ಡೀಸೆಲ್ ಕಾರೆಂದ್ರೆ ಡೇಂಜರಪ್ಪೋ ಹುಷಾರಾಗಿರಿ!!

ಡೀಸೆಲ್ ಕಾರು ಖರೀದಿಸುವುದು ತಪ್ಪೆಂದು ನಾವು ಹೇಳುತ್ತಿಲ್ಲ. ಆದರೆ ಡೀಸೆಲ್ ಕಾರು ಖರೀದಿಸುವುದು ಎಷ್ಟು ಸೂಕ್ತ? ಅದು ತಾಂತ್ರಿಕವಾಗಿ ಎಷ್ಟು ಭಿನ್ನ? ಡೀಸೆಲ್ ಕಾರು ಏನು ಬಯಸುತ್ತದೆ? ಡೀಸೆಲ್ ಕಾರು ಯಾರಿಗೆ ಸೂಕ್ತವಲ್ಲ? ಇತ್ಯಾದಿ ಪ್ರಶ್ನೆಗಳಿಗೆ ನಾವು ಈ ಹಿಂದೆಯೇ ಉತ್ತರ ನೀಡಿದ್ದೇವೆ.
ಅದರ ಟೆಕ್ ಭಿನ್ನತೆ ಹಾಳಾಗಿ ಹೋಗಲಿ. ನಮಗೆ ಮೈಲೇಜ್ ಮಾತ್ರ ಸಾಕು ಅಂತ ಕಣ್ಣು ಮುಚ್ಚಿ ಖರೀದಿಸುವರನ್ನು ಕೊಂಚ ಭಯಪಡಿಸುವುದು ಈ ಲೇಖನದ ಉದ್ದೇಶ. ಯಾಕೆಂದರೆ ಕೆಲವು ವರ್ಷ ಕಳೆದು ನಾವು ಮಾಹಿತಿ ನೀಡಿಲ್ಲ ಅಂತ ನೀವು ಆರೋಪಿಸಬಾರದು.
ಸದ್ಯದ ಡೀಸೆಲ್ ಕಾರು ಟ್ರೆಂಡ್ ಕುರಿತು ಕೊಂಚ ಗಮನ ಹರಿಸೋಣ. ಪೆಟ್ರೋಲ್ ದರ ಗಗನಕ್ಕೆ ಏರುತ್ತಿರುವುದರಿಂದ ಎಲ್ಲರೂ ಡೀಸೆಲ್ ಕಾರು ಖರೀದಿಸುತ್ತಿದ್ದಾರೆ. ಕಾರು ಕಂಪನಿಗಳಿಗೆ ಮುಂದಿನ ಅನಾಹುತದ ಅರಿವಿದ್ದರೂ ಮಾರಾಟ ಹೆಚ್ಚಾಗಲಿ ಎಂದು ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ.
ಮುಂದಿನ ಅನಾಹುತ? ಏನದು ಎಂದು ಕೇಳುವಿರ? ಇದೀಗ ಡೀಸೆಲ್ ಗೆ ಸಾಕಷ್ಟು ಸಬ್ಸಿಡಿ, ರಿಯಾಯಿತಿ, ಅಬಕಾರಿ ಸುಂಕ ವಿನಾಯಿತಿಯಿದೆ. ಆದರೆ ಇದು ಹೀಗೆಯೇ ಇರದು ಎಂಬುದು ಕಟು ವಾಸ್ತವ. 2012-13 ಕೇಂದ್ರ ಬಜೆಟಿನಲ್ಲಿಯೇ ಡೀಸೆಲ್ ಕಾರು ಗ್ರಾಹಕರಿಗೆ ಷಾಕ್ ನೀಡುವಂತಹ ವಿಷಯ ಇರುವ ನಿರೀಕ್ಷೆಯಿದೆ.
ಮುಂದಿನ ಬಜೆಟ್ ನಲ್ಲಿ ಡೀಸೆಲ್ ಕಾರುಗಳ ಮೇಲೆ ಅಬಕಾರಿ ಸುಂಕ ಹೆಚ್ಚಾಗುವುದು ಗ್ಯಾರಂಟಿ. ಇದು ಕಾರು ಕಂಪನಿಗಳಿಗೂ ಗೊತ್ತಿದೆ. ಆದರೆ ಪೆಟ್ರೋಲ್ ಕಾರು ಮಾರಾಟ ಇಳಿಕೆ ಕಂಡಿರುವುದರಿಂದ ಡೀಸೆಲ್ ಕಾರುಗಳತ್ತ ಮುಖ ಮಾಡುವುದು ಅವುಗಳ ಸದ್ಯದ ಅನಿವಾರ್ಯತೆ.
