2025ರ ಆಟೋ ಎಕ್ಸ್‌ಪೋಗೆ ತೆರೆ: ಜುಪಿಟರ್ CNG & ಟಾಟಾ ಸಿಯೆರಾ ಸೇರಿ 100ಕ್ಕೂ ಹೆಚ್ಚು ವಾಹನಗಳ ಪ್ರದರ್ಶನ!
ವಾಹನ ಪ್ರಿಯರ ನೆಚ್ಚಿನ 'ಆಟೋ ಎಕ್ಸ್‌ಪೋ'ಗೆ ಆದ್ದೂರಿಯಾಗಿ ತೆರೆ ಬಿದ್ದಿದೆ. ಈ ಬಾರಿ ಜನವರಿ 17 ರಿಂದ 22 ರವರೆಗೆ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2025 (Bharat Mobility Global Expo-2025) ಹೆಸರಿನಲ್ಲಿ ಆಟೋ ಎಕ್ಸ್‌ಪೋವನ್ನು ಆಯೋಜಿಸಲಾಗಿತ್ತು. ನವದೆಹಲಿಯಲ್ಲಿ ನಡೆದ ಈ ಬೃಹತ್ ವಾಹನ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ್ದರು. ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಕೂಡ ಪಾಲ್ಗೊಂಡಿದ್ದರು.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ದೇಶ - ವಿದೇಶದ ಹತ್ತಾರು ವಾಹನ ತಯಾರಕ ಕಂಪನಿಗಳು ಭಾಗವಹಿಸಿದ್ದವು. ಸರಿ ಸುಮಾರು 100ಕ್ಕೂ ಹೆಚ್ಚು ವಾಹನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿತ್ತು. ಒಂದಷ್ಟು ಕಾರುಗಳು (Cars) ಹಾಗೂ ದ್ವಿಚಕ್ರ ವಾಹನಗಳು (Two Wheeler) ಸಹ ಅನಾವರಣಗೊಂಡರೆ, ಮತ್ತಷ್ಟು ವಾಹನಗಳು ಬಿಡುಗಡೆಗೊಂಡವು.

ಭಾರತ್ ಗ್ಲೋಬಲ್ ಎಕ್ಸ್‌ಪೋ ಹೈಲೈಟ್ಸ್..
ಈ ಬಾರಿಯ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಟಿವಿಎಸ್ ಜುಪಿಟರ್ ಸಿಎನ್‌ಜಿ (TVS Jupiter CNG) ಸ್ಕೂಟರ್ ಮಾಡೆಲ್‌ನ್ನು ಬಹಿರಂಗಪಡಿಸಲಾಗಿತ್ತು. ಇದು 124.8 ಸಿಸಿ ಸಾಮರ್ಥ್ಯದ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5.3 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 9.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 226 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ನೂತನ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ಎಸ್‌ಯುವಿಯನ್ನು ಸಹ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದು ರೂ.17.99 ಲಕ್ಷದಿಂದ ರೂ.23.50 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 42 ಕೆಡಬ್ಲ್ಯೂಹೆಚ್ ಹಾಗೂ 51.4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 390 ರಿಂದ 473 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಇದೇ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಇ ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿಯೂ ಅನಾವರಣಗೊಂಡಿದೆ. ಈ ಕಾರು 49 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 61 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 500ಕ್ಕೂ ಅಧಿಕ ಕಿಲೋಮೀಟರ್ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಹೊಚ್ಚ ಹೊಸ ಹೋಂಡಾ ಕ್ಯೂಸಿ1 ಹಾಗೂ ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಿವೆ. ನೂತನ ಹೋಂಡಾ ಕ್ಯೂಸಿ1 (Honda QC1) ರೂ.90,000 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 80 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಹೋಂಡಾ ಆಕ್ಟಿವಾ ಇ (Honda Activa e) ರೂ.1.17 ಲಕ್ಷ ಬೆಲೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 102 ಕಿಲೋಮಿಟರ್ ಓಡುತ್ತದೆ.

ಈ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಬಹುನಿರೀಕ್ಷಿತ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಪ್ರದರ್ಶಿಸಲಾಗಿದೆ. ಇದನ್ನು ಮೊದಲಿಗೆ ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲಾಗುತ್ತದೆ. ಆ ನಂತರ ಪೆಟ್ರೋಲ್/ಡೀಸೆಲ್ ಅವತಾರದಲ್ಲಿ ಕಂಪನಿಯು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಈ ಕಾರು ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








