MG Cyberster: ಬಿಡುಗಡೆ ಮುನ್ನವೇ ಡೀಲರ್‌ಶಿಪ್ ತಲುಪಿದ ಹೊಸ ಎಂಜಿ ಕಾರು: ಬೆಲೆ, ವಿಶೇಷತೆಗಳೇನು?
ಎಂಜಿ ಸೈಬರ್‌ಸ್ಟರ್ (MG Cyberster) ಎಲೆಕ್ಟ್ರಿಕ್ ರೋಡ್‌ಸ್ಟರ್ ಭಾರತದಾದ್ಯಂತ ಶೋ ರೂಂಗಳಿಗೆ ಬರಲು ಪ್ರಾರಂಭಿಸಿದ್ದು, ತನ್ನ ಅಧಿಕೃತ ಬಿಡುಗಡೆ ಸನ್ನಿಹಿತವಾಗಿದೆ ಎಂದು ಸುಳಿವು ನೀಡಿದೆ. MG ಮೋಟಾರ್ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಎರಡು-ಬಾಗಿಲಿನ ಕನ್ವರ್ಟಿಬಲ್ ಸೈಬರ್‌ಸ್ಟರ್ ಅನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಇದನ್ನು ಬ್ರ್ಯಾಂಡ್‌ನ ಪ್ರೀಮಿಯಂ MG ಸೆಲೆಕ್ಟ್ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುವುದು. ಗ್ರಾಹಕರ ಪೂರ್ವವೀಕ್ಷಣೆಗಳು (previews) ಈಗಾಗಲೇ ನಡೆಯುತ್ತಿವೆ. ಡೀಲರ್‌ಶಿಪ್ ಅಥವಾ ಚಾನಲ್ ಅನ್ನು ಅವಲಂಬಿಸಿ ರೂ. 30,000 ರಿಂದ ರೂ. 51,000 ವರೆಗಿನ ಟೋಕನ್ ಮೊತ್ತದೊಂದಿಗೆ ಪ್ರೀ-ಬುಕಿಂಗ್‌ಗಳು ಪ್ರಾರಂಭವಾಗಿವೆ.
ಈ ಆಕರ್ಷಕ ಕಾರನ್ನು ಮೊದಲು ಭಾರತದಲ್ಲಿ ಜನವರಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 ರಲ್ಲಿ ಅನಾವರಣಗೊಳಿಸಲಾಯಿತು. ಈಗ ಬಿಡುಗಡೆ ಮುಂಚಿತವಾಗಿಯೇ ಗ್ರಾಹಕರ ಪೂರ್ವವೀಕ್ಷಣೆಗಾಗಿ ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸಿದೆ. ಜುಲೈ 2025 ರಲ್ಲಿ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ, ಕೆಲ ಮೂಲಗಳು ಅಧಿಕೃತ ಬಿಡುಗಡೆಯನ್ನು ಜುಲೈ ಮೊದಲ ವಾರವನ್ನು ಸೂಚಿಸುತ್ತಿವೆ.

ಎಂಜಿ ಸೈಬರ್‌ಸ್ಟರ್ ಭಾರತದಲ್ಲಿ ಪ್ರಮುಖ ನಗರಗಳಲ್ಲಿನ 12 MG ಸೆಲೆಕ್ಟ್ ಶೋರೂಂಗಳ ಮೂಲಕ ಸೀಮಿತ ಲಭ್ಯತೆಯೊಂದಿಗೆ ಸಂಪೂರ್ಣವಾಗಿ ನಿರ್ಮಿಸಲಾದ ಘಟಕ (CBU) ವಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಇದು ಹೊಸ MG ಸೆಲೆಕ್ಟ್ ಪ್ರೀಮಿಯಂ ಚಾನೆಲ್ ಅಡಿಯಲ್ಲಿ ಲಭ್ಯವಾಗಲಿರುವ ಮೊದಲ ಕಾರಾಗಲಿದೆ, ಇದು ಭವಿಷ್ಯದ ಪ್ರೀಮಿಯಂ ಕಾರು ಬಿಡುಗಡೆಗಳನ್ನು ಸಹ ನಿರ್ವಹಿಸಲಿದೆ.
ಕಾರಿನ ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು
ಹಿಂತೆಗೆದುಕೊಳ್ಳಬಹುದಾದ ರೂಫ್ ಮತ್ತು ಸಿಸರ್ ಡೋರ್‌ಗಳೊಂದಿಗೆ ಎರಡು-ಬಾಗಿಲಿನ ಕನ್ವರ್ಟಿಬಲ್ ಆಗಿ ಇದನ್ನು ಡಿಸೈನ್ ಮಾಡಲಾಗಿದೆ. ಡಿಪ್ಪಿಂಗ್ ನೋಸ್, DRL ಗಳೊಂದಿಗೆ LED ಹೆಡ್‌ಲ್ಯಾಂಪ್, ಸ್ಪ್ಲಿಟ್ ಫ್ರಂಟ್ ಬಂಪರ್, ಡ್ಯುಯಲ್-ಟೋನ್ 20-ಇಂಚಿನ ಅಲಾಯ್ ವೀಲ್‌ಗಳು, ಬಾಣದ ಆಕಾರದ ಕನೆಕ್ಟೆಡ್ ಟೈಲ್‌ಲ್ಯಾಂಪ್‌ಗಳು ಮತ್ತು ಟ್ರಿಪಲ್-ಸ್ಕ್ರೀನ್ ಡಿಸೈನ್‌ನೊಂದಿಗೆ ಭಾರೀ ಕ್ಯಾಬಿನ್ ಹೊಂದಿದೆ.

