MG Motor: ಸ್ವದೇಶಿ ಕಂಪನಿಗಳಿಗೇ ಸಾಧ್ಯವಾಗಲಿಲ್ಲ... ಭಾರತದಲ್ಲಿ ಚೀನಾ ಕಾರು ಹೊಸ ದಾಖಲೆ!
MG Motor: ಭಾರತದಲ್ಲಿ ಒಂದೆರಡು ಕಾರು ತಯಾರಕ ಕಂಪನಿಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ಇಂಧನ ಚಾಲಿತ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಸಹ ಮಾರಾಟ ಮಾಡುತ್ತಿವೆ. ಪ್ರತಿ ತಿಂಗಳ ಮಾರಾಟದಲ್ಲಿ ಎಲ್ಲಾ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳಿಗಿಂತ ಹೆಚ್ಚಾಗಿ ಇಂಧನ ಚಾಲಿತ ಕಾರುಗಳ ಮಾರಾಟವನ್ನು ಕಾಣುತ್ತವೆ. ಎಲೆಕ್ಟ್ರಿಕ್ ಕಾರುಗಳು ಇಂಧನ ಚಾಲಿತ ವಾಹನಗಳನ್ನು ಮಾರಾಟದಲ್ಲಿ ಈವರೆಗೆ ಹಿಂದಿಕ್ಕಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದ್ರೆ ಇದೀಗ ಪ್ರಮುಖ ಕಾರು ತಯಾರಕ ಕಂಪನಿಯು ಈ ದಾಖಲೆಯನ್ನು ಮುರಿದಿದೆ. ತನ್ನ ಪೆಟ್ರೋಲ್ ಕಾರುಗಳಿಗಿಂತ ಹೆಚ್ಚಾಗಿ ಇವಿ ಕಾರುಗಳನ್ನು ಮಾರಾಟ ಮಾಡಿದೆ.
ಎಂಜಿ ಮೋಟಾರ್ ಭಾರತದಲ್ಲಿ ಐಸಿಇ (ಇಂಧನ ಚಾಲಿತ) ವಾಹನಗಳಿಗಿಂತ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಸಾಧಿಸಿದ ಭಾರತದ ಮೊದಲ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯು ಇತ್ತೀಚೆಗೆ ಅಕ್ಟೋಬರ್ ತಿಂಗಳಲ್ಲಿ ಒಟ್ಟು 7,045 ವಾಹನಗಳನ್ನು ಮಾರಾಟ ಮಾಡಿದ್ದು, ಇದರಲ್ಲಿ ಶೇ.70ರಷ್ಟು ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 5,108 ಕಾರುಗಳು ಮಾರಾಟವಾಗಿದ್ದವು.

ಈ ಮೂಲಕ ವಾರ್ಷಿಕವಾಗಿ ಶೇ37.92 ರಷ್ಟು ಬೆಳವಣಿಗೆ ಸಾಧಿಸಿದೆ. ಎಂಜಿ ಮೋಟಾರ್ಸ್ 2019 ರಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ್ದು, ಈ ವರೆಗೆ ಇಷ್ಟು ದೊಡ್ಡ ಮಾರಾಟವನ್ನು ಕಂಡಿರಲಿಲ್ಲ. ಅಲ್ಲದೇ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ 4,588 ಕಾರುಗಳು ಮಾರಾಟವಾಗಿವೆ. ಅಂದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ 2,457 ವಾಹನಗಳ ಹೆಚ್ಚಿನ ಮಾರಾಟವಾಗಿದೆ. ಈ ಮೂಲಕ ತಿಂಗಳಿಗೆ 53.55 ರಷ್ಟು ಬೆಳವಣಿಗೆ ಸಾಧಿಸಿದೆ.
ಇದು ಹೇಗೆ ಸಾಧ್ಯವಾಯಿತು?: ಮೊದಲನೆಯದು, ವಿಂಡ್ಸರ್ ಇವಿ ಬಿಡುಗಡೆ ಕಂಪನಿಗೆ ದೊಡ್ಡ ವರದಾನವಾಗಿದೆ. ಈ ಕಾರು ಇತ್ತೀಚೆಗೆ ಬಿಡುಗಡೆಯಾಗಿದ್ದು, ಐಷಾರಾಮಿ ಫೀಚರ್‌ಗಳೊಂದಿಗೆ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ಹೆಚ್ಚು ಆಕರ್ಷಿಸಿದೆ. ಈ ಕಾರಿನ ಬಿಡುಗಡೆಗೂ ಮುನ್ನ ಎಂಜಿ ಮೋಟಾರ್ ಕೇವಲ ಎಂಜಿ ಝಡ್ಎಸ್ ಇವಿ ಮತ್ತು ಕಾಮೆಟ್ ಇವಿ ಎಂಬ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು.

ಈ ಎರಡೂ ವಾಹನಗಳಿಗೆ ಅಷ್ಟೇನು ಬೇಡಿಕೆ ಇರಲಿಲ್ಲ, ನಂತರ ಬಂದ ಎಂಜಿ ವಿಂಡ್ಸರ್ ಇವಿ ಸಾಕಷ್ಟು ವೈಶಿಷ್ಟ್ಯಗಳಿಂದ ತುಂಬಿದ ವಾಹನವಾಗಿದ್ದು, ವಿಶಾಲವಾದ ಕ್ಯಾಬಿನ್ ಮತ್ತು ಉತ್ತಮ ಇವಿ ಡ್ರೈವ್ ಟ್ರೇನ್ ಅನ್ನು ನೀಡುತ್ತದೆ. ಅಲ್ಲದೇ ದೀಪಾವಳಿ ಹಬ್ಬದ ಮುಂಚಿತವಾಗಿ ವಿಂಡ್ಸರ್ ಇವಿ ಬಿಡುಗಡೆಯು ಈ ಪ್ರಭಾವಶಾಲಿ ಮಾರಾಟದ ಅಂಕಿಅಂಶವನ್ನು ತರಲು ಕಂಪನಿಗೆ ಸಹಾಯ ಮಾಡಿದೆ.
ಕಾರಿನ ವಿಶೇಷತೆಗಳು: ಹೊಸ ಎಂಜಿ ವಿಂಡ್ಸರ್ ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು ರೂ.9.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. 38 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 134 ಬಿಹೆಚ್‍ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 200 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಂಪೂರ್ಣ ಚಾರ್ಜ್‌ನಲ್ಲಿ 331 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್, 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾ, ಸುರಕ್ಷತೆಯ ಸಲುವಾಗಿ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹೊಂದಿದೆ. ಆದಾಗ್ಯೂ, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ರಕ್ಷಣಾತ್ಮಕ ವೈಶಿಷ್ಟ್ಯವನ್ನು ಪಡೆದಿಲ್ಲ.


Click it and Unblock the Notifications








