Maruti WagonR EV: ಹೊಸ ಮಾರುತಿ ವ್ಯಾಗನ್ಆರ್ ಇವಿ ಬಿಡುಗಡೆಗೊಳ್ಳುವ ಕಾಲ ಬಂದೇ ಬಿಡ್ತು! 270 ಕಿ.ಮೀ ರೇಂಜ್?
ಮಾರುತಿ ಸುಜುಕಿ (Maruti Suzuki) ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಇದೇ ಅ.29 ರಿಂದ ಆರಂಭವಾಗುವ 'ಜಪಾನ್ ಮೊಬಿಲಿಟಿ ಶೋ'ನಲ್ಲಿ ವಿವಿಧ ಹೊಚ್ಚ ಹೊಸ ಕಾರುಗಳನ್ನು ಪ್ರದರ್ಶಿಸಲಿದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ವಾಹನ ಪ್ರಿಯರ ಕಾತರವು ಹೆಚ್ಚಾಗಿದೆ. ಈ ಶೋನಲ್ಲಿ ಯಾವೆಲ್ಲ ನೂತನ ಕಾರುಗಳನ್ನು ತೋರಿಸಲಾಗುತ್ತದೆ ಎಂಬುದರ ಕುರಿತ ಒಂದಷ್ಟು ವಿವರಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲೂ ಬಹಿರಂಗಪಡಿಸಲಾಗಿದೆ. ವಿಶೇಷವಾಗಿ 'ವ್ಯಾಗನ್ಆರ್ ಇವಿ' ಎಂದೇ ಬಣ್ಣಿಸಲಾಗಿರುವ 'ವಿಷನ್ ಇ-ಸ್ಕೈ' ಕಾನ್ಸೆಪ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಹೊಸ ಸುಜುಕಿ ವಿಷನ್ ಇ-ಸ್ಕೈ (Suzuki Vision e-Sky) ಕಾನ್ಸೆಪ್ಟ್ ಕಾರಿನ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 'ವ್ಯಾಗನ್ಆರ್' ಹ್ಯಾಚ್‌ಬ್ಯಾಕ್‌ಗೆ ಬಹುತೇಕ ಹೋಲಿಕೆಯಾಗಲಿದೆ. ನೂತನ ಕಾರು ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 'ಸಿ' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಡಿಆರ್‌ಎಲ್‌ಗಳು & ಟೈಲ್‌ಲೈಟ್‌ಗಳನ್ನು ಹೊಂದಿದೆ. ಇದರೊಂದಿಗೆ ಅಗಲವಾದ ವಿಂಡ್‌ಸ್ಕ್ರೀನ್, ಫ್ಲಾಟ್ ಬಂಪರ್ ಹಾಗೂ ಸ್ಪಾಯ್ಲರ್-ಮೌಂಟೆಡ್ ಸ್ಟಾಪ್ ಲ್ಯಾಂಪ್‌ಗಳನ್ನು ಪಡೆದಿದೆ.

ಈ 'ಸುಜುಕಿ ವಿಷನ್ ಇ-ಸ್ಕೈ' ಕಾನ್ಸೆಪ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಹೆಚ್ಚು ವಿಶಾಲ ಗಾತ್ರದಲ್ಲಿದೆ. 3,395 ಮಿಮೀ ಉದ್ದ, 1,475 ಮಿಮೀ ಅಗಲ ಹಾಗೂ 1,625 ಮಿಮೀ ಎತ್ತರವಿದೆ. ಜೊತೆಗಿದು 5 ಆಸನಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಲು ಸಾಧ್ಯವಾಗಲಿದೆ.
ನೂತನ 'ವಿಷನ್ ಇ-ಸ್ಕೈ' ಕಾರು 20 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಅಥವಾ 25 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ 2 ಬ್ಯಾಟರಿ ಪ್ಯಾಕ್‌ನ್ನು ಹೊಂದಿರುವ ನಿರೀಕ್ಷೆಯಿದೆ. ಸಂಪೂರ್ಣ ಚಾರ್ಜ್‌ನಲ್ಲಿ 270 ರೇಂಜ್ (ಮೈಲೇಜ್) ನೀಡಬಹುದು ಎಂದು ಅಂದಾಜಿಸಲಾಗಿದೆ. 12 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 3-ಸ್ಪೋಕ್ ಸ್ಟೀರಿಂಗ್ ವೀಲ್ ಹಾಗೂ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.
ಮುಂದಿನ ವರ್ಷ (2026) ಹೊಸ 'ಸುಜುಕಿ ವಿಷನ್ ಇ-ಸ್ಕೈ' ಕಾನ್ಸೆಪ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಉತ್ಪಾದನೆಯು ಪ್ರಾರಂಭವಾಗಲಿದೆ. ಮೊದಲಿಗೆ ಜಪಾನ್‌ನಲ್ಲಿ ಮಾರಾಟಕ್ಕೆ ಬರಬಹುದು. ಆ ನಂತರದಲ್ಲಿ ಭಾರತದ ಕಾರು ಮಾರುಕಟ್ಟೆಯಲ್ಲಿ 'ಮಾರುತಿ ಸುಜುಕಿ ವ್ಯಾಗನ್ಆರ್ ಇವಿ' ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಸದ್ಯ ದೇಶೀಯವಾಗಿ ಲಭ್ಯವಿರುವ 'ಮಾರುತಿ ವ್ಯಾಗನ್ಆರ್' ವಿಶೇಷತೆಗಳೇನು:
ಈ ಹ್ಯಾಚ್‌ಬ್ಯಾಕ್ ರೂ.4.99 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮೆಟಾಲಿಕ್ ಮ್ಯಾಗ್ಮಾ ಗ್ರೇ, ಸುಪೀರಿಯರ್ ವೈಟ್ ಹಾಗೂ ಪರ್ಲ್ ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 2435 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.
ನೂತನ ವ್ಯಾಗನ್ಆರ್ ಶಕ್ತಿಶಾಲಿಯಾದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 23 ರಿಂದ 34 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 140 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 12.4 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 5 ಆಸನಗಳನ್ನು ಒಳಗೊಂಡಿದೆ. ಜಾಸ್ತಿ ಲಗೇಜ್ ತೆಗೆದುಕೊಂಡು ಹೋಗಲು 341 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.
ಇದರ ಕ್ಯಾಬಿನ್ ವಿನ್ಯಾಸವು ತುಂಬಾ ಚೆನ್ನಾಗಿದೆ. 7 ಇಂಚಿನಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮ್ಯೂಸಿಕ್ ಸಿಸ್ಟಮ್, ಕೀಲೆಸ್ ಎಂಟ್ರಿ, ಪವರ್ ವಿಂಡೋಗಳು ಹಾಗೂ ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ನ್ನು ಪಡೆದಿದೆ.


Click it and Unblock the Notifications








