VinFast: ಭಾರತದಲ್ಲಿ ಹೊಸ ಕಾರು ಕಂಪನಿಯ ಒಪ್ಪಂದ: ಶೀಘ್ರದಲ್ಲೆ ಅಗ್ಗದ ಎಸ್‌ಯುವಿಗಳ ಬಿಡುಗಡೆ
ಭಾರತಕ್ಕೆ ಇತ್ತೀಚೆಗೆ ಎಂಟ್ರಿ ಕೊಟ್ಟಿರುವ ವಿಯೆಟ್ನಾಂ ಮೂಲದ ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ 'ವಿನ್‌ಫಾಸ್ಟ್' (VinFast) ದೇಶದಲ್ಲಿ ತನ್ನ ವಾಹನಗಳನ್ನು ಬಿಡುಗಡೆ ಮಾಡಲು ವೇಗವನ್ನು ಹೆಚ್ಚಿಸಿದೆ. ಪ್ರಮುಖ ಇವಿ ಚಾರ್ಜಿಂಗ್ ಮತ್ತು ಮಾರಾಟ ನಂತರದ ಪರಿಹಾರ ಪೂರೈಕೆದಾರ ಕಂಪನಿಯಾಗಿರುವ ರೋಡ್‌ಗ್ರಿಡ್ (RoadGrid) ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಪಾಲುದಾರಿಕೆಯ ಮೂಲಕ, ವಿನ್‌ಫಾಸ್ಟ್ ಭಾರತದಾದ್ಯಂತ ತನ್ನ ಸರ್ವಿಸ್ ಮತ್ತು ಚಾರ್ಜಿಂಗ್ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ನಿರಂತರವಾಗಿ ಬ್ರಾಂಡ್ ಅನ್ನು ವಿಸ್ತರಣೆ ಮಾಡಿದ ಬಳಿಕ ಕಾರುಗಳನ್ನು ಬಿಡುಗಡೆ ಮಾಡಿ ಬಲವಾದ ಅಡಿಪಾಯವನ್ನು ಹಾಕುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ಹೇಳಿದೆ.
ಭಾರತದಲ್ಲಿ ಇವಿ ಚಾರ್ಜಿಂಗ್ ಮತ್ತು ಮಾರಾಟದ ನಂತರದ ಸರ್ವಿಸ್ ನೀಡುವಲ್ಲಿ ಜನಪ್ರಿಯವಾಗಿರುವ ರೋಡ್‌ಗ್ರಿಡ್, ದೇಶಾದ್ಯಂತ ಎಲೆಕ್ಟ್ರಿಕ್ ವಾಹನ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಸ್ಮಾರ್ಟ್ ಮತ್ತು ಸ್ಕೇಲೆಬಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಬಹು ನಗರಗಳಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ, ರೋಡ್‌ಗ್ರಿಡ್ ಕಂಪನಿಯು ಸುಧಾರಿತ ಚಾರ್ಜಿಂಗ್ ಮೂಲಸೌಕರ್ಯವನ್ನು ನೀಡಲಿದೆ.

ಇತ್ತ ವಿನ್‌ಫಾಸ್ಟ್ ಕೂಡ ತನ್ನ ಕಾರುಗಳ ಬಿಡುಗಡೆ ನಂತರ ಗ್ರಾಹಕರ ಸರ್ವಿಸ್ ಅನುಭವಗಳನ್ನು ಹೆಚ್ಚಿಸುವ ಸಲುವಾಗಿ, ಭಾರತದಾದ್ಯಂತ ತನ್ನ ಮಾರಾಟದ ನಂತರದ ಕಾರ್ಯಾಚರಣೆಗಳನ್ನು ಹೆಚ್ಚಿಸಲು ರೋಡ್‌ಗ್ರಿಡ್ ಮಾತ್ರವಲ್ಲದೆ ಹಲವು ಸರ್ವಿಸ್ ಪೂರೈಕೆದಾರರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದು EV ಮಾಲೀಕರು ಮತ್ತು ಫ್ಲೀಟ್ ನಿರ್ವಾಹಕರಿಗೆ ಸುಗಮ ಮತ್ತು ಪರಿಣಾಮಕಾರಿ ಅನುಭವವನ್ನು ನೀಡುತ್ತದೆ.
ಒಂದೆಡೆ ವಿನ್‌ಫಾಸ್ಟ್ ಭಾರತದಲ್ಲಿ ತನ್ನ ಮುಂಬರುವ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಲೇ, ತನ್ನ ಗ್ರಾಹಕರಿಗೆ ರಾಷ್ಟ್ರವ್ಯಾಪಿ ಪ್ರವೇಶ, ವಿಶ್ವಾಸಾರ್ಹತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಬಲವಾದ ಅಡಿಪಾಯವನ್ನು ಹಾಕುತ್ತಿದೆ. ರೋಡ್‌ಗ್ರಿಡ್‌ನೊಂದಿಗಿನ ಪಾಲುದಾರಿಕೆಯು ಈ ಪ್ರಯತ್ನದ ಒಂದು ಭಾಗವಾಗಿದೆ ಎಂದು ವಿನ್‌ಫಾಸ್ಟ್ ತಿಳಿಸಿದೆ.

ವಿನ್‌ಫಾಸ್ಟ್ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಗಳಾದ ವಿಎಫ್ 7 (VF 7) ಮತ್ತು ವಿಎಫ್ 6 (VF 6) ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿರುವುದರಿಂದ, ಈ ಪಾಲುದಾರಿಕೆಯು ದೇಶಾದ್ಯಂತ ತ್ವರಿತ, ವಿಶ್ವಾಸಾರ್ಹ ಮತ್ತು ಗ್ರಾಹಕ - ಕೇಂದ್ರಿತ ಬೆಂಬಲವನ್ನು ಖಚಿತಪಡಿಸಿಕೊಳ್ಳುವ ಬ್ರ್ಯಾಂಡ್‌ನ ಬದ್ಧತೆಯನ್ನು ಒತ್ತಿಹೇಳುತ್ತದೆ.
ವಿನ್‌ಫಾಸ್ಟ್ ಕಾರುಗಳ ವಿಶೇಷತೆಗಳು
ವಿನ್‌ಫಾಸ್ಟ್ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಮಾಡಲ್‌ಗಳಾದ ವಿಎಫ್ 7 ಮತ್ತು ವಿಎಫ್ 6 ಅನ್ನು ಮೊದಲು ಬಿಡುಗಡೆ ಮಾಡಲಿದೆ. ಈ ವರ್ಷದ ಆರಂಭದಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಕಾರುಗಳನ್ನು ಪ್ರದರ್ಶನ ಮಾಡಲಾಗಿತ್ತು. ಈ ಎರಡೂ ಎಸ್‌ಯುವಿಗಳು ಸೊಗಸಾದ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿವೆ. ಇವುಗಳ ನಂತರ ಇನ್ನೂ ಹಲವು ಎಲೆಕ್ಟ್ರಿಕ್ ಎಸ್‌ಯುವಿಗಳು ಒಂದೊಂದಾಗಿ ಬಿಡುಗಡೆಯಾಗಲಿವೆ.

ಎರಡೂ ಪ್ರೀಮಿಯಂ ಮಾದರಿಗಳು ಬ್ರ್ಯಾಂಡ್‌ನ ವಿಶಿಷ್ಟವಾದ V - ಆಕಾರದ LED ಲೈಟ್ ಸ್ಟ್ರಿಪ್, ಪನೋರಮಿಕ್ ಸನ್‌ರೂಫ್, ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ ಡ್ರೈವರ್-ಕೇಂದ್ರಿತ ಕಾಕ್‌ಪಿಟ್ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಅನ್ನು ಒಳಗೊಂಡಿವೆ. ಈ ಎಲೆಕ್ಟ್ರಿಕ್ ಎಸ್‌ಯುವಿಗಳು ವರ್ಷಾಂತ್ಯದೊಳಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.
ವಿಯೆಟ್ನಾಂನ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ವಿಂಗ್‌ಗ್ರೂಪ್ JSC ಯ ಅಂಗಸಂಸ್ಥೆಯಾದ ವಿನ್‌ಫಾಸ್ಟ್, ವ್ಯಾಪಕ ಶ್ರೇಣಿಯ ಎಲೆಕ್ಟ್ರಿಕ್ ಎಸ್‌ಯುವಿಗಳು, ಇ - ಸ್ಕೂಟರ್‌ಗಳು ಮತ್ತು ಇ - ಬಸ್‌ಗಳನ್ನು ಜಾಗತಿಕವಾಗಿ ಮಾರಾಟ ಮಾಡುತ್ತದೆ. ಇದೀಗ ಭಾರತಕ್ಕೆ ಎಂಟ್ರಿಕೊಟ್ಟಿದ್ದು, ಶೀಘ್ರದಲ್ಲೆ ತನ್ನ ಕಾರುಗಳನ್ನು ಬಿಡುಗಡೆ ಮಾಡಲಿದೆ.


Click it and Unblock the Notifications








