ಡ ಬ್ರಾಂಡ್‌ಗಳು ಸಾವಿರಾರು ಕೋಟಿ ವೆಚ್ಚಿಸಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕೈಜೋಡಿಸಬೇಕಾಗುತ್ತದೆ. ಇಷ್ಟೆಲ್ಲಾ ಕಠಿಣತೆಗಳ ನಡುವೆ ಆಲ್ಟೊ ಕೆ10 ನಲ್ಲಿ ಅಷ್ಟು ಸುಲಭವಾಗಿ ADAS ತಂದಿರುವುದು ಹೇಗೆ?

ವಿಡಿಯೋವನ್ನು ಹಂಚಿಕೊಂಡಿರುವ ಮಂಕರನ್ ಅವರು ಫ್ಲೋಡ್ರೈವ್‌ನ ಸಂಸ್ಥಾಪಕರಾಗಿದ್ದಾರೆ, ಈ ಫ್ಲೋಡ್ರೈವ್ ಓಪನ್ ಸೋರ್ಸ್ 'ಓಪನ್‌ಪೈಲಟ್' ಸ್ವಯಂ-ಚಾಲನಾ ಅಲ್ಗಾರಿದಮ್ ಅನ್ನು ಆಧರಿಸಿದ ಸಾಫ್ಟ್‌ವೇರ್ ಆಗಿದೆ. Redmi Note 9 Pro ಫೋನ್‌ನಲ್ಲಿ ಸ್ಥಾಪಿಸಲಾದ ಈ FlowDrive ಸಾಫ್ಟ್‌ವೇರ್ ಕಾರಿನ OBD ಪೋರ್ಟ್ ಮೂಲಕ Alto K10 ಗೆ ಸಂಪರ್ಕ ಹೊಂದಿದೆ.
ಆಲ್ಟೊ ಕಾರು ಎಲೆಕ್ಟ್ರಿಕಲ್ ಅಸಿಸ್ಟೆಡ್ ಸ್ಟೀರಿಂಗ್ ಅನ್ನು ಹೊಂದಿದೆ. ಫ್ಲೋಡ್ರೈವ್‌ನ ಸೂಚನೆಗಳ ಪ್ರಕಾರ ವರ್ತಿಸುವಂತೆ ಮೋಟರ್ ಅನ್ನು ಡಿಸೈನ್ ಮಾಡಲಾಗಿದೆ. ಫೋನ್‌ನಲ್ಲಿರುವ ಕ್ಯಾಮೆರಾಗಳು ಈ ಸಾಫ್ಟ್‌ವೇರ್‌ಗೆ ಕಣ್ಣುಗಳಾಗಿ ಕಾರ್ಯನಿರ್ವಹಿಸುತ್ತವೆ. ಆಲ್ಟೊದಲ್ಲಿ ಯಾವುದೇ ರೀತಿಯ ಅಸಿಸ್ಟೆಡ್ ಥ್ರೊಟಲ್ ಮಾಡ್ಯುಲೇಷನ್ ಇಲ್ಲದಿರುವ ಕಾರಣ ಪೆಡಲ್‌ಗಳನ್ನು ಮಾತ್ರ ಡ್ರೈವರ್ ನಿಯಂತ್ರಿಸಬೇಕಾಗುತ್ತದೆ.

X ಬಳಕೆದಾರ ಮಂಕರನ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, 4-ಲೇನ್ ಹೆದ್ದಾರಿಯಲ್ಲಿ ಟ್ರಾಫಿಕ್ ದಟ್ಟಣೆಯಲ್ಲಿ Alto K10 ಸ್ವತಃ ಸ್ಟೀರಿಂಗ್ ನಿಯಂತ್ರಣಗೊಳ್ಳುವುದನ್ನು ನಾವು ನೋಡಬಹುದು. ಈ ಸಾಫ್ಟ್‌ವೇರ್‌ನಿಂದ ಕಾರು ಲೇನ್‌ಗಳನ್ನು ಅನುಸರಿಸುತ್ತಾ ಎಷ್ಟು ಸ್ಪಷ್ಟ ಚಾಲನೆಯಲ್ಲಿದೆ ಅಂದರೆ ಡ್ರೈವರ್ ಪ್ರಮೆಯವಿಲ್ಲದೆ ಇತರ ಯಾವುದೇ ವಾಹನಗಳಿಗೆ ಡಿಕ್ಕಿಯೇ ಹೊಡೆದಿಲ್ಲ.
ಆದರೆ ಇದು ಅಷ್ಟು ಸುರಕ್ಷಿತವೇ? ಭಾರತದಲ್ಲಿನ ರಸ್ತೆಗಳಲ್ಲಿ ನಿಯಮಗಳನ್ನು ಪಾಲಿಸುವವರಿಗಿಂತ ಉಲ್ಲಂಘಿಸುವವರೇ ಹಚ್ಚು. ಸಾವಿರಾರು ಅನಿರೀಕ್ಷಿತ ವಾಹನಗಳನ್ನು ಧಿಡೀರನೆ ಎದುರಿಸಬೇಕಾಗುತ್ತದೆ. ಇನ್ನು ವಿಡಿಯೋದಲ್ಲಿ ನೋಡುವ Alto K10 ಬಗ್ಗೆ ಹೇಳುವುದಾದ್ರೆ, ವಾಹನ ಚಾಲಕನಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರಯಾಣಿಕರಿಗೂ ಇದು ಅತ್ಯಂತ ಅಪಾಯಕಾರಿಯಾಗಿದೆ ಎಂಬದು ಕೂಡ ನಿಜ.
ಆಟೋ ಉದ್ಯಮದಲ್ಲಿ ಹೊಸ ವಾಹನಗಳನ್ನು ಬಿಡುಗಡೆ ಮಾಡುವ ಮೊದಲು ಸಾರ್ವಜನಿಕ ರಸ್ತೆಗಳಲ್ಲಿ ಅದನ್ನು ಪರೀಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಅಧಿಕಾರಿಗಳಿಂದ ಅಗತ್ಯ ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಗಳಲ್ಲಿ ಮೂಲಮಾದರಿಯ ತಂತ್ರಜ್ಞಾನಗಳನ್ನು ಪರೀಕ್ಷಿಸುವುದು ಕಾನೂನುಬಾಹಿರ. ಆದರೆ ಇದ್ಯಾವುದನ್ನು ಲೆಕ್ಕಿಸದೆ ಅಪಾಯಕಾರಿ ತಂತ್ರಜ್ಞಾನವನ್ನು ಒಳಗೊಂಡ ಕಾರನ್ನು ಪರೀಕ್ಷಿಸಲಾಗಿದೆ.
ಸದ್ಯ ಭಾರತ ಸರ್ಕಾರವು ಯಾವುದೇ ರೀತಿಯ ಸ್ವಾಯತ್ತ ಚಾಲನೆಯ (Autonomous driving) ಬಗ್ಗೆ ಕಾರು ತಯಾರಕರಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಇದು ಚಾಲಕರ ಉದ್ಯೋಗದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗುತ್ತದೆ. ಮಾನವ ಸಂಪನ್ಮೂಲದಿಂದ ಸಮೃದ್ಧವಾಗಿರುವ ದೇಶಕ್ಕೆ ಇದು ಒಳ್ಳೆಯ ತಂತ್ರಜ್ಞಾನವಲ್ಲ ಎಂಬುದು ಹಲವರ ಅಭಿಪ್ರಾಯ ಕೂಡ ಹೌದು.


Click it and Unblock the Notifications








