ಎಚ್ಚರ! ಡ್ರೈವಿಂಗ್ ವೇಳೆ ನಿದ್ರಿಸುವೀರಾ? ಕಾದಿದೆ ಅಪಾಯ
ಕಾರು ಚಾಲನೆ ವೇಳೆ ನಿದ್ರಾ ದೇವಿ ಕಣ್ಣಂಚಿಗೆ ಜಾರದಂತೆ ನೋಡಿಕೊಳ್ಳುವುದು ಅತಿ ಮಹತ್ವವೆನಿಸುತ್ತದೆ.
ನೀವು ಎಷ್ಟೇ ಜಾಣ್ಮೆಯ, ತಾಳ್ಮೆಯ ಹಾಗೂ ಅನುಭವಸ್ಥ ಚಾಲಕರೇ ಆಗಿದ್ದರೂ ರಾತ್ರಿ ವೇಳೆಯಲ್ಲಿ ದೀರ್ಘ ದೂರ ಪ್ರಯಾಣಿಸುವ ವೇಳೆಯಲ್ಲಿ ನಿದ್ರಾ ದೇವಿ ಕಣ್ಣಂಚಿಗೆ ಬಂದೇ ಬಿಡುತ್ತಾಳೆ. ಒಂದು ಕ್ಷಣಕ್ಕೆ ಲೋಕವನ್ನೇ ಮರೆತರೂ ಸಹ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ನಿದ್ರೆ ಎಷ್ಟೊಂದು ಅಪಾಯಕಾರಿ ಎಂಬುದನ್ನು ಮನಗಾಣಬೇಕಾಗುತ್ತದೆ. ಈ ಎಲ್ಲದರ ನಿಟ್ಟಿನಲ್ಲಿ ನಿಮ್ಮ ನೆಚ್ಚಿನ ವಾಹನ ಜಾಲತಾಣ ಕನ್ನಡ ಡ್ರೈವ್ ಸ್ಪಾರ್ಕ್ ಕೆಲವೊಂದು ಮಹತ್ವಪೂರ್ಣ ಸಲಹೆಗಳನ್ನು ಓದುಗರ ಜೊತೆಗೆ ಹಂಚಿಕೊಳ್ಳಲಿದ್ದೇವೆ.

ರಾತ್ರಿ ಪ್ರಯಾಣದ ವೇಳೆ ಚಾಲಕನ ಏಕಾಗ್ರತೆಗೆ ಭಂಗವುಂಟಾಗಬಾರದು. ತುಂಬಾನೇ ಸುಸ್ತಾಗಿದ್ದಲ್ಲಿ ರಾತ್ರಿ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳಿತು.

ಚಾಲಕನಿಗೆ ನಿದ್ರೆ ಬರದಂತೆ ನೋಡಿಕೊಳ್ಳಲು ಸಹ ಪ್ರಯಾಣಿಕ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವುದು ಅಥವಾ ಏಕಾಂಗಿಯಾಗಿ ಗಾಡಿ ಓಡಿಸುವಾಗ ಸಂಗೀತವನ್ನು ಆಲಿಸುವುದನ್ನು ರೂಢಿ ಮಾಡಿಕೊಳ್ಳಬೇಕು.

ಇನ್ನು ಪದೇ ಪದೇ 5-10 ನಿಮಿಷಗಳಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಹೆಚ್ಚು ಸೂಕ್ತವೆನಿಸಲಿದೆ. ಈ ವೇಳೆಯಲ್ಲಿ ಚಹಾ ಕುಡಿಯುವುದು ಹಾಗೂ ಮುಖ ತೊಳೆಯುವುದರಿಂದ ರಿಫ್ರೆಶ್ ಆಗಲಿದೆ.

ರಾತ್ರಿ ಪ್ರಯಾಣದ ವೇಳೆ ನಿದ್ರೆ ಆವರಿಸುವ ಭೀತಿ ಇರುವುದನ್ನು ಮನಗಂಡ ತಕ್ಷಣವೇ ವಾಹನವನ್ನು ಸುರಕ್ಷಿತ ಜಾಗದಲ್ಲಿ ಬದಿಗೆ ಸರಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ. ಈ ವೇಳೆ ಹಜಾರ್ಡ್ ಲೈಟ್ ಆನ್ ಮಾಡಿಟ್ಟುಕೊಳ್ಳಲು ಮರೆಯದಿರಿ.

ವೇಗ ಮಿತಿ ಪಾಲಿಸುವುದು ಅತಿ ಮುಖ್ಯ. ನಿದ್ರೆ ಆವರಿಸಿರುವುದರಿಂದ ವೇಗದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಭೀತಿಯಿರುತ್ತದೆ. ಈ ಬಗ್ಗೆಯೂ ಎಚ್ಚರ ವಹಿಸಿಕೊಳ್ಳುವುದು ಒಳ್ಳೆಯದು.

ನಿದ್ರೆ ಕಣ್ಣು ಬಿಟ್ಟು ಹೋಗುವುದಿಲ್ಲ ಎಂದಾದ್ದಲ್ಲಿ ಕಾರಲ್ಲೇ ನಿದ್ರಿಸುವುದು ಒಳಿತು. ಇನ್ನು ಸ್ವಲ್ಪ ಹೊತ್ತು ವಾಹನ ನಿಲುಗಡೆ ಮಾಡಿ ಹೊರಗಡೆಯ ಪ್ರಶಾಂತ ವಾಯು ಸೇವಿಸುವುದು ಉತ್ತಮವಾಗಿರಲಿದೆ.

