Skoda Superb: ಹೊಸ ಸ್ಕೋಡಾ ಸೂಪರ್ಬ್ ಸೆಡಾನ್ ಬಿಡುಗಡೆ, ನಿರೀಕ್ಷೆಗೂ ಮೀರಿದ ವಿಶೇಷತೆಗಳಿವೆ
ಜರ್ಮನಿ ಮೂಲದ ಸ್ಕೋಡಾ (Skoda) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸವನ್ನು ಹೊಂದಿರುವ ಹಲವು ಮಾದರಿಗಳನ್ನು ಮಾರಾಟಗೊಳಿಸುತ್ತಿದ್ದು, ಭಾರತದಲ್ಲಿ ಕಂಪನಿಯ ಸ್ಲಾವಿಯಾ (Slavia) ಮತ್ತು ಕುಶಾಕ್ (Kushaq) ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆದಿವೆ.
ದೇಶೀಯ ಮಾರುಕಟ್ಟೆಗೆ ಬುಧವಾರ ಸ್ಕೋಡಾ ಸೂಪರ್ಬ್ (Skoda Superb) ಸೆಡಾನ್ ಪುನರಾಗಮನವನ್ನು ಮಾಡಿದ್ದು, ರೂ.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕೇವಲ ಒಂದೇ ರೂಪಾಂತರದ ಆಯ್ಕೆಯನ್ನು ಈ ಕಾರು ಹೊಂದಿದ್ದು, ಈ ತಿಂಗಳ ಕೊನೆಯಲ್ಲಿ ವಿತರಣೆಗಳು ಶುರುವಾಗಲಿದೆ. ಆಸಕ್ತ ಗ್ರಾಹಕರು ಕಂಪನಿಯ ಶೋರೂಂ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೂತನ ಸೆಡಾನ್‌ನ್ನು ಕಾಯ್ದಿರಿಸಬಹುದು.

ಹೊಸ ಸ್ಕೋಡಾ ಸೂಪರ್ಬ್ ಕಾರು 2.0-ಲೀಟರ್ ಫೋರ್ ಸಿಲಿಂಡರ್ ಎಂಜಿನ್, ಟಿಎಸ್ಐ ಗ್ಯಾಸೋಲಿನ್ ಮೋಟಾರ್ ಹೊಂದಿದ್ದು, 187 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 7-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.
ವಿನ್ಯಾಸದ ದೃಷ್ಟಿಯಿಂದಲೂ ನೂತನ ಕಾರು ಅತ್ಯಾಧುನಿಕವಾಗಿದೆ. ಮುಂಭಾಗ (ಫ್ರಂಟ್) ಸಿಗ್ನೇಚರ್ ಸ್ಕೋಡಾ ರೇಡಿಯೇಟರ್ ಗ್ರಿಲ್, ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಕಾರ್ನರಿಂಗ್ ಫಂಕ್ಷನ್ ಜೊತೆಯಲ್ಲಿ ಎಲ್ಇಡಿ ಫಾಗ್ ಲ್ಯಾಂಪ್ಸ್ ಹೊಂದಿದೆ. ಹಿಂಭಾಗ (ರೇರ್) ಎಲ್ಇಡಿ ಟೈಲ್‌ಲ್ಯಾಂಪ್ಸ್ ಹಾಗೂ ಫಾಗ್ ಲೈಟ್ಸ್ ಒಳಗೊಂಡಿದೆ. ಬದಿಗಳ (ಸೈಡ್) ವಿನ್ಯಾಸವು ಉತ್ತಮವಾಗಿದ್ದು, 18-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್ಸ್ ಪಡೆದಿದೆ.

ನೂತನ ಸ್ಕೋಡಾ ಸೂಪರ್ಬ್ ಸೆಡಾನ್‌ನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದಾಗಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಮೊಬೈಲ್ ಕನೆಕ್ಟಿವಿಟಿಯೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ವರ್ಚುವಲ್ ಕಾಕ್‌ಪಿಟ್, 12-ಸ್ಪೀಕರ್ ಕ್ಯಾಂಟನ್ ಆಡಿಯೋ ಸಿಸ್ಟಮ್, 3-ಜೋನ್ ಕ್ಲೇಮೇಟ್ ಕಂಟ್ರೋಲ್, ರೇರ್ ವಿಂಡೋ & ವಿಂಡ್‌ಸ್ಕ್ರೀನ್‌ಗಾಗಿ ರೋಲ್-ಅಪ್ ಸನ್ ವೈಸರ್ಸ್ ಅನ್ನು ತನ್ನದಾಗಿಸಿಕೊಂಡಿದೆ.
ಈ ಹೊಸ ಸ್ಕೋಡಾ ಸೂಪರ್ಬ್ ಕಾರು ಭರಪೂರ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದ್ದು, 9 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಆಟೋ ಹೋಲ್ಡ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮೆರಾ, ಪಾರ್ಕ್ ಅಸಿಸ್ಟ್ ಅನ್ನು ಹೊಂದಿದೆ.

ನೂತನ ಸ್ಕೋಡಾ ಸೂಪರ್ಬ್ ಸೆಡಾನ್ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಕೂಡ ಪಡೆದಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ಇತರೆ ಸ್ಕೋಡಾ ಕಾರುಗಳಿಗೆ ಹೋಲಿಕೆ ಮಾಡಿದರೆ ಕೊಂಚ ಅಧಿಕವಾದ ದರವನ್ನು ಹೊಂದಿದೆ. ಮುಂಬರುವ ದಿನದಲ್ಲಿ ಈ ಕಾರಿಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








