ಸುರಕ್ಷಿತ ಬೈಕ್ ಸವಾರಿಗೆ ಹತ್ತಾರು ಸಲಹೆಗಳು

ಪತ್ರಿಕೆ ಪುಟ ತೆರೆದರೆ ಸಾಕು. ನಿತ್ಯ ಇಂತಹ ವರದಿಗಳು ಕಣ್ಣಮುಂದೆ ಕಾಣುತ್ತವೆ. ಎಳೆಯ ಪ್ರಾಯದ ಯುವಕರು, ಮದುವೆಯಾಗಿ ತಿಂಗಳು ಕಳೆದವರು, ನವವರರು, ಕಾಲೇಜು ವಿದ್ಯಾರ್ಥಿಗಳು, ಹರೆಯದ ಹುಡುಗರು ಸೇರಿದಂತೆ ಯಾರನ್ನೂ ಬೈಕ್ ಅಪಘಾತ ಬಿಡುವುದಿಲ್ಲ.
ಬೈಕ್ ಸವಾರಿ ಮಾಡುವಾಗ ಒಂದು ಸೆಕೆಂಡಿನ ನಿರ್ಲಕ್ಷ್ಯಕ್ಕೆ ಸಾವಿನ ಕರ ನೀಡಬೇಕಾಗುತ್ತದೆ. ನಿರ್ಲಕ್ಷ್ಯ, ಆವೇಶದ ಬೈಕ್ ರೈಡಿನಿಂದಾಗಿ ಪ್ರಾಣಕಳೆದುಕೊಳ್ಳುತ್ತಾರೆ. ನಿರ್ಲಕ್ಷ್ಯದ ಸವಾರಿಯಿಂದ ಅಪಘಾತವಾಗಿ ರಸ್ತೆಯಲ್ಲಿ ಮಖಾಡೆ ಮಲಗುತ್ತಾರೆ. ಅವರನ್ನೇ ನಂಬಿರುವ ಅಪ್ಪ, ಅಮ್ಮ, ಹೆಂಡತಿ ಮಕ್ಕಳ ಕಣ್ಣೀರ ಬದುಕು ಆರಂಭವಾಗುತ್ತದೆ.
ಬೈಕ್ ಸವಾರಿಯಲ್ಲಿ ವಹಿಸುವ ಎಚ್ಚರ ನಮ್ಮ ಪ್ರಾಣ ಉಳಿಸಬಹುದು. ಸುರಕ್ಷಿತ ಬೈಕ್ ಸವಾರಿಗೆ ಇಲ್ಲೊಂದಿಷ್ಟು ಸಲಹೆಗಳಿವೆ.
ಸುರಕ್ಷಿತ ಬೈಕ್ ಸವಾರಿಗೆ ಸಲಹೆಗಳು
* ಮನಸ್ಸು ಉದ್ವಿಗ್ನವಾಗಿದ್ದಾಗ, ಚಂಚಲವಾಗಿದ್ದಾಗ, ಕ್ಷೋಭೆಯಲ್ಲಿದ್ದಾಗ ಬೈಕ್ ರೈಡ್ ಬೇಡ.
* ಮಾನಸಿಕವಾಗಿ ಮತ್ತು ದೈಹಿಕವಾಗಿ ಬೈಕ್ ಸವಾರಿಗೆ ಸಮರ್ಥರಾಗಿದ್ದೀರಾ ತಿಳಿದುಕೊಳ್ಳಿ.
* ಕುಡಿದು ಅಥವಾ ಅಮಲು ಪದಾರ್ಥ ಸೇವಿಸಿ ಬೈಕ್ ರೈಡ್ ಮಾಡಬಾರದು.
* ಹೆಲ್ಮೆಟ್, ಜಾಕೆಟ್ ಇತ್ಯಾದಿ ಸುರಕ್ಷಿತ ಸಾಧನಗಳನ್ನು ಧರಿಸಬೇಕು.
* ಸ್ಮೂತಾಗಿ ಬೈಕ್ ಸವಾರಿ ಮಾಡಿ. ಆವೇಶ ಬೇಡ. ನಿಧಾನವೇ ಪ್ರಧಾನ.
* ತುರ್ತು ಸಂದರ್ಭದಲ್ಲಿ: ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ಇಲ್ಲಿ ಕೆಲವೇ ಸೆಕೆಂಡುಗಳ ಸಮಯ ನಿಮಗಿರುತ್ತದೆ. ತಕ್ಷಣ ನಿರ್ಧಾರ ತೆಗೆದುಕೊಂಡು ಹೆಚ್ಚು ಸ್ಥಳಾವಕಾಶ, ಬದುಕುವ ಅವಕಾಶವಿರುವತ್ತ ಬೈಕ್ ಸಾಗುವಂತೆ ಮಾಡಿ.
* ತಲೆ ಉಪಯೋಗಿಸಿ: ಬೈಕ್ ಸವಾರಿ ಮಾಡುವಾಗ ಇಷ್ಟಬಂದಂತೆ ಸವಾರಿ ಮಾಡಬೇಡಿ. ಹೆಚ್ಚು ಸುರಕ್ಷಿತವಿರುವ ಕಡೆ ರೈಡ್ ಮಾಡಿ. ಉದಾಹರಣೆಗೆ ತಿರುವುಗಳ ಬಳಿ ನಿಮ್ಮ ಬೈಕ್ ಗೆ ವೇಗವಾಗಿ ಕಾರು ಎದುರಾಗಬಹುದು. ಬೈಕ್ ಸವಾರಿಯಲ್ಲಿ ಪ್ರಾವಿಣ್ಯತೆ ಪಡೆದಂತೆ ಇಂತಹ ಸಂದರ್ಭದಲ್ಲಿ ಪಾರಾಗುವ ಟ್ರಿಕ್ ಗಳು ಅರಿವಾಗುತ್ತವೆ.
* ತಿರುವು, ದುರ್ಗಮ, ಅಪಾಯಕಾರಿ ರಸ್ತೆಗಳಲ್ಲಿ ವೇಗ ಕಡಿಮೆ ಮಾಡಿ.
* ಬೈಕ್ ರೈಡಿಂಗ್ ಮಾಡುತ್ತಿರುವಾಗ ಮೊಬೈಲ್ ಫೋನ್ ಬಳಸದಿರಿ.
* ಅಂತರ ಕಾಯ್ದುಕೊಳ್ಳಿ. ನಿಮ್ಮ ಬೈಕಿಗೂ ರಸ್ತೆಯಲ್ಲಿರುವ ವಾಹನಗಳಿಗೆ ನಿರ್ಧಿಷ್ಟ ಅಂತರ ಕಾಯ್ದುಕೊಳ್ಳಿರಿ.
* ಪ್ರಾಕ್ಟಿಸ್ ಮಾಡಿ: ಪ್ರತಿದಿನ ಬೈಕ್ ಸವಾರಿಯಲ್ಲಿ ಹೊಸ ಹೊಸ ಸುರಕ್ಷಿತ ವಿಧಾನಗಳು ನಿಮ್ಮ ಅನುಭವಕ್ಕೆ ಬರುತ್ತವೆ. ಅವನ್ನೆಲ್ಲ ಪಾಲಿಸಿ ಸುರಕ್ಷಿತವಾಗಿ ಬೈಕ್ ರೈಡ್ ಮಾಡಿ.


Click it and Unblock the Notifications