ಕಡಿಮೆ ಬೆಲೆಗೆ ಬರಲಿವೆ ಮಾರುತಿ, ರೆನಾಲ್ಟ್, ನಿಸ್ಸಾನ್ ಎಂಪಿವಿಗಳು: ಕುಟುಂಬದ ನೆಚ್ಚಿನ ಕಾರುಗಳಾಗಲಿವೆ!
ಭಾರತದ ಎಂಪಿವಿ (ಮಲ್ಟಿ ಪರ್ಪಸ್ ವೆಹಿಕಲ್) ಮಾರುಕಟ್ಟೆಯಲ್ಲಿ ಟೊಯೊಟಾ (Toyota) ಕಂಪನಿಯು ಇನ್ನೋವಾ (Innova) ಕಾರುಗಳನ್ನು ಮಾರಾಟಗೊಳಿಸುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈಗ, ಎಂಪಿವಿ ವಿಭಾಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಮಾರುತಿ ಸುಜುಕಿ, ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಪ್ರಯತ್ನಿಸುತ್ತಿವೆ.
ಕೆಲವೇ ದಿನಗಳಲ್ಲಿ ಈ ಮೂರು ಕಂಪನಿಗಳ ಜಬರ್ದಸ್ತ್ ಎಂಪಿವಿಗಳು ಬಿಡುಗಡೆಯಾಗಲಿವೆ. ಮೊದಲಿಗೆ, ಬಹುತೇಕ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ಮಾರಾಟ ಮಾಡಲು ತಯಾರಿಸುತ್ತಿರುವ ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಎಂಪಿವಿ ಬಗ್ಗೆ ತಿಳಿಯೋಣ. ಕಂಪನಿಯು ವೈಡಿಬಿ (YDB) ಕೋಡ್ ನೇಮ್ ಹೊಂದಿರುವ ಸಣ್ಣ ಎಂಪಿವಿಯೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಜಪಾನ್‌ನಲ್ಲಿ ಖರೀದಿಗೆ ದೊರೆಯುವ ಸುಜುಕಿ ಸ್ಪೇಸಿಯಾ (Suzuki Spacia)ಗೆ ಹೋಲುತ್ತದೆ.

ನೂತನ ಮಾರುತಿ ಸುಜುಕಿ 'ವೈಡಿಬಿ' ಎಂಪಿವಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಇದರ ಕಾರ್ಯಕ್ಷಮತೆ, ವೈಶಿಷ್ಟ್ಯ, ವಿನ್ಯಾಸದ ಬಗ್ಗೆ ಸದ್ಯಕ್ಕೆ ಯಾವುದೇ ವಿವರಗಳಿಲ್ಲ. ಆದರೆ, ಮುಂಬರಲಿರುವ ಸ್ವಿಫ್ಟ್ (Swift) ಕಾರು ಹೊಂದಿರುವಂತೆ 1.2-ಲೀಟರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಪಡೆದಿರಬಹುದು ಎಂದು ತಿಳಿದುಬಂದಿದೆ.
ರೆನಾಲ್ಟ್ (Renault) ಕಂಪನಿ ಸಹ ಎಂಪಿವಿ ವಿಭಾಗದಲ್ಲಿ ಪಾರುಪತ್ಯ ಮೆರೆಯಲು ಮುಂದಾಗಿದೆ. ಅದಕ್ಕಾಗಿ ಹೊಸ ತಲೆಮಾರಿನ (Next-gen) ಸಬ್-4 ಮೀಟರ್ ಟ್ರೈಬರ್ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ಕಾರು ವಿನ್ಯಾಸ ಮತ್ತು ವೈಶಿಷ್ಟ್ಯದಲ್ಲಿ ಒಂದಷ್ಟು ಬದಲಾವಣೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹೊಸ ಎಂಪಿವಿ, 1.0-ಲೀಟರ್ ಟರ್ಬೊ ಪೆಟ್ರೋಲ್, 1.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ.

ಸದ್ಯ, ಭಾರತದಲ್ಲಿ ಖರೀದಿಗೆ ದೊರೆಯುವ ರೆನಾಲ್ಟ್ ಟ್ರೈಬರ್ (Renault Triber), ರೂ.6.33 ಲಕ್ಷದಿಂದ ರೂ.8.97 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಕಾರು, 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದೆ.
ದೇಶದಲ್ಲಿ ನಿಸ್ಸಾನ್ (Nissan) ಏಕೈಕ ಮ್ಯಾಗ್ನೈಟ್ (Magnite) ಎಸ್‌ಯುವಿಯನ್ನು ಮಾರಾಟಗೊಳಿಸುತ್ತಿದ್ದು, ಅದಕ್ಕಿಂತ ಕಡಿಮೆ ಬೆಲೆಗೆ ಹೊಚ್ಚ ಹೊಸ ಸಬ್ 4-ಮೀಟರ್ ಎಂಪಿವಿಯನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ನಿಸ್ಸಾನ್ ಕಂಪನಿಯಿಂದ ಮುಂಬರುವ ಹೊಸ ಎಂಪಿವಿಯ ವೈಶಿಷ್ಟ್ಯ ಮತ್ತು ವಿನ್ಯಾಸದ ಕುರಿತು ಯಾವುದೇ ವಿವರಗಳಿಲ್ಲ. ಮುಂಬರುವ ದಿನಗಳಲ್ಲಿ ಅದು ತಿಳಿಯಬಹುದು.

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ, ರೂ.6 ಲಕ್ಷದಿಂದ ರೂ.11.02 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಈ ಕಾರು, 1-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 17.40 kmpl - 20 kmpl ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








