Vinfast: ಹೊಸ ಕಾರು ಉತ್ಪಾದನಾ ಸ್ಥಾವರ ಉದ್ಘಾಟಣೆ: ಪಕ್ಕದ ರಾಜ್ಯಕ್ಕೆ 3,500 ಉದ್ಯೋಗವಕಾಶ!
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು (ಆಗಸ್ಟ್ 4, 2025) ತೂತುಕುಡಿಯಲ್ಲಿ ವಿಯೆಟ್ನಾಂ ಮೂಲದ ಕಾರು ತಯಾರಕ ಕಂಪನಿಯ ವಿನ್‌ಫಾಸ್ಟ್ (Vinfast) ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನಾ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಈ ಅತ್ಯಾಧುನಿಕ ಸೌಲಭ್ಯವು ಸಿಪ್ಕಾಟ್ ಕೈಗಾರಿಕಾ ಉದ್ಯಾನವನದಲ್ಲಿದೆ. ರೂ.16,000 ಕೋಟಿ (ಸುಮಾರು $2 ಬಿಲಿಯನ್) ವರೆಗಿನ ಹಂತ ಹಂತದ ಹೂಡಿಕೆಯನ್ನು ಹೊಂದಿದೆ. ಈ ಸ್ಥಾವರವು ವಿಯೆಟ್ನಾಂನ ಹೊರಗೆ ವಿನ್‌ಫಾಸ್ಟ್ ಕಂಪನಿಯ ಮೊದಲ ಉತ್ಪಾದನಾ ಸೌಲಭ್ಯವಾಗಿದ್ದು, ಜಾಗತಿಕವಾಗಿ ಕಂಪನಿಯ ಮೂರನೇ ಕಾರ್ಯಾಚರಣಾ ಸ್ಥಾವರವಾಗಿದೆ.
ಇದು 400 ಎಕರೆ ಜಾಗದಲ್ಲಿ ವ್ಯಾಪಿಸಿದ್ದು, ಆರಂಭದಲ್ಲಿ ವಾರ್ಷಿಕವಾಗಿ 50,000 ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು 1,50,000 ಯೂನಿಟ್ ವಾಹನಗಳಿಗೆ ವಿಸ್ತರಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಈ ಸೌಲಭ್ಯವು ಬಾಡಿ ಶಾಪ್, ಪೇಂಟ್ ಶಾಪ್, ಅಸೆಂಬ್ಲಿ ಶಾಪ್, ಗುಣಮಟ್ಟ ನಿಯಂತ್ರಣ ಕೇಂದ್ರ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಸುಧಾರಿತ ಉತ್ಪಾದನಾ ಮಾರ್ಗಗಳನ್ನು ಒಳಗೊಂಡಿದೆ.

ಆರಂಭದಲ್ಲಿ ಈ ಸ್ಥಾವರದ ಮೂಲಕ ಭಾರತೀಯ ಮತ್ತು ರಫ್ತು ಮಾರುಕಟ್ಟೆಗಳಿಗಾಗಿ ಎರಡು ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಮಾಡಲ್‌ಗಳಾದ - ವಿಎಫ್ 7 ಮತ್ತು ವಿಎಫ್ 6 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಭಾರೀ ಮಟ್ಟದಲ್ಲಿ ಉದ್ಯೋಗಿಗಳು ಬೇಕಿದ್ದು, 3,000 ರಿಂದ 3,500 ನೇರ ಉದ್ಯೋಗ ಮತ್ತು ಸಾವಿರಾರು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ.
ತೂತುಕುಡಿ ಸ್ಥಳವನ್ನು ಅದರ ಕೈಗಾರಿಕಾ ಮೂಲಸೌಕರ್ಯ ಮತ್ತು ಆಳವಾದ ನೀರಿನ ಬಂದರಿಗೆ ಹತ್ತಿರವಿರುವ ಕಾರಣ ಕಾರ್ಯತಂತ್ರದ ಆಯ್ಕೆ ಮಾಡಲಾಗಿದೆ. ಇದು ವಿನ್‌ಫಾಸ್ಟ್‌ಗೆ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ರಫ್ತು ಮಾಡುವ ಕೇಂದ್ರವಾಗಿ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.