ಮುಂದಿನ ವರ್ಷದಿಂದ ಪೆಟ್ರೋಲ್ ಕಾರುಗಳಿಗೆ ಮತ್ತೆ ಬೇಡಿಕೆ ಬರಲಿದೆ. ಯಾಕೆಂದರೆ ಡೀಸೆಲ್ ಕಾರು ಖರೀದಿ ಆ ಸಮಯದಲ್ಲಿ ದುಬಾರಿಯಾಗಲಿದೆ. ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಡುವೆ ಅಬಕಾರಿ ಸುಂಕ ಬೃಹತ್ ಕಂದಕ ಸೃಷ್ಟಿಸುವ ನಿರೀಕ್ಷೆಯಿದೆ.
ಈ ಕುರಿತು ಈಗಾಗಲೇ ಪ್ರಮುಖ ಕಾರು ಕಂಪನಿಗಳ ಮುಖ್ಯಸ್ಥರು ಸೂಚನೆ ನೀಡಿದ್ದಾರೆ. "ಡೀಸೆಲ್ ಕಾರುಗಳಿಗೆ ಅತ್ಯಧಿಕ ಸುಂಕ ಹೇರುವುದು ಗ್ಯಾರಂಟಿ. ಇದು ಪೆಟ್ರೋಲ್ ಕಾರುಗಳ ಮಾರಾಟ ಹೆಚ್ಚಿಸಲಿದೆ" ಎಂದು ಮಾರುತಿ ಸುಜುಕಿ ಚೇರ್ಮನ್ ಆರ್ ಸಿ ಭಾರ್ಗವ ಹೇಳಿದ್ದಾರೆ.
ಯಾರು ಡೀಸೆಲ್ ಕಾರು ಖರೀದಿಸಬಹುದು?: ನೀವು ಸುದೀರ್ಘ ಸಮಯ ಕಾರನ್ನು ಇಟ್ಟುಕೊಳ್ಳಲು ಬಯಸುವಿರಾದರೆ ಪೆಟ್ರೋಲ್ ಎಂಜಿನ್ ಕಾರು ಸೂಕ್ತ. ಆದರೆ ಡೀಸೆಲ್ ತಂತ್ರಜ್ಞಾನ ಈಗ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಪೆಟ್ರೋಲ್ ಕಾರು ಎಂಜಿನ್ ಸರಿಸಮವಾಗಿ ಬೆಳೆದಿಲ್ಲ ಅನ್ನೋದು ನಿಜ. ದಿನಕ್ಕೆ 100-200 ಕಿಲೋಮೀಟರ್ ಪ್ರಯಾಣ ನಿಮಗೆ ಅನಿವಾರ್ಯವಾದರೆ ಡೀಸೆಲ್ ಕಾರು ಖರೀದಿಸಿ. ಇಲ್ಲವಾದರೆ ಡೀಸೆಲ್ ಕಾರು ವ್ಯರ್ಥ.
ಹೆಚ್ಚಿನ ಕಂಪನಿಗಳು ಡೀಸೆಲ್ ಕಾರಿನ ಸರ್ವಿಸ್ ವೆಚ್ಚದ ಕುರಿತು ಗ್ರಾಹಕರಿಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಡೀಸೆಲ್ ಕಾರು ನಿರ್ವಹಣೆ ಯಾವತ್ತಿಗೂ ದುಬಾರಿ. ನಿಯಮಿತವಾಗಿ ಆಯಿಲ್ ಬದಲಾಯಿಸುತ್ತಿರಬೇಕು. ನಿಯಮಿತವಾಗಿ ಸರ್ವಿಸ್ ಮಾಡಿಸುತ್ತಲೇ ಇರಬೇಕು. ಆದರೆ ಪೆಟ್ರೋಲ್ ಕಾರುಗಳಿಗೆ ಇಷ್ಟೊಂದು ಮೇಟೆಂನ್ಸ್ ಅಗತ್ಯವೇ ಇಲ್ಲ.
ಒಂದು ವಿಷಯ ತಿಳಿದುಕೊಳ್ಳಬೇಕು. ಡೀಸೆಲ್ ಕಾರಿನ ಮೆಕಾನಿಸಂ ಪೆಟ್ರೋಲ್ ಎಂಜಿನಿಗಿಂತ ತುಂಬಾ ಭಿನ್ನ. ಅದು ಅತ್ಯಧಿಕ ಚಾಲನೆ ಮಾಡಿದರೆ ಮಾತ್ರ ಲಾಭದಾಯಕ.
ಇಲ್ಲಾರಿ ನಮಗೆ ಪೆಟ್ರೋಲ್ ಕಾರು ಬೇಡ. ಎಲ್ ಪಿಜಿನೂ ಬೇಡ. ಎಲೆಕ್ಟ್ರಿಕ್ ಕಾರು ಅಂತೂ ಬೇಡವೇ ಬೇಡ. ನಮಗೆ ಡೀಸೆಲ್ ಕಾರೇ ಬೇಕು ಎನ್ನುವಿರಾದರೆ ನಮ್ಮ ಸಲಹೆ ಇಷ್ಟೇ. ಮುಂದಿನ ಬಜೆಟ್ ತನಕ ಕಾಯುವ ತಾಳ್ಮೆ ನಿಮಗಿರಲಿ.


Click it and Unblock the Notifications








