ನಿಮ್ಮ ಕನಸಿನ ಕಾರು ಮಹೀಂದ್ರ ಎಕ್ಸ್‌ಯುವಿ 11 ಲಕ್ಷಕ್ಕೆ ಲಭ್ಯ?
ಮಹೀಂದ್ರ ಎಕ್ಸ್‌ಯುವಿ500 ನಿಮ್ಮ ಕನಸಿನ ಕಾರೇ? ಬೆಲೆ ದುಬಾರಿಯಾಗಿರುವುದರಿಂದ ಈ ಎಸ್‌ಯುವಿ ಸ್ಪೆಷಲಿಸ್ಟ್ ಕಾರನ್ನು ಖರೀದಿಸುವುದರಿಂದ ವಂಚಿತರಾಗಿದ್ದೀರಾ? ಹಾಗಿದ್ದರೆ ಇನ್ನು ಚಿಂತೆ ಬೇಡ ಬಿಡಿ. ಯಾಕೆಂದರೆ ಮಹೀಂದ್ರ ಎಕ್ಸ್‌ಯುವಿ500 ಸದ್ಯದಲ್ಲೇ 11 ಲಕ್ಷ ರು.ಗಳಿಗೆ ದೊರಕಲಿದೆ.
ಅದೇಗೆ ಅಂತೀರಾ? ದೇಶದ ಎಸ್‌ಯುವಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರಾಬಲ್ಯ ಹೊಂದಿರುವ ಮಹೀಂದ್ರ, 10.99 ಲಕ್ಷ ರು.ಗಳಿಗೆ ನೂತನ ಡಬ್ಲ್ಯು4 ಬೇಸ್ ವೆರಿಯಂಟ್ ಮಾರುಕಟ್ಟೆಗೆ ಪರಿಚಯಿಸಲು ಯೋಜನೆ ಹೊಂದಿದೆ.
ಇದರೊಂದಿಗೆ ಈ ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬಹುದಾಗಿದೆ. ಇದು ಡಬ್ಲ್ಯು6 ವೆರಿಯಂಟ್‌ಗಿಂತಲೂ ಸರಿ ಸುಮಾರು ಒಂದು ಲಕ್ಷದಷ್ಟು ಅಗ್ಗದ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕಲಿದೆ.

ಸಹಜವಾಗಿಯೇ ಬೆಲೆ ಕಡಿತವಾಗುವುದರಿಂತ ಡಬ್ಲ್ಯು6 ಹಾಗೂ ಡಬ್ಲ್ಯು8 ಆವೃತ್ತಿಗಳಲ್ಲಿ ಲಭ್ಯವಾಗುವ ಕೆಲವೊಂದು ಆಕರ್ಷಕ ಫೀಚರ್ಸ್‌ಗಳಲ್ಲಿ ಕತ್ತರಿ ಪ್ರಯೋಗವಾಗಲಿದೆ.

ಹಾಗಿದ್ದರೂ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಯಾಕೆಂದರೆ ಇದರ ವಿನ್ಯಾಸವೇ ಮಹೀಂದ್ರ ಎಕ್ಸ್‌ಯುವಿ500 ಕಾರಿನ ಯಶಸ್ಸಿನ ರಹಸ್ಯ ಎಂಬದನ್ನು ಕಂಪನಿ ಮರೆತಿಲ್ಲ.

ಅಷ್ಟೇ ಯಾಕೆ ಮಹೀಂದ್ರ ಎಕ್ಸ್‌ಯುವಿ500ನಲ್ಲಿ ಕಂಡುಬಂದಿರುವ ತೊಂದರೆಯನ್ನು ನಿವಾರಿಸುವ ಪ್ರಯತ್ನವನ್ನು ಮಾಡಲಾಗಿದೆ. ಉದಾಹರಣೆಗೆ ಇದರ ಬ್ರೇಕಿಂಗ್ ಸಿಸ್ಟಂ ಸಮಸ್ಯೆಯ್ನನು ಬಗೆ ಹರಿಸಲಾಗಿದೆ. ಹಾಗೆಯೇ ಕ್ಲಚ್ ನಿರ್ವಹಣೆಯಲ್ಲಿ ಸುಧಾರಣೆ ತರಲಾಗಿದೆ.

