ನ್ಯಾನೋಗೆ ಕಳಂಕ ತಂದ 'ಅಗ್ಗದ ಕಾರು' ಪಟ್ಟ
ವಿಶ್ವದ ಅತಿ ಅಗ್ಗದ ಕಾರೆಂಬ ಪಟ್ಟ ಗಿಟ್ಟಿಸಿಕೊಂಡಿದ್ದ ಟಾಟಾ ನ್ಯಾನೋ ಇತ್ತೀಚೆಗಿನ ಕೆಲವು ತಿಂಗಳುಗಳಿಂದ ನಿರೀಕ್ಷಿಸಿದಷ್ಟು ಮಾರಾಟ ಗಿಟ್ಟಿಸಿಕೊಳ್ಳಲು ವಿಫಲವಾಗುತ್ತಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಮಾಜಿ ಮುಖ್ಯಸ್ಥ ರತನ್ ಟಾಟಾ, 'ಅಗ್ಗದ ಕಾರೆಂಬ' ಪಟ್ಟವೇ ನ್ಯಾನೋಗೆ ಮುಳುವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
2009ನೇ ಇಸವಿಯಲ್ಲಿ ಮೊದಲ ಬಾರಿ ಲಾಂಚ್ ಆಗಿದ್ದ ಟಾಟಾ ನ್ಯಾನೋ ಸೂತ್ರಧಾರಿ ಎನಿಸಿಕೊಂಡಿರುವ ರತನ್ ಟಾಟಾ, ದೇಶಕ್ಕೆ ಅಗ್ಗದ ಕಾರನ್ನು ಪರಿಚಯಿಸುವ ಯೋಜನೆ ಹೊಂದಿದ್ದರು. ಕುಟುಂಬ ಸಮೇತ ಸವಾರಿ ಮಾಡುವ ದ್ವಿಚಕ್ರ ಸವಾರರನ್ನು ಮುಟ್ಟುವುದು ಅವರ ಇರಾದೆಯಾಗಿತ್ತು. ಆದರೆ ಬರ ಬರುತ್ತಾ 'ರಾಯರ ಕುದುರೆ ಕತ್ತೆಯಾದ ಹಾಗೆ' ಎಂಬಂತೆ ನ್ಯಾನೋ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ.

ನ್ಯಾನೋ ವೈಫಲ್ಯಕ್ಕೆ ಕಾರಣಗಳು ಹಲವಿದ್ದವು. ಒಬ್ಬ ಯಾತ್ರಿಕನಾಗಿ ನ್ಯಾನೋದಲ್ಲಿ ಸಂಚರಿಸುವಾಗ ಕಾರಿನ ಅನುಭವ ಭಾಸವಾಗುತ್ತಿಲ್ಲ ಎಂಬ ವಿಚಾರ ಒಂದೆಡೆಯಾದರೆ ಇದರ ವಿನ್ಯಾಸ ಹಲವರ ಅತೃಪ್ತಿಗೆ ಕಾರಣವಾಗಿತ್ತು. ಹಾಗೆಯೇ ಕ್ಯಾಬಿನ್ ಸ್ಪೇಸ್ ಬಗ್ಗೆಯೂ ತಗಾದೆಗಳು ಎದ್ದಿವೆ.

ಈ ಎಲ್ಲ ವಿಚಾರಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನದಲ್ಲಿರುವ ಟಾಟಾ ಮೋಟಾರ್ಸ್, ಆಲ್ ನ್ಯೂ ನ್ಯಾನೋ ಕಾರನ್ನು ಇಂಡೋನೇಷ್ಯಾ ಮಾರುಕಟ್ಟೆಗೆ ಪರಿಚಯಿಸಲಿದೆ. ಇದು ಮುಂದಿನ ದಿನಗಳಲ್ಲಿ ಭಾರತವನ್ನು ಪ್ರವೇಶಿಸಲಿದೆ.

ಎಲ್ಲ ಅರ್ಥದಲ್ಲೂ ನೂತನ ಕಾರು ಜನರ ಅವಶ್ಯಕತೆಗಳನ್ನು ಪೂರೈಸಲಿದೆ ಎಂದು ರತನ್ ಟಾಟಾ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಅಗ್ಗದ ಕಾರೆಂಬ ಕಳಂಕವನ್ನು ದೂರ ಮಾಡುವ ಪ್ರಯತ್ನ ಮಾಡಲಿದೆ.

