ದೆಹಲಿ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿರುವ 2015 ಫೋರ್ಡ್ ಫಿಗೊ
ಕಳೆದ ದಿನವಷ್ಟೇ ಫೋರ್ಡ್ ಫಿಗೊ ಸೆಡಾನ್ ಕಾರು ಆಗಮನವಾಗುವುದರ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದರ ಬೆನ್ನಲ್ಲೇ ಇನ್ನೊಂದು ಸಿಹಿ ಸುದ್ದಿ ವಾಹನ ಪ್ರೇಮಿಗಳನ್ನು ಹರಸಿಕೊಂಡು ಬಂದಿದ್ದು, ಎಲ್ಲ ಹೊಸತನದಿಂದ ಕೂಡಿದ 2015 ಫೋರ್ಡ್ ಫಿಗೊ
ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.
ಈ ಹಿಂದೆ 2012ರಲ್ಲಿ ಫೇಸ್ ಲಿಫ್ಟ್ ವರ್ಷನ್ ಪರಿಚಯಿಸಿದ್ದರೂ ಫಿಗೊ ಮಾರಾಟ ಹುರಿದುಂಬಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕಂಪನಿಯು ನೂತನ ಫಿಗೊ ಕಾರನ್ನು ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.
ದಕ್ಷಿಣ ಅಮೆರಿಕ ಸೇರಿದಂತೆ ಇತರೆಲ್ಲ ಜಾಗತಿಕ ಮಾರುಕಟ್ಟೆಯಲ್ಲಿ ಕೆಎ (Ka) ಎಂದು ಅರಿಯಲ್ಪಡುವ ಫೋರ್ಡ್ ಫಿಗೊ ಬ್ರೆಜಿಲ್‌ನಲ್ಲಿ ಅನಾವರಣಗೊಂಡಿರುವ ಕಾನ್ಸೆಪ್ಟ್ ಮಾಡೆಲ್ ಆಗಿದೆ. ಪ್ರಸ್ತುತ ಮುಂದಿನ ತಲೆಮಾರಿನ 2015 ಫಿಗೊ ಭಾರತ ಮಾರುಕಟ್ಟೆ ಪ್ರವೇಶಿಸುವ ತವಕದಲ್ಲಿದೆ.

2015 ಫೋರ್ಡ್ ಫಿಗೊ, ಜಾಗತಿಕ ವಿನ್ಯಾಸದ ತಂತ್ರವನ್ನು ಅನುಸರಿಸಲಿದೆ. ಇದು ಮುಂಭಾಗದಲ್ಲಿ ಇಕೊಸ್ಪೋರ್ಟ್‌ನಂತಹ ಗ್ರಿಲ್ ಪಡೆಯಲಿದೆ. ಪರಿಷ್ಕೃತ ಹೆಡ್ ಲ್ಯಾಂಪ್, ಎಲ್‌ಇಡಿ, ಹೊಸ ಬಂಪರ್ ಹಾಗೂ ಟೈಲ್ ಲ್ಯಾಂಪ್ ಆಕರ್ಷಕವೆನಿಸಲಿದೆ.

ನೂತನ ಫೋರ್ಡ್ ಫಿಗೊ ಬಿ563 ಎಂಬ ಕೋಡ್ ಪಡೆದುಕೊಂಡಿದೆ. ಅಂದರೆ ಬಿ2ಇ ಫ್ಲ್ಯಾಟ್ ಫಾರ್ಮ್‌ನಲ್ಲಿ ತಯಾರಿಯಾಗಲಿದ್ದು, ಇಕೊಸ್ಪೋರ್ಟ್ ಜತೆ ಹಂಚಿಕೊಳ್ಳಲಿದೆ. ಇದೇ ತಲಹದಿಯಲ್ಲಿ ರೂಪುಗೊಳ್ಳುತ್ತಿರುವ ಫಿಗೊ ಸೆಡಾನ್ ಕಾರು ಫೋರ್ಡ್ ಕ್ಲಾಸಿಕ್‌ಗೆ ಬದಲಿಯಾಗಿರಲಿದೆ.

ಇನ್ನು ಎಂಜಿನ್ ಮಾನದಂಡಗಳಲ್ಲೂ ಮಹತ್ವದ ಬದಲಾವಣೆ ಕಂಡುಬರಲಿದೆ. ಇದು ನೂತನ 1.0 ಲೀಟರ್ ಇಕೊಸ್ಪೋರ್ಟ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಟಿಡಿಸಿಐ ಟರ್ಬೊ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಅಂದ ಹಾಗೆ ಗುಜರಾತ್‌ನ ಮುಂಬರುವ ಸನಂದ್ ಘಟಕದಲ್ಲಿ 2015 ಫೋರ್ಡ್ ಫಿಗೊ ನಿರ್ಮಾಣವಾಗಲಿದೆ. ಸ್ಮರ್ಧಾತ್ಮಕ ದರ, ಆಧುನಿಕ ವಿನ್ಯಾಸವು ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೊಸ ಕ್ರಾಂತಿ ಮೂಡಿಸಲು ಫೋರ್ಡ್‌ಗೆ ನೆರವಾಗಲಿದೆ.


Click it and Unblock the Notifications








