ನಿಮ್ಮ ಬಳಿ ಈ ವಾಹನಗಳಿದ್ರೆ ಎಚ್ಚರ: ಅತಿ ಹೆಚ್ಚು ಕಳ್ಳತನವಾಗುವ ಕಾರು, ಬೈಕ್‌ಗಳು
ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಬಹುತೇಕ ದೇಶಗಳಲ್ಲಿ ಕಾರು ಕಳ್ಳತನ ದೊಡ್ಡ ತಲೆನೋವಾಗಿದೆ. ಕಾರನ್ನು ಭದ್ರಪಡಿಸಲು ಮಾಲೀಕರು ಎಷ್ಟೇ ಪ್ರಯತ್ನಿಸಿದರೂ ಕಳ್ಳರು ಅದನ್ನು ಕದಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬುದು ದುರಂತ. ಅವರು ಸುಲಭವಾಗಿ ಕಳ್ಳತನ ಮಾಡುವ ತಂತ್ರವನ್ನು ಕಲಿತು ಪರಿಣತರಾಗಿರುತ್ತಾರೆ.
ನಮ್ಮ ದೇಶದಲ್ಲಿ ವಾಹನಗಳಿಲ್ಲದ ಮನೆಗಳು ಕಡಿಮೆ ಎಂದೇ ಹೇಳಬಹುದು. ಯಾವುದೇ ಆಧುನಿಕ ಭದ್ರತಾ ವ್ಯವಸ್ಥೆಗಳಿದ್ದರೂ, ಕಳ್ಳರು ಅದನ್ನು ಭೇದಿಸುವ ತಂತ್ರವನ್ನು ಕಲಿತಿರುತ್ತಾರೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ಕಳ್ಳರ ಕಾಟವೂ ಹೆಚ್ಚುತ್ತಿದೆ. ಸಾಮಾನ್ಯವಾಗಿ ನಮ್ಮ ದೇಶದೆಲ್ಲೆಡೆ ಕಳ್ಳತನವಾಗುವ ದ್ವಿಚಕ್ರ ವಾಹನಗಳ ಮತ್ತೆ ಪತ್ತೆ ಆಗುವುದು ಕಷ್ಟ. ಏಕೆಂದರೆ ವಾಹನಗಳ ಭಾಗಗಳಾಗಿ ಒಡೆದು ಮಾರಾಟ ಮಾಡುವ ದಂಧೆ ಇದೆ.

ಭಾರತದ ಖಾಸಗಿ ವಾಹನ ವಿಮಾ ಕಂಪನಿಗಳಲ್ಲಿ ಒಂದಾದ ಎಸಿಒ ಬಿಡುಗಡೆ ಮಾಡಿದ ವಾಹನ ಕಳ್ಳತನ ವರದಿಯ ಪ್ರಕಾರ, ಬೈಕ್‌ಗಳು (Bikes) ಹೆಚ್ಚು ಕದ್ದ ವಾಹನವಾಗಿದೆ. ಈ ವರದಿಯ ಪ್ರಕಾರ, ಭಾರತದಲ್ಲಿ ಮೋಟಾರು ಸೈಕಲ್‌ಗಳು ಕಾರುಗಳಿಗಿಂತ (Cars) ಒಂಬತ್ತು ಪಟ್ಟು ಹೆಚ್ಚು ಕಳ್ಳತನವಾಗಿದೆ. ಆದರೆ, ವಾಹನ ಕಳ್ಳತನದಲ್ಲಿ ಕಾರುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಹೇಳಬೇಕು.
2023ರ ವಾಹನ ಕಳ್ಳತನ ವರದಿಯ ಪ್ರಕಾರ ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಹೆಚ್ಚು ಕದ್ದ ಕಾರು. ವ್ಯಾಗನ್ಆರ್ ಹೊರತುಪಡಿಸಿ, ಮಾರುತಿಯ ಇತರ ಹೆಚ್ಚು ಮಾರಾಟವಾದ ಮಾದರಿಯಾದ ಸ್ವಿಫ್ಟ್ ಕಳೆದ ವರ್ಷ ಕದ್ದ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ದೇಶದಲ್ಲಿ ಕದ್ದ ಕಾರುಗಳಲ್ಲಿ ಶೇಕಡ 47 ರಷ್ಟು ಮಾರುತಿ ಸುಜುಕಿಯದ್ದೇ ಎಂದು ಸಮೀಕ್ಷೆ ಹೇಳುತ್ತದೆ.

