ದೇಶದಲ್ಲಿ ಚೀನಾ ಕಾರಿಗಾಗಿ ಕ್ಯೂ ನಿಂತ ಜನ... ಈಗ ಬುಕ್ ಮಾಡಿದ್ರೆ 5 ತಿಂಗಳ ನಂತರ ಡೆಲಿವರಿ!
ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಾಗಿರುವ 'ಸೈಬರ್‌ಸ್ಟರ್' ಭಾರತದಲ್ಲಿ ಉತ್ತಮ ಮಾರಾಟದೊಂದಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಈ ಕಾರನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇದೇ ವರ್ಷದ ಜುಲೈನಲ್ಲಿ ಬಿಡುಗಡೆಯಾದಾಗಿನಿಂದಲೂ ಬಲವಾದ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ, ಅಲ್ಲದೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರನ್ನು ಬುಕಿಂಗ್ ಮಾಡಿದರೆ ಡೆಲಿವರಿಗೆ ಸುಮಾರು ನಾಲ್ಕರಿಂದ ಐದು ತಿಂಗಳಿಗೆ ಹೆಚ್ಚಿಸಲಾಗಿದೆ ಎಂದು ವಾಹನ ತಯಾರಕ ಕಂಪನಿ ತಿಳಿಸಿದೆ.
MG ಮೋಟಾರ್, ಶಾಂಘೈ ಮೂಲದ ಚೀನಾದ ಸರ್ಕಾರಿ ಸ್ವಾಮ್ಯದ ಕಾರು ತಯಾರಕ SAIC ಮೋಟಾರ್ ಒಡೆತನದ ಆಟೋಮೋಟಿವ್ ತಯಾರಕ ಕಂಪನಿಯಾಗಿದೆ. 2023 ರಿಂದ ಭಾರತದಲ್ಲಿ ಇದು ಮುಂಬೈ ಮೂಲದ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಕಂಪನಿಯಾಗಿರುವ JSW ಗ್ರೂಪ್ ಜೊತೆಗೆ ಜಂಟಿ ಉದ್ಯಮವಾಗಿ ದೇಶದಲ್ಲಿ ಮುಂದುವರಿಯುತ್ತಿದೆ.

"ಇಂದಿನ ಖರೀದಿದಾರರು ಐಷಾರಾಮಿ ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್ ಹೊಂದಿರುವ ಸ್ಪೋರ್ಟ್ಸ್ ಕಾರುಗಳನ್ನು ಹುಡುಕುತ್ತಿದ್ದಾರೆ. ನಾವು ಆರೋಗ್ಯಕರ ಆರ್ಡರ್ ಬುಕಿಂಗ್ ಸ್ವೀಕರಿಸುತ್ತಿದ್ದೇವೆ. ಪ್ರಸ್ತುತ ಬೇಡಿಕೆ ಮತ್ತು ಮುಂಬರುವ ಬುಕಿಂಗ್ ಗಳನ್ನು ಪೂರೈಸಲು ಸಮರ್ಥವಾಗಿ ಕೆಲಸ ಮಾಡುತ್ತಿದ್ದೇವೆ. ಕ್ರೀಡಾ ಚಾಂಪಿಯನ್‌ಗಳಿಂದ ಹಿಡಿದು ಸಿನಿಮಾ ತಾರೆಯರವರೆಗೆ, ಸೈಬರ್‌ಸ್ಟರ್ ಯುವ ಪೀಳಿಗೆಯನ್ನು ಸೆಳೆಯುತ್ತಿದೆ'' ಎಂದು ಕಂಪನಿ ಹೇಳಿದೆ.
ಹೊಸ ಸೈಬರ್‌ಸ್ಟರ್ ಕಾರಿಗೆ ಯಾವ ಮಟ್ಟಿಗೆ ಕ್ರೇಜ್ ಇದೆ ಎಂದರೆ ಮೊನ್ನೆಯಷ್ಟೆ ಯುವ ಕ್ರಿಕೆಟ್ ಆಟಗಾರ್ತಿ 'ಶಫಾಲಿ ವರ್ಮಾ' ಅವರು ಎಂಜಿ ಸೈಬರ್‌ಸ್ಟರ್ ಖರೀದಿಸಿ ಕಾರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯ ಪ್ರಕಾರ ಸೈಬರ್ ಸ್ಟರ್ ಪ್ರಮುಖ ನಗರಗಳಲ್ಲಿ ಖರೀದಿದಾರರನ್ನು ಆಕರ್ಷಿಸುತ್ತಿದೆ. ಬುಕಿಂಗ್‌ಗಳು ಬೆಳೆಯುತ್ತಲೇ ಇವೆ, ಲಭ್ಯತೆಯ ಆಧಾರದ ಮೇಲೆ ಡೆಲಿವರಿಗಳನ್ನು ನಿಗದಿಪಡಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಇದರ ಬೆಲೆಯು ರೂ. 74,99,800 (ಎಕ್ಸ್ ಶೋರೂಂ) ಇದ್ದು, ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕನ್ವರ್ಟಬಲ್ ಕಾರಾಗಿದೆ. MG ಸೈಬರ್‌ಸ್ಟರ್ ಕಾರ್ಯಕ್ಷಮತೆಯಲ್ಲಿ ಅದ್ಭುತವಾಗಿದ್ದು, ಡ್ಯುಯಲ್ - ಮೋಟಾರ್ AWD 77kWh ಬ್ಯಾಟರಿ ಪ್ಯಾಕ್ ನೊಂದಿಗೆ 503bhp ಪವರ್ ಮತ್ತು 725Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಕೇವಲ 3.2 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುತ್ತದೆ.
MG ಸೈಬರ್‌ಸ್ಟರ್ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 580 ಕಿಮೀ ಓಡಿಸಬಹುದು. ಇದು ಕಂಫರ್ಟ್, ಸ್ಪೋರ್ಟ್, ಕಸ್ಟಮ್ ಮತ್ತು ಸೂಪರ್ ಸ್ಪೋರ್ಟ್ ಎಂಬ ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಅತ್ಯುನ್ನತ ಚಾಲನಾ ಅನುಭವವನ್ನು ನೀಡುವ ಗುರಿಯನ್ನು ಹೊಂದಿರುವ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರನ್ನು 50:50 ತೂಕ ವಿತರಣೆಯನ್ನು ಹೊಂದಲು ವಿನ್ಯಾಸಗೊಳಿಸಲಾಗಿದೆ.

