20 ರಿಂದ 34 ಕಿ.ಮೀವರೆಗೆ ಮೈಲೇಜ್.. ಬರೀ Rs 5 ಲಕ್ಷದೊಳಗೆ ಈ ಜನಪ್ರಿಯ ಕಾರುಗಳನ್ನು ಮನೆಗೆ ತರಬಹುದು!
ಹೊಸ ಕಾರು ಖರೀದಿ ಮಾಡಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಸೆಪ್ಟೆಂಬರ್ 22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದೆ. ಕಾರುಗಳ ಬೆಲೆಯೂ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.5 ಲಕ್ಷದೊಳಗೆ ಲಭ್ಯವಿರುವ ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್, ಮಾರುತಿ ಸುಜುಕಿ ಆಲ್ಟೊ ಕೆ10 ಹಾಗೂ ಮಾರುತಿ ಸುಜುಕಿ ಎಸ್-ಪ್ರೆಸ್ಸೊಗಳು ಬೊಂಬಾಟ್ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio):
ಇದೊಂದು ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಸುಲಭ ನಿರ್ವಹಣೆಯನ್ನು ಹೊಂದಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಾಗಲಿದೆ. ರೂ.4.70 ಲಕ್ಷದಿಂದ ರೂ.6.73 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಆರ್ಕ್ಟಿಕ್ ವೈಟ್, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ, ಕೆಫೀನ್ ಬ್ರೌನ್ ಮತ್ತು ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ 'ಸೆಲೆರಿಯೊ' 5 ಆಸನಗಳನ್ನು ಪಡೆದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 1-ಲೀ.ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 24 ರಿಂದ 34 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಹಾಗೂ 6 ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಟಾಟಾ ಟಿಯಾಗೊ (Tata Tiago):
ಈ ಕಾರನ್ನು ಗ್ರಾಹಕರು ಮೆಚ್ಚಿಕೊಂಡಿದ್ದು, ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಅದಕ್ಕೆ ತಕ್ಕಂತೆ ಬಜೆಟ್ ಬೆಲೆಯಲ್ಲಿಯೂ ಲಭ್ಯವಿದೆ. ರೂ.4.57 ಲಕ್ಷದಿಂದ ರೂ.7.82 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಅರಿಜೋನಾ ಬ್ಲೂ, ಟೊರ್ನಾಡೊ ಬ್ಲೂ, ಓಷನ್ ಬ್ಲೂ, ಡೇಟೋನಾ ಗ್ರೇ ಮತ್ತು ಸೂಪರ್ನೋವಾ ಕಾಪರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಹೊಸ 'ಟಿಯಾಗೊ' 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚರಿಸಬಹುದು. 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ತನ್ನದಾಗಿಸಿಕೊಂಡಿದೆ. 19 ರಿಂದ 28 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 170 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಡುಯಲ್ ಏರ್‌ಬ್ಯಾಗ್‌ನಂತಹ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ರೆನಾಲ್ಟ್ ಕ್ವಿಡ್ (Renault Kwid):
ಇದು ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಎಲ್ಲ ವರ್ಗದ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ರೂ.4.30 ಲಕ್ಷದಿಂದ ರೂ.5.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. 1-ಲೀ. ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 20 ರಿಂದ 22 ಕಿ.ಮೀವರೆಗೆ ಮೈಲೇಜ್ ಕೊಂಡುತ್ತದೆ. 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಮ್ಯಾನುವಲ್ ಎಸಿ ಮತ್ತು 2 ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10):
ಈ ಕಾರನ್ನು ಬಡವರ ಬಂಡಿ ಎಂದು ಕರೆದರೂ ತಪ್ಪಾಗುವುದಿಲ್ಲ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವುದು ಮಾತ್ರವಲ್ಲದೇ, ಹಣಕ್ಕೆ ತಕ್ಕ ಉತ್ಪನ್ನವಾಗಿದೆ. ರೂ.3.70 ಲಕ್ಷದಿಂದ ರೂ.5.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 5 ಆಸನಗಳನ್ನು ಒಳಗೊಂಡಿದೆ. 1-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24 ರಿಂದ 34 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso):
ಇದೊಂದು ನಂಬಿಕಾರ್ಹ ಹ್ಯಾಚ್‌ಬ್ಯಾಕ್ ಆಗಿದೆ. ದುಡಿಯುವ ವರ್ಗದ ಜನರು, ಅದರಲ್ಲೂ ಕ್ಯಾಬ್ ಚಾಲಕರು ಮೆಚ್ಚಿಕೊಂಡಿದ್ದಾರೆ. ರೂ.3.49 ಲಕ್ಷದಿಂದ ರೂ.5.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 1-ಲೀ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 24 ರಿಂದ 33 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ & ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