ನ್ಯಾನೋ ಬಗ್ಗೆ ಪ್ರತಿಕ್ರಿಯಿಸಿರುವ ರತನ್ ಟಾಟಾ, ದೇಶದ ಹೊರಗಡೆ ನ್ಯಾನೋ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಂಡಿದೆ. ಹಾಗೆಯೇ ಪರಿಷ್ಕೃತ ಕಾರಿನಲ್ಲಿ ಕೆಲವೊಂದು ಬದಲಾವಣೆ ಕಂಡುಬರಲಿದೆ. ಒಟ್ಟಿನಲ್ಲಿ ನ್ಯಾನೋ ಮರು ಲಾಂಚ್ ಮಾಡುವ ಯೋಜನೆಯಲ್ಲಿದ್ದೇವೆ ಎಂದಿದ್ದಾರೆ.

ನ್ಯಾನೋ ಮಾರುಕಟ್ಟೆ ಪ್ರವೇಶಿಸುವಾಗ ಅಗ್ಗದ ಕಾರೆಂದು ಬಿಂಬಿಸಿರುವುದು ತಪ್ಪಾದ ನಿರ್ಧಾರವಾಗಿತ್ತು. ಆದರೆ ಬೈಕ್‌ನಲ್ಲಿ ಕುಟಂಬ ಸಮೇತ ಪ್ರಯಾಣಿಸುವವರ ಕಷ್ಟಗಳನ್ನು ಅರಿತು ಅಂತವರ ಸುರಕ್ಷಿತ ಪಯಣವನ್ನು ಖಾತ್ರಿಪಡಿಸುವುದು ನಮ್ಮ ಇರಾದೆಯಾಗಿತ್ತು ಎಂದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಎಪ್ರಿಲ್‌ನಿಂದ ಅಕ್ಟೋಬರ್ ವರೆಗೆ ಕೇವಲ 12,322 ಯುನಿಟ್‌ಗಳಷ್ಟೇ ನ್ಯಾನೋ ಮಾರಾಟವಾಗಿದೆ. ಕಳೆದ ಬಾರಿಯಿದು 43,627 ಯುನಿಟ್‌ಗಳಷ್ಟಿತ್ತು. ಈ ಮೂಲಕ ಶೇಕಡಾ 71.7ರಷ್ಟು ಕುಸಿತ ಕಂಡಿರುವುದು ಈ ಸಣ್ಣ ಕಾರಿನ ವೈಫಲ್ಯವನ್ನು ಎತ್ತಿ ಹಿಡಿಯುತ್ತಿದೆ.

ಹಾಗಿದ್ದರೂ ಅಕ್ಟೋಬರ್ ತಿಂಗಳಿನಲ್ಲಷ್ಟೇ ಲಾಂಚ್ ಆಗಿರುವ ನ್ಯಾನೋ ಸಿಎನ್‌ಜಿ ಮತ್ತು ಪೆಟ್ರೋಲ್ ಬೈ ಫ್ಯೂಯಲ್ ಸಿಸ್ಟಂ ಉತ್ತೇಜನ ನೀಡುವ ನಿರೀಕ್ಷೆಯಲ್ಲಿದೆ.

ಆರಂಭದಿಂದಲೇ ನ್ಯಾನೋಗೆ ತುಂಬಾನೇ ಸಮಸ್ಯೆಗಳು ಎದುರಿದ್ದವು. ಇದರ ಬಂಗಾಳ ಸಿಂಗೂರ್ ಘಟಕವನ್ನು ರಾಜಕೀಯ ಸಮಸ್ಯೆಗಳಿಂದಾಗಿ ಗುಜರಾತ್‌ನ ಸನಂದ್‌ಗೆ ವರ್ಗಾಯಿಸಲಾಗಿತ್ತು.

2009 ಮಾರ್ಚ್‌ನಲ್ಲಿ ಬಿಡುಗಡೆಗೊಂಡಿದ್ದ ಟಾಟಾ ನ್ಯಾನೋ ದೆಹಲಿ ಎಕ್ಸ್ ಶೋ ರೂಂ ದರ 1.45ರಿಂದ 2.65 ಲಕ್ಷ ರು.ಗಳ ವರೆಗಿದೆ.


Click it and Unblock the Notifications