ಅಂದ ಹಾಗೆ ಡಬ್ಲ್ಯು6 ರೀತಿಯಲ್ಲೇ ಡಬ್ಲ್ಯು4 ಆವೃತ್ತಿ ಸಹ 2 ವೀಲ್ ಡ್ರೈವ್ ಆಗಿರಲಿದೆ. ಇದು ಬೇಸಿಕ್ ಮಾಹಿತಿ ಸಿಸ್ಟಂ ಜತೆ ನಾಲ್ಕು ಸ್ಪೀಕರುಗಳು, ಸಿಡಿ, ಎಂಪಿ3, ಟಚ್ ಸ್ಕ್ರೀನ್ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಹಾಗಿದ್ದರೂ ಮಳೆ ಸೆನ್ಸಿಂಗ್ ವೈಪರ್, ಆಟೋಮ್ಯಾಟಿಕ್ ಕಾರ್ನರಿಂಗ್ ಹೆಡ್‌ಲ್ಯಾಂಪ್, ಫ್ರಂಟ್ ಫಾಗ್ ಲ್ಯಾಂಪ್, ಟೆಲಿಸ್ಕಾಪಿಕ್, ಸ್ಟೀರಿಂಗ್ ಹೊಂದಾಣಿಕೆ, ಆಟೋಮ್ಯಾಟಿಕ್ ಕ್ಲೈಮೇಟ್ ಮಿರರ್, ಕ್ರೂಸ್ ಕಂಟ್ರೋಲ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳಂತ ಸೌಲಭ್ಯಗಳನ್ನು ಮಿಸ್ ಮಾಡಿಕೊಳ್ಳಲಿದೆ.

ಆದರೆ ಚಿಂತೆ ಬೇಡ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಪಾರ್ಕಿಂಗ್ ಲ್ಯಾಂಪ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜತೆ ಇಬಿಡಿ, ಡಿಸ್ಕ್ ಬ್ರೇಕ್, ಡ್ಯುಯಲ್ ಟೋನ್ ಇಂಟಿರಿಯರ್, ಹೊಂದಾಣಿಸಬಹುದಾದ ಸ್ಟೀರಿಂಗ್, ಆರು ರೀತಿಯಲ್ಲಿ ಹೊಂದಾಣಿಸಬಹುದಾದ ಚಾಲಕನ ಸೀಟು ಮತ್ತು ರಿಮೋಟ್ ಸೆಂಟ್ರಲ್ ಲಾಕಿಂಗ್ ಸಿಸ್ಟಂ ನಿಮ್ಮ ಕಾರನ್ನು ಹೆಚ್ಚು ಆಕರ್ಷಕವಾಗಿಸಲಿದೆ.

ಇದು 140 ಅಶ್ವಶಕ್ತಿ ಉತ್ಪಾದಿಸುವ 2.2 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಈ ಮೂಲಕ ಬೆಲೆ ವಿಚಾರದಲ್ಲಿ ರನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊಗೆ ನೇರ ಪ್ರತಿಸ್ಪರ್ಧಿ ಎನಿಸಿಕೊಳ್ಳಳಿದೆ.

ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಲಗ್ಗೆಯಿಟ್ಟಿರುವ ಕಾಂಪಾಕ್ಟ್ ಎಸ್‌ಯುವಿಗಳಾದ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊ ಮಹೀಂದ್ರ ಮಾರಾಟವನ್ನು ಕೊಳ್ಳೆ ಹೊಡೆಯುತ್ತಿದೆ. ಇದರಿಂದಾಗಿ ಮಹೀಂದ್ರ ಎಕ್ಸ್‌ಯುವಿ500 ನೂತನ ತಂತ್ರವನ್ನು ಅನುಸರಿಸುವ ಸಾಧ್ಯತೆಗಳಿವೆ.


Click it and Unblock the Notifications