ಉದ್ಘಾಟನೆಯು ವಿನ್‌ಫಾಸ್ಟ್‌ನ ಜಾಗತಿಕ ವಿಸ್ತರಣಾ ಕಾರ್ಯತಂತ್ರ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾದ ಭಾರತೀಯ ಮಾರುಕಟ್ಟೆಗೆ ದೀರ್ಘಕಾಲೀನ ಬದ್ಧತೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ವಿನ್‌ಫಾಸ್ಟ್ ತಮಿಳುನಾಡು ಸರ್ಕಾರದ ಸಹಯೋಗದೊಂದಿಗೆ ಸ್ಥಳೀಯ ಪೂರೈಕೆ ಸರಪಳಿ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ ಮತ್ತು ಕಾರ್ಯಪಡೆಯ ಕೌಶಲ್ಯವರ್ಧನೆಯ ಮೇಲೆಯೂ ಗಮನಹರಿಸುತ್ತಿದೆ.
ಕಂಪನಿಯು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದು, 2025 ರ ವೇಳೆಗೆ ಭಾರತದಲ್ಲಿ 2,00,000 ವಾಹನ ಮಾರಾಟ ಮತ್ತು 2030 ರ ವೇಳೆಗೆ ವಾರ್ಷಿಕವಾಗಿ 1 ಮಿಲಿಯನ್ (ಹತ್ತು ಲಕ್ಷ) ವಾಹನಗಳ ಉತ್ಪಾದನಾ ಗುರಿಯನ್ನು ಹೊಂದಿದೆ. ತೂತುಕುಡಿಯ ಸ್ಥಳವು ಭಾರತದಲ್ಲಿ ಶೋರೂಂಗಳು, ಮಾರಾಟದ ನಂತರದ ಸೇವೆ, ಡಿಜಿಟಲ್ ಸೇವೆಗಳು ಮತ್ತು ಬ್ಯಾಟರಿ ಮರುಬಳಕೆ ಪಾಲುದಾರಿಕೆಗಳನ್ನು ಒಳಗೊಂಡಂತೆ ದೃಢವಾದ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ.

ಈ ಉದ್ಘಾಟನೆಯು ತಮಿಳುನಾಡಿನ ಆಟೋಮೋಟಿವ್ ಮತ್ತು ಇವಿ ರಂಗಕ್ಕೆ ಚೈತನ್ಯ ತುಂಬುವುದಲ್ಲದೆ, ತೂತುಕುಡಿಯನ್ನು ದಕ್ಷಿಣ ಏಷ್ಯಾದ ಭವಿಷ್ಯದ ಇವಿ ರಾಜಧಾನಿಯಾಗಿ ಬದಲಿಸಲಿದೆ. ಇದು ಆಟೋಮೋಟಿವ್ ಉತ್ಪಾದನಾ ವಲಯದಲ್ಲಿ ತಮಿಳುನಾಡಿನ ನಾಯಕತ್ವವನ್ನು ಬಲಪಡಿಸುತ್ತದೆ. ಮುಂಬರುವ ವರ್ಷಗಳಲ್ಲಿ ಕಂಪನಿಯ ಕಾರುಗಳು ದೇಶಾದ್ಯಂತ ಸದ್ದು ಮಾಡಲಿವೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಒಟ್ಟಾರೆ ಉದ್ಘಾಟನಾ ಸಮಾರಂಭವು ಆಟೋಮೋಟಿವ್ ಮತ್ತು ಇವಿ ಉತ್ಪಾದನಾ ಕೇಂದ್ರವಾಗಿ ತಮಿಳುನಾಡಿನ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇದು ಆರ್ಥಿಕ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಯನ್ನು ಬೆಂಬಲಿಸುತ್ತದೆ. ಈ ಮೈಲಿಗಲ್ಲು ವಿನ್‌ಫಾಸ್ಟ್‌ನ ಜಾಗತಿಕ ವಿಸ್ತರಣೆಯಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಇವಿ ವಲಯದಲ್ಲಿ ತಮಿಳುನಾಡಿನ ಸ್ಥಾನವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.


Click it and Unblock the Notifications