ಸ್ವಲ್ಪ ಹೊತ್ತು ಕಾರಿನ ಸೈಡ್ ಮಿರರ್ ಜಾರಿಸುವ ಮೂಲಕವೂ ಹೊರಗಿನಿಂದ ಗಾಳಿ ಬೀಸುವುದರಿಂದ ನಿಮಗೆ ನಿದ್ರೆ ಆವರಿಸುವುದನ್ನು ತಡೆಯಲಿದೆ.

ಇಲ್ಲಿ ಎಸಿ ಕೂಡಾ ಆನ್ ಮಾಡಿಟ್ಟುಕೊಳ್ಳುವುದರಿಂದ ಸಮರ್ಪಕವಾಗಿ ಕೆಲಸ ಮಾಡಲಿದೆ. ಡ್ರೈವಿಂಗ್ ವೇಳೆ ಹೆಚ್ಚು ಚಳಿ ಆವರಿಸಿದಾಗ ನಿದ್ರೆಯ ಕಂಪನ ಉಂಟಾಗಲಾರದು.

ಇಷ್ಟೆಲ್ಲ ಕಸರತ್ತು ಮಾಡಿಯೂ ನಿದ್ರೆ ಬಿಟ್ಟು ಹೋಗದಿದ್ದಲ್ಲಿ ಕಾರಲ್ಲೇ ನಿದ್ರಿಸುವುದು ಲೇಸು. ಇದಕ್ಕಾಗಿ ಕಾರಿನ ಢಿಕ್ಕಿಯಲ್ಲಿ ಕಂಬಳಿ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ.

ಇದಕ್ಕಾಗಿ ಸುರಕ್ಷಿತ ಜಾಗದಲ್ಲೇ ಕಾರು ಪಾರ್ಕ್ ಮಾಡಲು ಆರಿಸಬೇಕು. ಯಾಕೆಂದರೆ ರಾತ್ರಿ ವೇಳೆಯಲ್ಲಿ ಹೆದ್ದಾರಿ ಅಥವಾ ಇತರೆ ನಿರ್ಜನ ಪ್ರದೇಶದಲ್ಲಿ ಕಳ್ಳರ ಹಾವಳಿಯುಂಟಾಗುವ ಭೀತಿಯಿರುತ್ತದೆ.

ಮುಚ್ಚಿದ ಕಾರಲ್ಲಿ ಎಸಿ ಆನ್ ಮಾಡಿಟ್ಟುಕೊಂಡು ತುಂಬಾ ಹೊತ್ತು ಮಲಗುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಉಸಿರಾಟದ ತೊಂದರೆಯನ್ನು ಎದುರಿಸುವ ಸಂಭವವಿರುತ್ತದೆ.

ಹೊರಗಿನಿಂದ ತಾಜಾ ಗಾಳಿ ಪ್ರವೇಶವಾಗದೇ ಇರುವುದರಿಂದ ಉಸಿರುಗಟ್ಟುವಿಕೆ ನಿಮ್ಮನ್ನು ಕಾಡಬಹುದು. ಇಲ್ಲಿ ಕಾರ್ಬನ್ ಮೊನೊಕ್ಸೈಡ್ ವಿಷಾಣು ವಿಲನ್ ರೂಪದಲ್ಲಿ ಪ್ರಾಣಕ್ಕೆ ಅಪಾಯವನ್ನು ಒಡ್ಡಲಿದೆ.

ಸರಿಯಾಗಿ ಕೆಲಸ ಮಾಡದ ಎಸಿ ಸಹ ಭೀತಿಯನ್ನು ಒಡ್ಡಲಿದೆ. ಹಾಗಾಗಿ ನಿರಂತರ ಅಂತರಾಳದಲ್ಲಿ ಎಸಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಬೇಕಾಗುತ್ತದೆ.

ಕಾರಿನಲ್ಲಿ ಗ್ಲಾಸ್ ಮುಚ್ಚಿರುವುದರಿಂದ ಏರ್ ಸರ್ಕ್ಯೂಲೇಷನ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಿಂದ ಕಾರಿನೊಳಗೆ ಆಮ್ಲಜನಕದ ಕೊರತೆ ಕಾಡುತ್ತದೆ. ಪರಿಣಾಮವೆಂಬಂತೆ ಪ್ರಯಾಣಿಕ ಉಸಿರುಗಟ್ಟಿ ಸಾಯುವ ಅಪಾಯ ಕಾದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕಾಗಿ ವಿಂಡೋಗಳನ್ನು ಸ್ವಲ್ಪ ತೆರೆದಿಟ್ಟುಕೊಳ್ಳುವುದು ಹೆಚ್ಚು ಸೂಕ್ತವೆನಿಸುವುದು. ವಾಹನ ತಜ್ಞರ ಪ್ರಕಾರ ತುಂಬಾ ಹೊತ್ತು ಕಾರಲ್ಲಿ ನಿದ್ರಿಸುವುದು ಅಪಾಯಕಾರಿಯೆನಿಸಿಕೊಂಡಿದೆ.


Click it and Unblock the Notifications








