Renault: 24 ಕಿ.ಮೀ ಮೈಲೇಜ್! ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ ಹೊಸ ರೆನಾಲ್ಟ್ ಡಸ್ಟರ್.. ಬೆಲೆಯೂ ತುಂಬಾ ಕಮ್ಮಿ?
ಬಹುನಿರೀಕ್ಷಿತ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿಯ ಮರು ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ನೂತನ 'ಡಸ್ಟರ್'ನ್ನು ಜನವರಿ 26ರ ಗಣರಾಜ್ಯೋತ್ಸವದಂದು ಅದ್ದೂರಿಯಾಗಿ ಅನಾವರಣಗೊಳಿಸಲಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಇದೇ ಎಸ್‌ಯುವಿಯನ್ನು 2012ರಲ್ಲಿ ಮಾರಾಟಕ್ಕೆ ತರಲಾಗಿತ್ತು. ಆದರೆ, 2022ರಲ್ಲಿ ನಾನಾ ಕಾರಣಗಳಿಂದ ಮಾರಾಟದಿಂದ ಸ್ಥಗಿತಗೊಳಿಲಾಯಿತು.
ಚೆನ್ನೈನಲ್ಲಿ ಮತ್ತೊಮ್ಮೆ ಹೊಸ ತಲೆಮಾರಿನ 'ರೆನಾಲ್ಟ್ ಡಸ್ಟರ್' ಪ್ರಾಯೋಜಿಕ ಸಂಚಾರ ನಡೆಸುವಾಗ ಕಾಣಿಸಿಕೊಂಡಿದೆ. ಅದರ 'ಸ್ಪೈ' ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿವೆ. ಈ ಮೊದಲು, ಹಲವಾರು ಬಾರಿ ಪರೀಕ್ಷಾರ್ಥ ಓಡಾಟ ಸಂದರ್ಭದಲ್ಲೂ ಕಂಡುಬಂದಿತ್ತು. ನೂತನ ಕಾರನ್ನು ಕಪ್ಪು ಬಣ್ಣದ ಕವರ್‌ನಿಂದ ಮುಚ್ಚಿದ್ದರಿಂದ ವಿನ್ಯಾಸದ ಕುರಿತ ಪ್ರಮುಖಾಂಶಗಳನ್ನು ಅಷ್ಟಾಗಿ ಗುರುತಿಸಲು ಸಾಧ್ಯವಾಗಲಿಲ್ಲ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿರುವ 'ಡೇಸಿಯಾ ಡಸ್ಟರ್'ಗೆ ಹೋಲಿಕೆಯಾಗುತ್ತಿತ್ತು.

ಹೊಚ್ಚ ಹೊಸ 'ರೆನಾಲ್ಟ್ ಡಸ್ಟರ್' ಎಸ್‌ಯುವಿಯು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಸರ್ಕ್ಯುಲರ್ ಫಾಗ್ ಲೈಟ್‌ಗಳು, 'ವಿ' ಆಕಾರದ ಟೈಲ್ ಲ್ಯಾಂಪ್‌ಗಳು, ಥೀಕ್ ವೀಲ್ ಆರ್ಚ್ ಕ್ಲಾಡಿಂಗ್, ಶಾರ್ಕ್-ಫಿನ್ ಆಂಟೆನಾ, ರೂಫ್ ರೈಲ್‌ಗಳು, ವಿಂಡ್‌ಶೀಲ್ಡ್, ವಾಷರ್ ಹಾಗೂ ವೈಪರ್‌ನ್ನು ಹೊಂದಿರಲಿದೆ ಎನ್ನಲಾಗಿದೆ.
ಈ ಕಾರು ಸಾಕಷ್ಟು ದೊಡ್ಡ ಗಾತ್ರದಲ್ಲಿರಲಿದೆ. 4,360 ಎಂಎಂ ಉದ್ದ, 1,822 ಎಂಎಂ ಅಗಲ ಹಾಗೂ 1695 ಎಂಎಂ ಎತ್ತರವಿರಲಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,673 ಎಂಎಂ ವೀಲ್‌ಬೇಸ್‌ನ್ನು ಹೊಂದಿರುವ ಎಲ್ಲ ಸಾಧ್ಯತೆಯಿದೆ. ಜೊತೆಗೆ ಆಕರ್ಷಕವಾದ ಬಣ್ಣಗಳ ಆಯ್ಕೆಯಲ್ಲಿಯೂ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಇದು 5/ 7 ಆಯ್ಕೆ ವ್ಯವಸ್ಥೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಪ್ರಯಾಣಿಕರು ಆರಾಮದಾಯಕ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದು. ಪ್ರವಾಸಕ್ಕೆ ತೆರಳಿವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 472 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿರುವ ನಿರೀಕ್ಷೆಯಿದೆ.
ನೂತನ 'ರೆನಾಲ್ಟ್ ಡಸ್ಟರ್' ಎಸ್‌ಯುವಿಯು ಬಲಿಷ್ಠವಾದ 3 ಪವರ್‌ಟ್ರೇನ್‌ನ್ನು ಹೊಂದಿರಬಹುದು ಎಂದು ಹೇಳಲಾಗಿದೆ. 1.3-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿರಲಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 24 ಕಿ.ಮೀವರೆಗೆ ಮೈಲೇಜ್ ಕೊಡುವ ಸಾಧ್ಯತೆಯಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಅತ್ಯುತ್ತಮವಾಗಿರಲಿದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಸ್ಕ್ರೀನ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ರೇರ್ ಎಸಿ ವೆಂಟ್‌ಗಳು ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರಬಹುದು ಎನ್ನಲಾಗಿದೆ.
ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುವ ನಿರೀಕ್ಷೆಯಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‍ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.
ಹೊಸ 'ರೆನಾಲ್ಟ್ ಡಸ್ಟರ್' ಎಸ್‌ಯುವಿ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ರೂ.8 ಲಕ್ಷದಿಂದ ರೂ.15 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎನ್ನಲಾಗಿದೆ. ಇದಕ್ಕೆ ಟಾಟಾ ನೆಕ್ಸಾನ್ (Tata Nexon), ಹೋಂಡಾ ಎಲಿವೇಟ್ (Honda Elevate), ಹ್ಯುಂಡೈ ಕ್ರೆಟಾ (Hyundai Creta), ಕಿಯಾ ಸೋನೆಟ್ (Kia Sonet) ಹಾಗೂ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.
Source: Rushlane


Click it and Unblock the Notifications