ವ್ಯಾಗನ್ಆರ್ ಮತ್ತು ಸ್ವಿಫ್ಟ್ ಕಳ್ಳರು ಹೆಚ್ಚು ಆದ್ಯತೆ ನೀಡುವ ಎರಡು ಕಾರುಗಳಾಗಿದ್ದರೆ, ನಂತರದ ಸ್ಥಾನದಲ್ಲಿ ಹ್ಯುಂಡೈ ಕ್ರೆಟಾ, ಗ್ರ್ಯಾಂಡ್ ಐ10 ಮತ್ತು ಮಾರುತಿ ಡಿಜೈರ್ ಇತರ ಹೆಚ್ಚು ಕದ್ದ ವಾಹನಗಳಾಗಿವೆ. ಮಾರುಕಟ್ಟೆಯಲ್ಲಿ ಹೆಚ್ಚಿನ ರಿ ಸೇಲ್ ವ್ಯಾಲೂ ಇರುವ ಕಾರುಗಳನ್ನು ಕಳ್ಳರು ನೋಡುವ ಪ್ರಮುಖ ವಿಷಯವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಾರುಗಳು ಕಳ್ಳತನವಾಗಿರುವ ನಗರಗಳ ಪಟ್ಟಿಯಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ ಎಂದು ಈಗಾಗಲೇ ಹೇಳಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 14 ನಿಮಿಷಕ್ಕೆ ಒಂದು ವಾಹನ ಕಳ್ಳತನವಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ. 2023 ರಲ್ಲಿ, ಭಾರತದಲ್ಲಿ ದಾಖಲಾದ ಒಟ್ಟು ಕಾರು ಕಳ್ಳತನ ಪ್ರಕರಣಗಳಲ್ಲಿ ಶೇಕಡಾ 37 ರಷ್ಟು ದೆಹಲಿಯಿಂದ ವರದಿಯಾಗಿದೆ. ಶಹದಾರ, ಪಟಪರ್‌ಗಂಜ್ ಮತ್ತು ಬದರ್‌ಪುರದ ಹೊರತಾಗಿ, ಭಜನ್‌ಪುರ ಮತ್ತು ಉತ್ತಮ್ ನಗರ ಕೂಡ ನಗರದಲ್ಲಿ ಅತಿ ಹೆಚ್ಚು ಕಾರು ಕಳ್ಳತನದ ಪ್ರದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಕಳೆದ ವರ್ಷ ಭಾರತದಲ್ಲಿ ಬೈಕ್ ಕಳ್ಳತನವೂ ಆತಂಕಕಾರಿಯಾಗಿ ಹೆಚ್ಚಾಗಿದೆ. ವರದಿಯ ಪ್ರಕಾರ, ಕಾರುಗಳಿಗೆ ಹೋಲಿಸಿದರೆ ಭಾರತದಲ್ಲಿ ಮೋಟಾರ್ ಸೈಕಲ್ ಕಳ್ಳತನವು ಒಂಬತ್ತು ಪಟ್ಟು ಹೆಚ್ಚಾಗಿದೆ. ಹೀರೋ ಸ್ಪ್ಲೆಂಡರ್ ದೇಶದಲ್ಲೇ ಅತಿ ಹೆಚ್ಚು ಕದ್ದ ಬೈಕ್ ಆಗಿದೆ. ನಂತರದ ಸ್ಥಾನದಲ್ಲಿ ಹೋಂಡಾ ಆಕ್ಟಿವಾ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ದ್ವಿಚಕ್ರ ವಾಹನಗಳಾಗಿವೆ.
ಗುರುಗ್ರಾಮ್ ಪೊಲೀಸರನ್ನು ಉಲ್ಲೇಖಿಸಿದ ವರದಿಯ ಪ್ರಕಾರ ನಗರದಲ್ಲಿ ಕಳವಾದ 10 ಬೈಕ್‌ಗಳಲ್ಲಿ ಆರು ಹೀರೋ ಸ್ಪ್ಲೆಂಡರ್, ಸ್ಪ್ಲೆಂಡರ್ ಪ್ಲಸ್, ಹೀರೋ ಸಿಡಿ ಡಿಲಕ್ಸ್ ಮತ್ತು ಹೀರೋ ಎಚ್‌ಎಫ್ ಡಿಲಕ್ಸ್ ಎಂದು ಸೂಚಿಸಿದೆ. ಹೆಚ್ಚಿನ ಮರು ಮಾರಾಟ ಮೌಲ್ಯ ಹಾಗೂ ಈ ಬೈಕ್ ಗಳ ಬಿಡಿ ಭಾಗಗಳಿಗೆ ಬೇಡಿಕೆ ಇರುವುದು ಕಳ್ಳತನ ಪ್ರಕರಣಗಳು ಹೆಚ್ಚಲು ಕಾರಣ ಎನ್ನುತ್ತಾರೆ ಪೊಲೀಸರು.
ಸ್ಥಳಾವಕಾಶದ ಕೊರತೆಯಿಂದಾಗಿ, ಹೆಚ್ಚಿನ ಭಾರತೀಯ ನಗರಗಳಲ್ಲಿ ಮನೆಗಳ ಹೊರಗೆ ರಸ್ತೆಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇವೆಲ್ಲವೂ ಕಳ್ಳತನ ಹೆಚ್ಚಾಗಲು ಕಾರಣ. ಕಳ್ಳತನವನ್ನು ಸ್ವಲ್ಪ ಮಟ್ಟಿಗೆ ತಡೆಯಲು ನೀವು ವಾಹನವನ್ನು ಲಾಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲನೆಯದು. ಕಳ್ಳತನ ವಿರೋಧಿ ಸಿಸ್ಟಂಗಳನ್ನು ಸ್ಥಾಪಿಸುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ.


Click it and Unblock the Notifications








