ವಾಹನ ಖರೀದಿಗೆ ಮುನ್ನ ಈ ಸರಳ ಸಲಹೆ ನೆನಪಿರಲಿ

ಕಾರ್ ಡೀಲ್ ನಲ್ಲಿ ಅವಸರವೇ ಅಪಾಯ. ಅಯ್ಯೋ ಆಫೀಸ್ ಗೆ ಹೋಗೋಕೆ ಕಾರಿಲ್ಲ ಅಂತ ಅರ್ಜೆಂಟಲ್ಲಿ ಕಾರು ಖರೀದಿಸಬೇಡಿ. ಸ್ವಲ್ಪ ದಿನ ಬಸ್ಸಲ್ಲಿ ಹೋದರೂ ಸರಿ. ಕಾರು ಖರೀದಿ ಮತ್ತು ಮದುವೆ ವಿಷಯದಲ್ಲಿ ಅವಸರ ಇರಬಾರದಂತೆ. ಮುಂದೆ ಅನುಭವಿಸಬೇಕಾಗುತ್ತದೆ.
ಮೊದಲು ಅಂತರ್ಜಾಲಕ್ಕೆ ಧನ್ಯವಾದ ಹೇಳಬೇಕು. ಕಾರಿನ ಮಾಡೆಲ್ ಕುರಿತು ಸರಿಯಾದ ಮಾಹಿತಿ ಪಡೆಯಲು ಇಂಟರ್ ನೆಟ್ ನಿಮ್ಮ ಸ್ನೇಹಸೇತು. ಇಲ್ಲಿ ನಿಮಗೆ ಕಾರಿನ ಸಂಪೂರ್ಣ ಮಾಹಿತಿ ದೊರಕುತ್ತದೆ.
ನೆಂಟರಲ್ಲಿ ಮಾತನಾಡುವ ಹಾಗೇ ಕಾರು ಡೀಲರುಗಳೊಂದಿಗೆ ಮಾತನಾಡಬೇಡಿ. ನೀವು ಖರೀದಿಸುವ ಕಾರಿನಲ್ಲಿ ಕಿಸೆ ತುಂಬಿಸಿಕೊಳ್ಳುವುದು ಹೇಗೆ ಅಂತ ಅವರು ಸದಾ ಯೋಚಿಸುತ್ತಿರುತ್ತಾರೆ.
ಅಂತರ್ಜಾಲದಲ್ಲಿ ಸ್ವಲ್ಪ ತಾಳ್ಮೆಯಿಂದ ಹುಡುಕಿದರೆ ಕಾರಿನ ಹೋಲ್ ಸೆಲ್ ದರ ನಿಮಗೆ ಅರಿವಾಗುತ್ತದೆ. ಹೋಲ್ ಸೇಲ್ ದರ ಎಷ್ಟು ಎಂದು ನಿಮಗೆ ತಿಳಿದಿದ್ದರೆ ಡೀಲರ್ ನೊಂದಿಗೆ ಸರಿಯಾಗಿ ಡೀಲ್ ಮಾಡಬಹುದು. ಹೀಗಾಗಿ ಡೀಲರ್ ಬಳಿ ಸಾಗುವಾಗ ನಿಮ್ಮಲ್ಲಿ ಕ್ಯಾಲ್ಕ್ಯುಲೇಟರ್ ಜೊತೆಗಿರಲಿ.
ನೀವು ಕಾರಿನಲ್ಲಿ ಯಾವೆಲ್ಲ ಫೀಚರು ಇರಬೇಕೆಂದು ಬಯಸುತ್ತೀರಿ. ಅಂತಹ ಕಾರು ಸಿಗುವರೆಗೂ ಕಾಯಿರಿ. ಅದರಲ್ಲಿರುವ ಫೀಚರುಗಳು ಸಾಕು ಅನಿಸಿದರೆ ಖರೀದಿಸಬಹುದು. ನಿಮ್ಮ ಸ್ನೇಹಿತರಲ್ಲಿ, ಬಂಧುಗಳಲ್ಲಿ, ಪರಿಚಿತರಲ್ಲಿ ಕಾರುಗಳಿದ್ದರೆ ಅವರಲ್ಲಿ ಕೊಂಚ ವಿಚಾರಿಸಿ.