ಟ್ರೈ-ಕ್ಲಸ್ಟರ್ ಡ್ಯಾಶ್‌ಬೋರ್ಡ್ ಎರಡು ಏಳು ಇಂಚಿನ ಸ್ಕ್ರೀನ್‌ಗಳು ಮತ್ತು 10.25-ಇಂಚಿನ ಸೆಂಟರ್ ಕನ್ಸೋಲ್ ಹೊಂದಿದೆ. ಸಂಪೂರ್ಣ ಡಿಜಿಟಲ್ ಕಾಕ್‌ಪಿಟ್, 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಒಳಗೊಂಡಿದೆ. ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, ಲೆವೆಲ್ 2 ADAS, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಳು, ಆಟೋ-ಡಿಮ್ಮಿಂಗ್ IRVM ಮತ್ತು ವೆಂಟಿಲೇಟೆಡ್ ಸೀಟ್‌ಗಳನ್ನು ಸಹ ಹೊಂದಿದೆ.
ಎಂಜಿ ಸೈಬರ್‌ಸ್ಟರ್ 2 ಆಸನಗಳನ್ನು ಹೊಂದಿದ್ದು, ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 230 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ನೀಡಲಾಗಿದೆ. 4,535 ಎಂಎಂ ಉದ್ದ, 1,913 ಎಂಎಂ ಅಗಲ ಮತ್ತು 1,329 ಎಂಎಂ ಎತ್ತರ ಇದೆ. ಇದರೊಂದಿಗೆ 140 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,690 ವೀಲ್‌ಬೇಸ್‌ನ್ನು ಒಳಗೊಂಡಿದೆ.
ಸೇಫ್ಟಿ ವಿಷಯಕ್ಕೆ ಬಂದರೆ MG ಸೈಬರ್‌ಸ್ಟರ್ EV ರೋಡ್‌ಸ್ಟರ್ ನಾಲ್ಕು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಜೊತೆಗೆ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ಎಮರ್ಜೆನ್ಸಿ ಬ್ರೇಕಿಂಗ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಮತ್ತು ಇತರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಫ್ಲೇರ್ ರೆಡ್, ನ್ಯೂಕ್ಲಿಯರ್ ಯೆಲ್ಲೋ, ಆಂಡಿಸ್ ಗ್ರೇ & ಮಾಡ್ರನ್ ಬೀಜ್ ಎಂಬ ನಾಲ್ಕು ಬಣ್ಣಗಳೊಂದಿಗೆ ದೊರೆಯುತ್ತದೆ.


Click it and Unblock the Notifications