ಇಂಟೀರಿಯರ್‌ನಲ್ಲಿ 3-ಸ್ಕ್ರೀನ್ ಡ್ಯಾಶ್‌ಬೋರ್ಡ್, ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಪ್ಯಾಡಲ್ ಶಿಫ್ಟರ್‌ಗಳು, 6-ವೇ ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ಹೀಟೆಡ್ ಸೀಟುಗಳು, ಬೋಸ್ ಆಡಿಯೊ ಸಿಸ್ಟಮ್ ಮತ್ತು ADAS ಸುರಕ್ಷತಾ ಸೂಟ್ ಸೇರಿವೆ. ಸುಮಾರು ರೂ. 60 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದು ಭಾರತದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಆಗಲಿದೆ.
ಎಂಜಿ ಇದುವರೆಗೆ ಕಾರಿನ ಪರ್ಫಾಮೆನ್ಸ್ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ, ಮೂಲಗಳ ಪ್ರಕಾರ ಇದು ಟ್ರೋಫಿ ಮತ್ತು ಜಿಟಿ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ. ಟ್ರೋಫಿಯು ಸಿಂಗಲ್-ಮೋಟರ್, ರಿಯರ್ ವೀಲ್ ಡ್ರೈವ್ (ಆರ್ ಡಬ್ಲ್ಯುಡಿ) ಸೆಟಪ್ ಅನ್ನು ಹೊಂದಿದ್ದರೆ, ಜಿಟಿ ಡ್ಯುಯಲ್ ಮೋಟರ್, ಆಲ್-ವೀಲ್ ಡ್ರೈವ್ (ಎಡಬ್ಲ್ಯುಡಿ) ಕಾನ್ಫಿಗರೇಶನ್ ಅನ್ನು ಹೊಂದಿದೆ.

ಎಂಟ್ರಿ ಲೆವೆಲ್ ಆರ್‌ಡಬ್ಲ್ಯುಡಿ ರೂಪಾಂತರವು 64 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಜೋಡಿಸಲ್ಪಟ್ಟಿದೆ, ಇದು ಹಿಂಭಾಗದಲ್ಲಿ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 310 ಬಿಹೆಚ್ ಪವರ್ ಮತ್ತು 475 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಕೇವಲ 4.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲದು. 193 ಕಿ.ಮೀ ಗರಿಷ್ಠ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ 520 ಕಿಮೀ ವರೆಗೆ ರೇಂಜ್ ನೀಡುವ ನಿರೀಕ್ಷೆಯಿದೆ.
ಟಾಪ್ ವೇರಿಯೆಂಟ್ ಡ್ಯುಯಲ್-ಮೋಟಾರ್ AWD ವಿಷಯಕ್ಕೆ ಬಂದರೆ ಇದು 77 kWh ಬ್ಯಾಟರಿ, 544 bh ಪವರ್ ಹಾಗೂ 725 Nm ಟಾರ್ಕ್ ಹೊರಹಾಕುತ್ತದೆ. ಕೇವಲ 3.2 ಸೆಕೆಂಡುಗಳಲ್ಲಿ 0-100 ಕಿಮೀ/ಗಂಟೆ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಸಿಂಗಲ್ ಚಾರ್ಜ್‌ನಲ್ಲಿ 580 ಕಿ.ಮೀ (CLTC ಸೈಕಲ್) ರೇಂಜ್ ನೀಡಲಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications








