ಭಾರತಕ್ಕೂ ಬರುತ್ತಾ ದಟ್ಸನ್ ಗೊ ಬಜೆಟ್ ಸೆಡಾನ್ ಕಾರು?
ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಗೊ ಸಣ್ಣ ಕಾರನ್ನು ಪರಿಚಯಿಸಿರುವ ಜಪಾನ್ ಮೂಲದ ದಟ್ಸನ್ ವಾಹನ ತಯಾರಕ ಸಂಸ್ಥೆಯು ದೇಶೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಿದೆ.
ದಟ್ಸನ್ ಗೊ ಟೆಸ್ಟ್ ಡ್ರೈವ್ ವರದಿ ಓದಲು ಮರೆಯದಿರಿ
ಸಂಸ್ಥೆಯು ಈ ಮೊದಲೇ ಘೋಷಿಸಿರುವಂತೆಯೇ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಗೊ ಪ್ಲಸ್ ಎಂಪಿವಿ ಕಾರು ಹಿಂಬಾಲಿಸಲಿದೆ. ಈ ನಡುವೆ ದಟ್ಸನ್ ನೂತನ ಸೆಡಾನ್ ಕಾರೊಂದನ್ನು ಪರಿಚಯಿಸಿರುವುದು ಕಾರು ಪ್ರಿಯರಲ್ಲಿ ಇನ್ನಷ್ಟು ಕುತೂಹಲಕ್ಕೆ ಎಡೆಮಾಟ್ಟಿಕೊಟ್ಟಿದೆ. ಹೌದು, ರಷ್ಯಾ ವರ್ಷನ್ ಆನ್-ಡು (on-Do) ಸೆಡಾನ್ ಕಾರನ್ನು ದಟ್ಸನ್ ಅನಾವರಣಗೊಳಿಸಲಿದೆ. ಇದು ಸದ್ಯದಲ್ಲೇ ರಷ್ಯಾ ಮಾರುಕಟ್ಟೆ ಪ್ರವೇಶಿಸಲಿದ್ದು, ನಿಕಟ ಭವಿಷ್ಯದಲ್ಲೇ ಭಾರತವನ್ನು ಪ್ರವೇಶಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

1.6 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ದಟ್ಸನ್ ಆನ್ ಡು ಸೆಡಾನ್ ಕಾರು ರಷ್ಯಾದಲ್ಲಿ 6.8 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಆದರೆ ಭಾರತದಲ್ಲಿ ಬಿಡುಗಡೆಯಾಗುವಾಗ ದೇಶದ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ದರ ನಿಗದಿಯಾಗುವ ಸಾಧ್ಯತೆಯಿದೆ.

ಇದು 4337 ಎಂಎಂ ಉದ್ದ, 1700 ಎಂಎಂ ಅಗಲ ಮತ್ತು 1500 ಎಂಎಂ ಎತ್ತರ ಹೊಂದಿರಲಿದೆ. ಈ ಮೂಲಕ ರಷ್ಯಾವು ದಟ್ಸನ್, ನಿಸ್ಸಾನ್ ಹಾಗೂ ಇನ್ಫಿನಿಟಿಗಳೆಂಬ ಎಲ್ಲ ಮೂರು ಬ್ರಾಂಡ್ ಹೊಂದಿರುವ ಜಗತ್ತಿನ ಏಕೈಕ ದೇಶ ಎನಿಸಿಕೊಂಡಿದೆ.

ಕಾರಿನೊಳಗೂ ಆಧುನಿಕತೆಯ ಸ್ಟೈಲಿಷ್ ಡ್ಯಾಶ್‌ಬೋರ್ಡ್ ಪಡೆದುಕೊಂಡಿದೆ. ಇದರಲ್ಲಿರುವ ಆನ್ ಬೋರ್ಡ್ ಕಂಪ್ಯೂಟರ್ ಮೂಲಕ ಮೈಲೇಜ್, ತಾಪಮಾನ, ಇಂಧನ ಕ್ಷಮತೆ, ಸರಾಸರಿ ವೇಗ ಇನ್ನಿತ್ತರ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ದಟ್ಸನ್ ಆನ್ ಡು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ದೀರ್ಫ ಪಯಣದಲ್ಲೂ ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ.

ಇನ್ನು 530 ಲೀಟರ್ ಬೂಟ್ ಸ್ಪೇಸ್ ಸಹ ದಟ್ಸನ್ ಸೆಡಾನ್ ಕಾರು ಹೊಂದಿದ್ದು, ಹೆಚ್ಚಿನ ಲಗ್ಗೇಜ್ ಹೊತ್ತೊಯ್ಯಲು ನೆರವಾಗಲಿದೆ.

ಸಂಸ್ಥೆಯು ತಿಳಿಸುವಂತೆಯೇ ಡು ಎಂಬುದು ಇಲ್ಲಿ 'ಹಾದಿ' ಹಾಗೂ 'ಚಲಿಸು' ಎಂಬುದನ್ನು ಸೂಚಿಸುತ್ತದೆ. ಹಾಗೆಯೇ ಆನ್ ಎಂಬುದು ಕಾರಿನ 'ಶಕ್ತಿ', 'ನಿರ್ವಹಣೆ'ಯ ಸಂಕೇತವಾಗಿದೆ.

ಚಿತ್ರದಲ್ಲಿ ನೀವೇ ನೋಡುತ್ತಿರುವಂತೆಯೇ ದಟ್ಸನ್ ಸೆಡಾನ್ ಕಾರು ತನ್ನ ಮೂಲ ಗೊ ಹ್ಯಾಚ್‌ಬ್ಯಾಕ್ ಕಾರಿಗೆ ಸಾಮ್ಯತೆಯನ್ನು ಪಡೆದುಕೊಂಡಿದೆ. ಒಟ್ಟಿನಲ್ಲಿ ಆಕರ್ಷಕ ವಿನ್ಯಾಸ ಕಾಪಾಡಿಕೊಂಡಿದೆ.

ಈ ಐದು ಬಾಗಿಲಿನ ಐದು ಸೀಟಿನ ಕಾರಿನಲ್ಲಿರುವ 1.6 ಲೀಟರ್ ಪೆಟ್ರೋಲ್ ಎಂಜಿನ್ 87 ಅಶ್ವಶಕ್ತಿ ಉತ್ಪಾದಿಸಲಿದೆ ಎಂಬುದು ಗಮನಾರ್ಹವಾಗಿದೆ.

ಸದ್ಯ ಜಾಗತಿಕವಾಗಿ ರಷ್ಯಾ ಐದನೇ ಅತಿದೊಡ್ಡ ಮಾರುಕಟ್ಟೆ ಎನಿಸಿಕೊಂಡಿದೆ. ಇದರಂತೆ ಮುಂದಿನ ಮೂರು ವರ್ಷಗಳಲ್ಲಿ ಮಾರಾಟವನ್ನು ಮೂರು ಪಟ್ಟು ಹೆಚ್ಚುಗೊಳಿಸುವುದು ದಟ್ಸನ್ ಗುರಿಯಾಗಿರಲಿದೆ.

ಒಟ್ಟಾರೆಯಾಗಿ ಭಾರತೀಯ ಗ್ರಾಹಕರು ಸಹ ದಟ್ಸನ್ ಆನ್ ಡು ಸೆಡಾನ್ ಕಾರನ್ನು ನಿರೀಕ್ಷಿಸಬಹುದಾಗಿದೆ.

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ದೇಶದ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಹಾಗಾಗಿ ನಾಲ್ಕು ಮೀಟರ್ ಉದ್ದ ಪರಿಮಿತಿಯನ್ನು ಕಾಪಾಡಿಕೊಳ್ಳುವಲ್ಲಿ ಸಾಧ್ಯವಾದ್ದಲ್ಲಿ ಹೋಂಡಾ ಅಮೇಜ್, ಮಾರುತಿ ಸ್ವಿಫ್ಟ್ ಡಿಜೈರ್ ಹಾಗೂ ಈಗಷ್ಟೇ ಬಿಡುಗಡೆಯಾಗಿರುವ ಹ್ಯುಂಡೈ ಎಕ್ಸ್‌ಸೆಂಟ್ ಕಾರುಗಳಿಗೆ ದಟ್ಸನ್ ಪೈಪೋಟಿ ಒಡ್ಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದೀಗ ನೂತನವಾಗಿ ದೇಶಕ್ಕೆ ಪರಿಚಯವಾಗಿರುವ ದಟ್ಸನ್ ಬ್ರಾಂಡ್ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