ಡೀಲರ್ ಜೊತೆ ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ಇಷ್ಟ ಆಯಿತೇ ಇಲ್ಲವೇ ಸರಿಯಾಗಿ ನಿರ್ಧರಿಸಿಕೊಳ್ಳಿ. ನೀವು ಕಾರಿನಲ್ಲಿ ಟೆಸ್ಟ್ ಡ್ರೈವ್ ಮಾಡುವಾಗ ಕೆಲವೊಮ್ಮೆ ಯಾಕೋ ಇಷ್ಟವಾಗದೇ ಇರಬಹುದು. ನೀವು ಹಿಂದೆ ಕಾರೊಂದನ್ನು ಉಪಯೋಗಿಸುತ್ತಿದ್ದರೆ ಅದರಷ್ಟು ಕಂಫರ್ಟ್ ಇಲ್ಲ ಅನಿಸಬಹುದು.
ಇನ್ನೊಂದು ವಿಷಯವಿದೆ. ಯಾರಲ್ಲೂ ಹೇಳಬೇಡಿ. ನೀವು ಯಾವಾಗ ಕಾರು ಖರೀದಿಸಬಹುದು ಗೊತ್ತ. ಸಾಧ್ಯವಾದರೆ ತಿಂಗಳ ಅಂತ್ಯದ ಡೇಟ್ ಫಿಕ್ಸ್ ಮಾಡಿ. ಯಾಕೆಂದರೆ ಡೀಲರುಗಳಿಗೆ ತಿಂಗಳ ಟಾರ್ಗೆಟ್ ಇರುತ್ತದೆ. ನೀವು ನಿಮಗೆ ಬೇಕಾದ ದರಕ್ಕೆ ಬಾರ್ಗೈನ್ ಮಾಡಬಹುದು. ಕೊನೆಗೆ ಅವರು ನಿಮ್ಮ ಡೀಲ್ ಗೆ ಒಪ್ಪಬಹುದು.
ಇದೇ ಸಮಯದಲ್ಲಿ ಹಳೆ ಕಾರು ಮಾರಾಟ ಮಾಡಲು ನೀವು ಆನ್ ಲೈನ್ ನಲ್ಲಿ ಜಾಹೀರಾತು ನೀಡಬಹುದು. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಜಾಹೀರಾತು ಮೂಲಕ ಅತ್ಯುತ್ತಮ ಡೀಲ್ ಕುದುರಿಸಬಹುದು.
ಕಾರು ಖರೀದಿಸುವಾಗ ಅವರು ನೀಡುವ ಪ್ರಿಂಟೆಡ್ ದಾಖಲೆ ಪತ್ರಗಳನ್ನು ಸರಿಯಾಗಿ ಓದಿಕೊಳ್ಳಿ. ಅದರ ಮಾಹಿತಿ, ಸರ್ವಿಸಿಂಗ್, ವಾರೆಂಟ್ ಇತ್ಯಾದಿ ನಿಯಮಗಳು ಅರ್ಥವಾಗದೇ ಇದ್ದಲ್ಲಿ ಅವರಲ್ಲಿ ಕೇಳಿ ಖಚಿತಪಡಿಸಿಕೊಳ್ಳಿ.
ಕಾರು ಖರೀದಿಸುವ ಮುನ್ನ ಸಾಕಷ್ಟು ಪ್ರಶ್ನೆಗಳನ್ನು ಡೀಲರ್ ಬಳಿ ಕೇಳಲು ಮರೆಯದಿರಿ. ಕಾರು ಖರೀದಿ ಅಂದ್ರೆ ಡೀಲ್. ಅಲ್ಲಿ ಒಂದಿಷ್ಟು ಥ್ರಿಲ್ ಇರಬೇಕು. ಪರ್ಸ್ ಬಿಚ್ಚಿ ದುಡ್ಡುಕೊಡೋ ಮುನ್ನ "ಡೀಲ್ ಮಗಾ ಡೀಲ್". ಇಲ್ಲದಿದ್ದರೆ ಮಕ್ಮಲ್ ಟೋಪಿ ಗ್ಯಾರಂಟಿ.


Click it and Unblock the Notifications








